ಬೆಂಗಳೂರು: ಅಸಂಘಟಿತ ಕಾರ್ಮಿಕರ ಕಲ್ಯಾಣಕ್ಕಾಗಿ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಗೆ ಒಂದು ಸಾವಿರ ಕೋಟಿ ರೂಪಾಯಿ ಅನುದಾನ ನೀಡುವುದು ಸೇರಿದಂತೆ ಹಲವು ಬೇಡಿಕೆಗಳ ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಹಮಾಲಿ ಕಾರ್ಮಿಕರ ಒಕ್ಕೂಟ ಇದೇ 18ರಂದು ವಿಧಾನಸೌಧ ಚಲೋ ಹಾಗೂ ಕೃಷಿ ಮಾರಾಟ ಮಂಡಳಿ ಮುತ್ತಿಗೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಕೆ.ಮಹಾಂತೇಶ, ಬೆ.10 ಗಂಟೆಗೆ ನಗರ ರೈಲ್ವೆ ನಿಲ್ದಾಣದಲ್ಲಿ ಪ್ರಾರಂಭವಾಗುವ ಜಾಥಾ ವಿಧಾನಸೌಧದ ಬಳಿ ಸಮಾವೇಶಗೊಂಡು, ನಂತರ ಕೃಷಿ ಮಾರಾಟ ಮಂಡಳಿಗೆ ಮುತ್ತಿಗೆ ಹಾಕಲಾಗುವುದು ಎಂದರು.
ರಾಜ್ಯದಲ್ಲಿ ಒಟ್ಟು 2.90 ಕೋಟಿ ಅಸಂಘಟಿತ ಕಾರ್ಮಿಕರಿದ್ದು, ಅವರಲ್ಲಿ 5 ಲಕ್ಷ ಹಮಾಲಿ ಕಾರ್ಮಿಕರಿದ್ದಾರೆ. ಅವರು ಕೆಲಸ ಮಾಡುವ ಸ್ಥಳಗಳಲ್ಲಿ ಸೌಲಭ್ಯಗಳ ಕೊರತೆ ಇದೆ. ಅವರಿಗೆ ಕುಡಿಯುವ ನೀರಿನ ವ್ಯವಸ್ಥೆ, ಶ್ರಮಿಕ ಭವನ, ವಿಶ್ರಾಂತಿ ಕೊಠಡಿಗಳ ವ್ಯವಸ್ಥೆ ಕಲ್ಪಿಸಬೇಕು ಎಂದರು.
ಬೆಲೆ ಏರಿಕೆ ಆಧಾರ ಮೇಲೆ ಪ್ರತಿ ವರ್ಷ ಕೂಲಿ ಪರಿಷ್ಕರಣೆ ಮಾಡುವುದು, ಉಚಿತ ನಿವೇಶನ ಮತ್ತು ವಸತಿ ಸೌಲಭ್ಯ ಹಾಗೂ ಪ್ರತಿ ಹಮಾಲಿಗಳ ಕುಟುಂಬಕ್ಕೂ 30 ಕೆ.ಜಿ ಆಹಾರ ಧಾನ್ಯವನ್ನು ನೀಡಬೇಕು ಎಂದು ಮನವಿ ಮಾಡಿದರು.
ಒಕ್ಕೂಟದ ಅಧ್ಯಕ್ಷ ಮಹೇಶ ಪತ್ತಾರ ಮಾತನಾಡಿ, ಎಪಿಎಂಸಿಗಳಲ್ಲಿ ಕೆಲಸ ಮಾಡುವ ಹಮಾಲಿಗಳಿಗೆ ಪರವಾನಗಿಯನ್ನು ನೀಡಿ, ಹಮಾಲಿ ಕಾರ್ಮಿಕರ ಕಲ್ಯಾಣ ನಿಧಿಯನ್ನು ಸ್ಥಾಪಿಸಬೇಕು. ಎಪಿಎಂಸಿಯ ವಾರ್ಷಿಕ ಆದಾಯದಲ್ಲಿ ಶೇಕಡ 10ರಷ್ಟು ಹಣವನ್ನು ಕಲ್ಯಾಣ ನಿಧಿಗೆ ಮೀಸಲಿಡಬೇಕು. 55 ವರ್ಷ ದಾಟಿದ ಪ್ರತಿಯೊಬ್ಬ ಹಮಾಲಿಗೂ ಪಿಂಚಣಿ ವ್ಯವಸ್ಥೆ ಕಲ್ಪಿಸಬೇಕು ಎಂದು ಆಗ್ರಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.