ADVERTISEMENT

ಕಾವೇರಿ ಐತೀರ್ಪು ಪ್ರಕಟಣೆ ಬೇಡ

ಸುದ್ದಿಗೋಷ್ಠಿಯಲ್ಲಿ ಸಿ.ಎಂ ಶೆಟ್ಟರ್

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2012, 19:54 IST
Last Updated 15 ಡಿಸೆಂಬರ್ 2012, 19:54 IST

ಬೆಂಗಳೂರು: ಕಾವೇರಿ ನ್ಯಾಯಮಂಡಳಿಯ ಐತೀರ್ಪನ್ನು ಗೆಜೆಟ್‌ನಲ್ಲಿ ಪ್ರಕಟಿಸದಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುವುದಕ್ಕಾಗಿ ಶೀಘ್ರದಲ್ಲಿ ದೆಹಲಿಗೆ ಉನ್ನತಮಟ್ಟದ ನಿಯೋಗ ಕೊಂಡೊಯ್ಯಲು ರಾಜ್ಯ ಸರ್ಕಾರ ನಿರ್ಧರಿಸಿದ್ದು, ಪ್ರಧಾನಿಯವರ ಭೇಟಿಗಾಗಿ ಸಮಯವನ್ನೂ ಕೋರಿದೆ ಎಂದು ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಹೇಳಿದರು.

ಮುಖ್ಯಮಂತ್ರಿಯವರ ಗೃಹ ಕಚೇರಿ `ಕೃಷ್ಣಾ'ದಲ್ಲಿ ಶನಿವಾರ ವಿಧಾನಮಂಡಲದ ಉಭಯ ಸದನಗಳ ಎಲ್ಲ ಪಕ್ಷಗಳ ನಾಯಕರು ಮತ್ತು ಕಾವೇರಿ ಕಣಿವೆಯನ್ನು ಪ್ರತಿನಿಧಿಸುವ ಸಂಸದರ ಸಭೆ ನಡೆಸಿದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. `ಡಿಸೆಂಬರ್ 7ರಂದು ಕಾವೇರಿ ಉಸ್ತುವಾರಿ ಸಮಿತಿ ನೀಡಿದ ಆದೇಶದಲ್ಲಿ ನ್ಯಾಯಮಂಡಳಿಯ ಐತೀರ್ಪನ್ನು ತಿಂಗಳ ಅಂತ್ಯದೊಳಗೆ ಅಧಿಸೂಚನೆಯಲ್ಲಿ ಪ್ರಕಟಿಸುವಂತೆ ಸೂಚಿಸಿದೆ.

ಅಂತಹ ಆದೇಶ ನೀಡುವ ಅಧಿಕಾರ ಕಾವೇರಿ ಉಸ್ತುವಾರಿ ಸಮಿತಿಗೆ ಇಲ್ಲ. ಅಲ್ಲದೇ ರಾಜ್ಯದ ಹಿತಾಸಕ್ತಿಗೆ ವಿರುದ್ಧವಾಗಿರುವ ಐತೀರ್ಪು ಗೆಜೆಟ್‌ನಲ್ಲಿ ಪ್ರಕಟವಾದರೆ ಹೆಚ್ಚು ತೊಂದರೆಯೂ ಆಗುತ್ತದೆ. ಈ ಕಾರಣದಿಂದ ಐತೀರ್ಪನ್ನು ಪ್ರಕಟಿಸದಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ತರಲು ತೀರ್ಮಾನಿಸಲಾಗಿದೆ' ಎಂದು ಹೇಳಿದರು.

ಕಾವೇರಿ ನ್ಯಾಯಮಂಡಳಿಯ ಐತೀರ್ಪನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿರುವ ಸಿವಿಲ್ ಅರ್ಜಿಗಳು ಸುಪ್ರೀಂಕೋರ್ಟ್‌ನಲ್ಲಿ ಇತ್ಯರ್ಥಕ್ಕೆ ಬಾಕಿ ಇವೆ. ಈಗ ಐತೀರ್ಪನ್ನು ಅಧಿಸೂಚನೆಯಲ್ಲಿ ಪ್ರಕಟಿಸುವುದರಿಂದ ಆಗಬಹುದಾದ ಸಮಸ್ಯೆಗಳ ಕುರಿತು ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡಿಕೊಡುವುದಕ್ಕೂ ನಿರ್ಧರಿಸಲಾಗಿದೆ. ಡಿ.9ರಂದು ಪ್ರಧಾನಿಯವರಿಗೆ ಬರೆದ ಪತ್ರದಲ್ಲೇ ಈ ಎಲ್ಲ ಅಂಶಗಳನ್ನೂ ವಿವರಿಸಲಾಗಿದೆ. ಆದರೆ, ರಾಜ್ಯದ ಹಿತಾಸಕ್ತಿ ರಕ್ಷಿಸುವ ಉದ್ದೇಶದಿಂದ ನಿಯೋಗ ಕರೆದೊಯ್ದು, ಮನವರಿಕೆ ಮಾಡಿಕೊಡುವುದು ಸೂಕ್ತ ಎಂಬ ತೀರ್ಮಾನಕ್ಕೆ ಬರಲಾಗಿದೆ  ಎಂದರು.

