ADVERTISEMENT

ಕೆಇಆರ್‌ಸಿ ಆದೇಶಕ್ಕೆ ಹೈಕೋರ್ಟ್ ತಡೆಯಾಜ್ಞೆ

ಶುಲ್ಕ ವಿನಾಯಿತಿ ಹಿಂಪಡೆದ ಪ್ರಕರಣ

​ಪ್ರಜಾವಾಣಿ ವಾರ್ತೆ
Published 25 ಮೇ 2018, 19:58 IST
Last Updated 25 ಮೇ 2018, 19:58 IST
ಹೈಕೋರ್ಟ್‌
ಹೈಕೋರ್ಟ್‌   

ಬೆಂಗಳೂರು: ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಬಂಡವಾಳ ಹೂಡಿಕೆ ಮಾಡುವ ಕಂಪನಿಗಳಿಗೆ ನೀಡಲಾಗಿದ್ದ ಟ್ರಾನ್ಸ್‌ಮಿಷನ್ ಅಥವಾ ವೀಲಿಂಗ್ ಶುಲ್ಕ ಮತ್ತು ಬ್ಯಾಂಕ್ ಶುಲ್ಕ ಪಾವತಿ ವಿನಾಯಿತಿ ಹಿಂಪಡೆದ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದ (ಕೆಇಆರ್‌ಸಿ) ಆದೇಶಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.

ಕೆಇಆರ್‌ಸಿ ಆದೇಶ ಪ್ರಶ್ನಿಸಿ ಮೆಸರ್ಸ್ ಎಂಬೆಸ್ಸಿ ಎನರ್ಜಿ ಪ್ರೈವೇಟ್ ಲಿಮಿಟೆಡ್, ಅವಧ ಸಸ್ಟೈನಬಲ್ ಎನರ್ಜಿ ಪ್ರೈವೇಟ್ ಲಿಮಿಟೆಡ್ ಮತ್ತಿತರ ಎರಡು ಕಂಪನಿಗಳು ಸಲ್ಲಿಸಿದ್ದ ತಕರಾರು ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎ.ಎಸ್. ಬೋಪಣ್ಣ ಅವರಿದ್ದ ರಜಾ ಕಾಲದ ಏಕ ಸದಸ್ಯ ಪೀಠ, ಈ ಮಧ್ಯಂತರ ಆದೇಶ ಮಾಡಿದೆ.

ಅಲ್ಲದೆ, ರಾಜ್ಯ ಸರ್ಕಾರ, ಕೆಇಆರ್‌ಸಿ, ಕೆಪಿಟಿಸಿಎಲ್ ಸೇರಿದಂತೆ ಇತರೆ ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಿ ಅರ್ಜಿಗೆ ಆಕ್ಷೇಪಣೆ ಸಲ್ಲಿಸುವಂತೆ ಸೂಚಿಸಿತು.

ADVERTISEMENT

ರಾಜ್ಯದಲ್ಲಿ ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಬಂಡವಾಳ ಹೂಡಿರುವ ಹತ್ತು ವರ್ಷ ಪೂರೈಸಿರದ ಮತ್ತು 2018ರ ಮಾರ್ಚ್ 31ರ ಒಳಗೆ ವಾಣಿಜ್ಯ ಕಾರ್ಯಾಚರಣೆ ಆರಂಭಿಸಿದ ಕಂಪನಿಗಳಿಗೆ ವೀಲಿಂಗ್ ಚಾರ್ಜ್ ಮತ್ತು ಬ್ಯಾಂಕಿಂಗ್ ಶುಲ್ಕದಿಂದ ವಿನಾಯಿತಿ ನೀಡಲಾಗಿತ್ತು.

ಆದರೆ, ಇದೀಗ ಸೌರ ವಿದ್ಯುತ್ ಉತ್ಪಾದನಾ ವೆಚ್ಚ ತಗ್ಗಿದೆ ಎಂಬ ಕಾರಣ ನೀಡಿ ವಿನಾಯಿತಿಗೆ ನಿಗದಿಪಡಿಸಿದ್ದ ಕಾಲಮಿತಿ ತಗ್ಗಿಸಿದೆ. 2017ರ ಮಾ.31ರೊಳಗೆ ಕಾರ್ಯ ನಿರ್ವಹಣೆ ಆರಂಭಿಸಿರುವ ಕಂಪನಿಗಳಿಗೆ ಮಾತ್ರ ಟ್ರಾನ್ಸ್‌ಮಿಷನ್ ಅಥವಾ ವೀಲಿಂಗ್ ಶುಲ್ಕ ಮತ್ತು ಬ್ಯಾಂಕ್ ಶುಲ್ಕ ಪಾವತಿಯಿಂದ ವಿನಾಯಿತಿ ನೀಡಲಾಗುತ್ತದೆ ಎಂದು ಕೆಇಎಆರ್‌ಸಿ ಆದೇಶಿಸಿದೆ.

2018ರ ಮಾರ್ಚ್ 31ವರೆಗೆ ವಿನಾಯಿತಿ ನೀಡಲು ಕೆಇಆರ್‌ಸಿಗೆ ನಿರ್ದೇಶಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.