ADVERTISEMENT

‘ಕಾರ್ಯವೈಖರಿ ವಿಡಂಬಿಸುವ ಶಿಳ್ಳೆ ಗುಂಪು ಬೇಕು’

​ಪ್ರಜಾವಾಣಿ ವಾರ್ತೆ
Published 3 ಮೇ 2018, 20:18 IST
Last Updated 3 ಮೇ 2018, 20:18 IST

ಬೆಂಗಳೂರು: ‘ರಾಜಕೀಯ ಪಕ್ಷಗಳು ನೀಡುವ ಭರವಸೆಗಳನ್ನು ನೆನಪಿಸುವ ಶಿಳ್ಳೆ ಗುಂಪು ಹುಟ್ಟುಹಾಕಬೇಕು. ಜಿಲ್ಲೆಗೆ 3 ಜನರಂತೆ ತಿಂಗಳಿಗೆ ಒಂದು ಬಾರಿಯಂತೆ ಆಶ್ವಾಸನೆಗಳನ್ನು ವಿಮರ್ಶೆಗೆ ಒಳಪಡಿಸುವ ಕೆಲಸವನ್ನು ಅವರು ಮಾಡಬೇಕು’ ಎಂದು ಸ್ವರಾಜ್‌ ಇಂಡಿಯಾ ಪಕ್ಷದ ಸಲಹಾ ಸಮಿತಿಯ ಸದಸ್ಯರಾದ ಸಾಹಿತಿ ದೇವನೂರ ಮಹಾದೇವ ಹೇಳಿದರು.

ಸ್ವರಾಜ್‌ ಇಂಡಿಯಾ ಪಕ್ಷದ ಪ್ರಣಾಳಿಕೆ ಬಿಡುಗಡೆ ಸಂದರ್ಭದಲ್ಲಿ ಮಾತನಾಡಿ ‘ನೈಸರ್ಗಿಕ ಸಂಪತ್ತು ಉಳಿಸುವ ನಿಟ್ಟಿನಲ್ಲಿ ಪ್ರಜೆಗಳ ಜವಾಬ್ದಾರಿಯನ್ನು ನೆನಪಿಸುವ ವಿಶೇಷ ಪ್ರಣಾಳಿಕೆ ಇದು’ ಎಂದರು.

ಪ್ರಣಾಳಿಕೆ ಬಿಡುಗಡೆ ಮಾಡಿದ ಸ್ವಾತಂತ್ರ್ಯ ಹೋರಾಟಗಾರ ಎಚ್‌.ಎಸ್‌.ದೊರೆಸ್ವಾಮಿ, ‘ರಾಜಕೀಯದಲ್ಲಿ ಹಣವೇ ಪ್ರಾಧಾನ್ಯ ಪಡೆಯುತ್ತಿದೆ. ಹಣ ಹಾಗೂ ಅಧಿಕಾರ ಪಡೆಯಲು ರಾಜಕಾರಣಿಗಳು ಏನು ಬೇಕಾದರೂ ಮಾಡಲು ಸಿದ್ಧರಿದ್ದಾರೆ. ಹಣಕ್ಕಾಗಿ ಕೊಲೆ, ನೈಸರ್ಗಿಕ ಸಂಪತ್ತು ಲೂಟಿಯಾಗುತ್ತದೆ. ಚುನಾವಣೆಯ ನಂತರ ಏನು ಮಾಡುತ್ತೇವೆ ಎಂದು ಹೇಳುವ ಪೊಳ್ಳು ಭರವಸೆಯ ಪ್ರಣಾಳಿಕೆ ಇದಲ್ಲ. ಬದಲಾಗಿ ದೇಶದ ಅಭಿವೃದ್ಧಿಗೆ, ಮುಂದಿನ ಪೀಳಿಗೆಯ ಏಳ್ಗೆಗಾಗಿ ನಾವು ಏನು ಮಾಡಬಹುದು ಎನ್ನುವ ಚಿಂತನೆಯನ್ನು ಹುಟ್ಟುಹಾಕುತ್ತದೆ’ ಎಂದರು.

ADVERTISEMENT

‘ಜನರು ಯಾವಾಗಲೂ ಪ್ರಣಾಳಿಕೆಗಳನ್ನು ನೋಡಿ ತಮಗೇನು ಲಾಭ ಸಿಗುತ್ತದೆ ಎಂದೇ ಯೋಚಿಸುತ್ತಾರೆ. ಆದರೆ, ಈ ಪ್ರಣಾಳಿಕೆ ಸಮಸ್ಯೆಗಳನ್ನು ನಿವಾರಿಸಿಕೊಳ್ಳುವಲ್ಲಿ ರೈತನಾಗಿ, ವಿದ್ಯಾರ್ಥಿಯಾಗಿ, ನಾಗರಿಕನಾಗಿ ನಮ್ಮ ಕರ್ತವ್ಯ ಏನು ಎಂದು ಹೇಳುತ್ತದೆ’ ಎಂದು ಕರ್ನಾಟಕ ಜನಶಕ್ತಿ ಸಂಘಟನೆಯ ಸದಸ್ಯ ಎಚ್‌.ವಿ. ವಾಸು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.