ADVERTISEMENT

ಕೆಆರ್‌ಎಸ್ ನೀರಿನ ಮಟ್ಟ ಕುಸಿತ: ಕುಡಿಯುವ ನೀರಿಗೆ ಹಾಹಾಕಾರ ಸಾಧ್ಯತೆ

ಮುಖ್ಯಮಂತ್ರಿಯ ರಕ್ತ ಕುಡಿಯುತ್ತಾರೆ: ಮಾದೇಗೌಡ

ಪಿಟಿಐ
Published 4 ಮೇ 2018, 19:51 IST
Last Updated 4 ಮೇ 2018, 19:51 IST
ಕೆಆರ್‌ಎಸ್‌ ಜಲಾಶಯ ಒಂದು ಭಾಗ ಬರಿದಾಗಿರುವುದು
ಕೆಆರ್‌ಎಸ್‌ ಜಲಾಶಯ ಒಂದು ಭಾಗ ಬರಿದಾಗಿರುವುದು   

ಮಂಡ್ಯ: ಕೆಆರ್‌ಎಸ್‌ ಜಲಾಶಯದಲ್ಲಿ ನೀರು ಸಂಗ್ರಹ 72.24 ಅಡಿಗೆ ಕುಸಿದಿರುವ ಕಾರಣ ನಾಲೆಗಳಿಗೆ ಹರಿಯುತ್ತಿದ್ದ ನೀರು ನಿಲ್ಲಿಸಿ ಕುಡಿಯುವುದಕ್ಕಷ್ಟೇ ಉಳಿಸಿಕೊಳ್ಳಲಾಗಿದೆ. ಇಂತಹ ಸಂಕಷ್ಟ ಸಮಯದಲ್ಲಿ ತಮಿಳುನಾಡಿಗೆ ನೀರು ಹರಿಸಿದರೆ ಕುಡಿಯುವ ನೀರಿಗೆ ಏನು ಮಾಡಬೇಕು ಎನ್ನುವ ಪ್ರಶ್ನೆ ಎದುರಾಗಿದೆ.

ಕಾವೇರಿ ಸಲಹಾ ಸಮಿತಿ (ಐಸಿಸಿ) ಸಭೆಯಲ್ಲಿ ಕಳೆದ ಏಪ್ರಿಲ್‌ 23ರ ವರೆಗೂ ನಾಲೆಗಳಿಗೆ ನೀರು ಹರಿಸುವ ನಿರ್ಧಾರ ಕೈಗೊಳ್ಳಲಾಗಿತ್ತು. ಆದರೆ ಜಲಾಶಯದ ನೀರಿನ ಮಟ್ಟ 74 ಅಡಿಗಿಂತ ಕೆಳಗಿಳಿದ ಕಾರಣ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ನಿಗದಿತ ಅವಧಿಗಿಂತ ಒಂದು ವಾರ ಮೊದಲೇ ನಾಲೆಗೆ ಹರಿಯುತ್ತಿದ್ದ ನೀರು ನಿಲ್ಲಿಸಿದ್ದರು.

‘74 ಅಡಿ ತಲುಪಿದಾಗ ನೀರು ನಾಲೆಯ ತೂಬಿಗಿಂತ ಕೆಳಗಿಳಿಯುತ್ತದೆ.

ADVERTISEMENT

ಒತ್ತಡ ಕಡಿಮೆಯಾಗಿ ನೀರು ಮುಂದಕ್ಕೆ ಹೋಗುವುದಿಲ್ಲ. ಸಹಜವಾಗಿ ನೀರು ನಿಲ್ಲಿಸುತ್ತೇವೆ’ ಎಂದು ಕಾವೇರಿ ನೀರಾವರಿ ನಿಗಮದ ಸೂಪರೆಂಟೆಂಡಿಂಗ್ ಎಂಜಿನಿಯರ್‌ ವಿಜಯ್‌ ಕುಮಾರ್‌ ಹೇಳಿದರು.

ಬೆಳೆದು ನಿಂತಿರುವ ಬೇಸಿಗೆ ಬೆಳೆ ಉಳಿಸಿಕೊಳ್ಳಲು ನೀರು ಬಿಡುವಂತೆ ಒತ್ತಾಯಿಸಿ ರೈತರು ಹೋರಾಟ ನಡೆಸುತ್ತಲೇ ಇದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ತಮಿಳುನಾಡಿಗೆ ನಾಲ್ಕು ಟಿಎಂಸಿ ಅಡಿ ನೀರು ಹರಿಸಲು ಸಾಧ್ಯವೇ ಎಂದು ಸುಪ್ರೀಂ ಕೋರ್ಟ್‌ ಕೇಳಿರುವುದು ರೈತರಲ್ಲಿ ಆತಂಕ ಮೂಡಿಸಿದೆ.