ಡಿಸೆಂಬರ್ ತಿಂಗಳಿನಲ್ಲೇ 12 ಟಿಎಂಸಿ ಅಡಿ ನೀರು ಬಿಡುವಂತೆ ಸಮಿತಿ ನೀಡಿರುವ ಆದೇಶ ಕುರಿತು ಪ್ರತಿಕ್ರಿಯಿಸಿದ ಮುಖ್ಯಮಂತ್ರಿಯವರು, `ಸಮಿತಿಯ ಆದೇಶವನ್ನು ಕಾವೇರಿ ನದಿ ಪ್ರಾಧಿಕಾರದಲ್ಲಿ ಪ್ರಶ್ನಿಸಲಾಗುವುದು. ಬರಗಾಲದಿಂದ ಕಾವೇರಿ ಕಣಿವೆಯಲ್ಲಿ ಉಂಟಾಗಿರುವ ಸಮಸ್ಯೆ ಮತ್ತು ರಾಜ್ಯದ ಜಲಾಶಯಗಳಲ್ಲಿ ಇರುವ ನೀರಿನ ಸಂಗ್ರಹವನ್ನು ಸ್ಪಷ್ಟವಾಗಿ ಪ್ರಾಧಿಕಾರಕ್ಕೆ ತಿಳಿಸಲಾಗುವುದು' ಎಂದು ಹೇಳಿದರು.

ಸಮಯ ನಿಗದಿಗೆ ಮನವಿ: ಪ್ರಧಾನಿ ಡಾ.ಮನಮೋಹನ್ ಸಿಂಗ್, ಕೇಂದ್ರ ಜಲ ಸಂಪನ್ಮೂಲ ಸಚಿವ ಹರೀಶ್ ರಾವತ್ ಮತ್ತು ಕೇಂದ್ರ ಕಾನೂನು ಸಚಿವ ಅಶ್ವನಿಕುಮಾರ್ ಅವರನ್ನು ನಿಯೋಗದಲ್ಲಿ ಭೇಟಿ ಮಾಡಲು ಯೋಚಿಸಲಾಗಿದೆ. ಪ್ರಧಾನಿಯವರ ಭೇಟಿಗೆ ಸಮಯ ನಿಗದಿ ಮಾಡುವಂತೆ ಪ್ರಧಾನಮಂತ್ರಿಯವರ ಸಚಿವಾಲಯವನ್ನು ಕೋರಲಾಗಿದೆ. ಜಲ ಸಂಪನ್ಮೂಲ ಸಚಿವರು ಮತ್ತು ಕಾನೂನು ಸಚಿವರ ಭೇಟಿಗೂ ಕಾಲಾವಕಾಶ ಕೇಳಲಾಗುವುದು ಎಂದರು.

ಕಾವೇರಿ ಕಣಿವೆಯಲ್ಲಿ ನೀರಿಲ್ಲದೆ ಬೆಳೆ ಒಣಗುತ್ತಿರುವುದರಿಂದ ರೈತರಿಗೆ ಪರಿಹಾರ ನೀಡುವ ಯೋಚನೆ ಸರ್ಕಾರದ ಮುಂದಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಜಲ ಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ, `ಕಾವೇರಿ ಕಣಿವೆಯಲ್ಲಿ ಶೇಕಡ 80ಕ್ಕೂ ಹೆಚ್ಚು ಭಾಗದಲ್ಲಿ ಫಸಲು ಕೊಯ್ಲಿಗೆ ಬಂದಿದೆ. ಉಳಿದ ಭಾಗಕ್ಕೆ ಶೀಘ್ರದಲ್ಲಿ ಅಗತ್ಯ ನೀರು ಒದಗಿಸಲಾಗುವುದು. ಈ ಸಂಬಂಧ ಜಲಾಶಯಗಳ ಎಂಜಿನಿಯರುಗಳ ಸಭೆ ನಡೆಸಿ ಸೂಕ್ತ ನಿರ್ದೇಶನ ನೀಡಲಾಗಿದೆ' ಎಂದು ತಿಳಿಸಿದರು.

ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಎಸ್.ಆರ್.ಪಾಟೀಲ, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ರೇವಣ್ಣ, ಸಂಸದರಾದ ಅನಂತಕುಮಾರ್, ಡಿ.ಬಿ.ಚಂದ್ರೇಗೌಡ, ಪಿ.ಸಿ.ಮೋಹನ್, ಎನ್.ಚೆಲುವರಾಯಸ್ವಾಮಿ, ಜಿ.ಎಸ್.ಬಸವರಾಜು, ಸರ್ಕಾರದ ಮುಖ್ಯ ಕಾರ್ಯದರ್ಶಿ ಎಸ್.ವಿ.ರಂಗನಾಥ್ ಸಭೆಯಲ್ಲಿ ಭಾಗವಹಿಸಿದ್ದರು. ಪ್ರತಿಪಕ್ಷಗಳ ನಾಯಕರು ಮತ್ತು ಸಂಸದರು, ದೆಹಲಿಗೆ ನಿಯೋಗ ಕರೆದೊಯ್ಯುವ ಸರ್ಕಾರದ ನಿರ್ಧಾರಕ್ಕೆ ಸಹಮತ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT