ADVERTISEMENT

ಕೃಷಿ ಬಜೆಟ್: ಕಿಸಾನ್ ಹರ್ಷ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2011, 18:40 IST
Last Updated 8 ಫೆಬ್ರುವರಿ 2011, 18:40 IST

ಬೆಂಗಳೂರು:ರಾಜ್ಯ ಸರ್ಕಾರ ಫೆಬ್ರುವರಿ ತಿಂಗಳಲ್ಲಿ ರೈತರ ಹಿತದೃಷ್ಟಿಯಿಂದ ‘ಕಿಸಾನ್’ ಬಜೆಟ್ ರೂಪಿಸಲು ಮುಂದಾಗಿರುವುದಕ್ಕೆ ಸಂತಸವಾಗಿದೆ ಎಂದು ರಾಷ್ಟ್ರೀಯ ಕಿಸಾನ್ ಸಂಘ, ರಾಜ್ಯ ಘಟಕದ ಅಧ್ಯಕ್ಷ ಪಿ.ರಾಮರೆಡ್ಡಿ ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಬಜೆಟ್ ಮಂಡಿಸುವ ಮುನ್ನ ರೈತರ ಹಲವಾರು ಸಮಸ್ಯೆಗಳನ್ನು ಪರಿಶೀಲಿಸಬೇಕು, ಸರ್ಕಾರ 2000 ನೇ ಸಾಲಿನಿಂದ ಇಲ್ಲಿಯವರೆಗೆ ವಶಪಡಿಸಿಕೊಂಡಿರುವ ಭೂಮಿಯನ್ನು ರೈತರಿಗೆ ನೀಡಬೇಕು. ಕೃಷಿ ಉತ್ಪನ್ನಗಳಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ದೊರಕದ ಕಾರಣದಿಂದ ಕನಿಷ್ಠ ಬೆಲೆಯನ್ನು ಸರ್ಕಾರ ನಿಗದಿ ಮಾಡಬೇಕೆಂದು ಕೋರಿದರು.

ಕೃಷಿ ಪಂಪ್‌ಸೆಟ್‌ಗಳ ವಿದ್ಯುತ್ ಸಂಪರ್ಕವನ್ನು ಸಕ್ರಮಗೊಳಿಸಲು ಯಾವದೇ ಹಣ ಪಡೆಯದೆ ಉಚಿತವಾಗಿ ಸಕ್ರಮಗೊಳಿಸಬೇಕು. ಅತಿವೃಷ್ಠಿ ಮತ್ತು ಅನಾವೃಷ್ಠಿಯಿಂದ ಹಾನಿಗೊಳಗಾದ ರೈತರಿಗೆ ಪರಿಹಾರ ಒದಗಿಸಲು ಪರ್ಯಾಯ ವ್ಯವಸ್ಥೆ ರೂಪಿಸಬೇಕು. ವಿದೇಶಗಳಲ್ಲಿ ಕೃಷಿ ರಕ್ಷಣೆಗೆ ರೈತರಿಗೆ ನೇರವಾಗಿ ಶೇ 40 ರಿಂದ 90 ರವರೆಗೆ ರಿಯಾಯಿತಿಯನ್ನು ನೀಡುತ್ತಿದೆ ಹಾಗಾಗಿ ರಾಜ್ಯದಲ್ಲೂ ಈ ನೀತಿ ಅನುಸರಿಸಬೇಕೆಂದು ಮನವಿ ಮಾಡಿದರು.ಈ ಎಲ್ಲಾ ಅಂಶಗಳನ್ನು ಪರಿಶೀಲಿಸಿ ಕಿಸಾನ್ ಬಜೆಟ್ ಮಂಡಿಸಬೇಕೆಂದು ಮನವಿ ಮಾಡಿದರು. ಸುದ್ದಿಗೋಷ್ಠಿಯಲ್ಲಿ ರಾಷ್ಟ್ರೀಯ ಕಿಸಾನ್ ಸಂಘದ ಸಂಘಟನಾ ಕಾರ್ಯದರ್ಶಿ ವಿ.ಶಿವಣ್ಣ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.