‘ಭತ್ತ ಕಾಯಿಕಟ್ಟುವ ಸಮಯದಲ್ಲಿ ನೀರು ನಿಲ್ಲಿಸಿ ಅಧಿಕಾರಿಗಳು ಅನ್ಯಾಯ ಮಾಡಿದರು. ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ. ಐಸಿಸಿ ಸಭೆಯಲ್ಲಿ ನೀರು ಕೊಡುವ ಭರವಸೆ ನೀಡಿದ ಕಾರಣದಿಂದಲೇ ರೈತರು ಬೆಳೆ ಹಾಕಿದ್ದರು. ಇಂತಹ ಸ್ಥಿತಿಯಲ್ಲಿ ಸುಪ್ರೀಂ ಕೋರ್ಟ್‌ ತಮಿಳುನಾಡಿಗೆ ನೀರು ಹರಿಸುವಂತೆ ಕೇಳಿರುವುದು ಅಮಾನವೀಯ. ಇದನ್ನು ನಾವು ಸಹಿಸಿಕೊಳ್ಳಲು ಸಾಧ್ಯವಿಲ್ಲ. ಮುಂದೆ ಪರಿಸ್ಥಿತಿ ಏನಾಗುವುದೋ’ ಎಂದು ರೈತ ಹೋರಾಟಗಾರ ಕೆ.ಎಸ್‌.ನಂಜುಂಡೇಗೌಡ ಆತಂಕ ವ್ಯಕ್ತಪಡಿಸಿದರು.

‘ಕಳೆದ ನಾಲ್ಕು ವರ್ಷಗಳಿಂದ ಒಣ ಬರಗಾಲ ಎದುರಿಸಿದೆವು. ಈ ಬಾರಿ ಮಳೆಯಾಗಿ ಕೆಆರ್‌ಎಸ್‌ 100 ಅಡಿ ತುಂಬಿ ಕೆರೆಗಳಿಗೂ ನೀರು ಹರಿಯಿತು. ಆದರೂ ಬೆಳೆ ಕೈಗೆ ಬರಲಿಲ್ಲ. ಇದೊಂದು ರೀತಿಯ ‘ಹಸಿ ಬರಗಾಲ’ದ ಸ್ಥಿತಿ. ಒಣ ಬರಗಾಲ ಎದುರಿಸಬಹುದು, ಆದರೆ ಹಸಿ ಬರ ಎದುರಿಸಲು ಸಾಧ್ಯವಿಲ್ಲ’ ಎಂದು ರೈತ ಮುಖಂಡ ಹನಿಯಂಬಾಡಿ ನಾಗರಾಜ್‌ ಹೇಳಿದರು.

ಸದ್ಯ ಕೆಆರ್‌ಎಸ್‌ ಜಲಾಶಯದಲ್ಲಿ 3.44 ಟಿಎಂಸಿ ಅಡಿ ನೀರು ಮಾತ್ರ ಬಳಕೆಗೆ ಲಭ್ಯವಿದೆ. ಕಾವೇರಿ ಕಣಿವೆಯ ನಾಲ್ಕು ಜಲಾಶಯಗಳಲ್ಲಿ 9.94 ಟಿಎಂಸಿ ಅಡಿ ನೀರು ಬಳಕೆಗೆ ಸಿಗಲಿದೆ. ಇದು ಕುಡಿಯುವುದಕ್ಕೂ ಸಾಲುವುದಿಲ್ಲ.

ಇಂತಹ ಪರಿಸ್ಥಿತಿಯಲ್ಲಿ ತಮಿಳುನಾಡಿಗೆ ನೀರು ಬಿಡುವ ಸಂಕಷ್ಟ ಸ್ಥಿತಿ ಎದುರಾದರೆ ಜನರು ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಇದೆ.

**

‘ಮುಖ್ಯಮಂತ್ರಿಯ ರಕ್ತ ಕುಡಿಯುತ್ತಾರೆ’

‘ಬರ ಪರಿಸ್ಥಿತಿಯಲ್ಲಿ ತಮಿಳುನಾಡಿಗೆ ನೀರು ಹರಿಸಿದರೆ ರೈತರು ನೀರು ಕುಡಿಯುವ ಬದಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಕ್ತ ಕುಡಿಯುತ್ತಾರೆ. ರೈತರ ಸ್ಥಿತಿಯನ್ನು ಕೋರ್ಟ್‌ಗೆ ಮನವರಿಗೆ ಮಾಡಿಕೊಡಲು ರಾಜ್ಯ ಸರ್ಕಾರ ಸೋತಿದೆ. ಬೆಳೆ ಒಣಗುತ್ತಿದ್ದರೂ ರೈತರ ಮೇಲೆ ಕಾಳಜಿ ಇಲ್ಲ. ಕೋರ್ಟ್‌ ಆದೇಶ ಪಾಲಿಸುವ ನೆಪದಲ್ಲಿ ತಮಿಳುನಾಡಿಗೆ ಒಂದು ಹನಿ ನೀರು ಬಿಟ್ಟರೂ ಜಿಲ್ಲೆಯಾದ್ಯಂತ ಉಗ್ರ ಹೋರಾಟ ಆರಂಭಗೊಳ್ಳಲಿದೆ’ ಎಂದು ರೈತ ಹಿತರಕ್ಷಣಾ ಸಮಿತಿ ಅಧ್ಯಕ್ಷ ಜಿ.ಮಾದೇಗೌಡ ಎಚ್ಚರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.