ADVERTISEMENT

ಕಾರ್ಮಿಕರ ಪಿಂಚಣಿ ನಿಗದಿ, ಪಾವತಿ ವಿಳಂಬ: ಆರೋಪ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2011, 19:30 IST
Last Updated 7 ಫೆಬ್ರುವರಿ 2011, 19:30 IST

ಬೆಂಗಳೂರು: ಕಾರ್ಮಿಕರ ಪಿಂಚಣಿಯನ್ನು ನಿಗದಿ ಮಾಡಿ ಅದನ್ನು ಪಾವತಿ ಮಾಡುವಲ್ಲಿ ಭವಿಷ್ಯ ನಿಧಿ ಕಚೇರಿಯ ಅಧಿಕಾರಿಗಳು ಅನಗತ್ಯ ವಿಳಂಬ ಮಾಡುತ್ತಿದ್ದಾರೆ ಎಂದು  ‘ಕರ್ನಾಟಕ ಕಾರ್ಮಿಕ ಪಿಂಚಣಿ ಯೋಜನೆ ಪಿಂಚಿಣಿದಾರರ ಕ್ಷೇಮಾಭಿವೃದ್ದಿ ಮಹಾಮಂಡಳ’ದ ಕಾನೂನು ಸಲಹೆಗಾರ ಆರ್.ಪಿ. ಕೋರ್ಪಡೆ ಆರೋಪಿಸಿದ್ದಾರೆ.ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದಾದ್ಯಂತ ಸುಮಾರು 5.5 ಕೋಟಿ ಪಿಂಚಣಿದಾರರನ್ನು ವ್ಯವಸ್ಥಿತವಾಗಿ ವಂಚಿಸಲಾಗುತ್ತಿದೆ. ಕಾರ್ಮಿಕರ ಪಿಂಚಣಿ ಯೋಜನೆ 1995 ರ ಅನ್ವಯ ಇಪ್ಪತ್ತು ವರ್ಷಗಳ ಕಾಲ ಪಿಂಚಣಿ ವಂತಿಗೆ ಪಾವತಿ ಮಾಡಿದ ಕಾರ್ಮಿಕರಿಗೆ ಹೆಚ್ಚುವರಿಯಾಗಿ ಎರಡು ವರ್ಷಗಳ ಸೇವಾವಧಿಯನ್ನು ನಿಗದಿಪಡಿಸಬೇಕೆಂಬ ನಿಯಮವಿದೆ. ಆದರೆ ಈ ಎಲ್ಲಾ ಸೌಲಭ್ಯಗಳಿಂದ ನಿವೃತ್ತ ಕಾರ್ಮಿಕರು ವಂಚಿತರಾಗಿದ್ದಾರೆ ಎಂದರು.
 
ಕೇಂದ್ರ ಮತ್ತು ರಾಜ್ಯ ಸರ್ಕಾರಿ ನೌಕರರ ಪಿಂಚಣಿಗೆ ಪ್ರತಿವರ್ಷ ತುಟ್ಟಿ ಭತ್ಯೆ ನೀಡುತ್ತಿದೆ. ಆದರೆ ಕಾರ್ಮಿಕ ಪಿಂಚಣಿ ಯೋಜನೆ ಅಡಿಯಲ್ಲಿ ಯಾವುದೇ ತುಟ್ಟಿ ಭತ್ಯೆ ನೀಡುತ್ತಿಲ್ಲ. ಹಾಗಾಗಿ ಈ ಯೋಜನೆಯಲ್ಲಿ ಅಮೂಲಾಗ್ರ ಬದಲಾವಣೆ ಮಾಡಬೇಕೆಂದು ಮನವಿ ಮಾಡಿದರು.ನಂತರ ಮಾತನಾಡಿದ ಇ.ಪಿ.ಎಸ್ ಬೆಂಗಳೂರು ವಿಭಾಗದ ಸಂಘಟನಾ ಕಾರ್ಯದರ್ಶಿ ಲಯನ್.ವಿ. ರೇಣುಕುಮಾರ್ ಕೇಂದ್ರ ಸರ್ಕಾರ ಬೇಡಿಕೆಗಳಿಗೆ ಸ್ಪಂದಿಸದಿದ್ದಲ್ಲಿ ದೇಶಾದ್ಯಂತ ಚಳವಳಿ ನಡೆಸಲಾಗುವುದು ಎಂದರು. ಸುದ್ದಿಗೋಷ್ಠಿಯಲ್ಲಿ ಪ್ರಧಾನಕಾರ್ಯದರ್ಶಿ ಎಸ್.ಎಸ್.ಮಹಾಜನ್ ಮತ್ತಿತರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.