ತಲಘಟ್ಟಪುರ: ಒಂದೆಡೆ ಕೆಟ್ಟ ವಾಸನೆ, ಮತ್ತೊಂದೆಡೆ ಸೊಳ್ಳೆ, ನೊಣ, ಹಂದಿ-ನಾಯಿಗಳ ಹಾವಳಿಯ ನಡುವೆಯೇ ಬಿಬಿಎಂಪಿ ವ್ಯಾಪ್ತಿಯ ಕೊತ್ತನೂರು ರಸ್ತೆಯ ಹರಿ ನಗರ, ಭವಾನಿ ದೇವಸ್ಥಾನ, ಟಿಸಿಎಚ್ ಕಾಲೇಜು ಸುತ್ತಮುತ್ತಲ ಪ್ರದೇಶದ ಜನ ಜೀವನ ಸಾಗಿಸುವಂತಾಗಿದೆ.
ಇಲ್ಲಿ ಹೊಸದಾಗಿ ನಿರ್ಮಾಣವಾದ ಬಡಾವಣೆಗಳ ಶೌಚಾಲಯದ ನೀರು, ತೆರೆದ ಚರಂಡಿಯಲ್ಲಿ ಹರಿಯುತ್ತಿದೆ. ಇದರಿಂದ ಜನತೆ ಕೆಟ್ಟ ವಾಸನೆಯ ಗಾಳಿ ಸೇವನೆ ಮಾಡುವಂತಾಗಿದೆ. ಇನ್ನು ನಾಯಿ, ಹಂದಿ, ಬೀಡಾಡಿ ಹಸುಗಳ ಕಾಟ ಕೂಡ ಹೇಳತೀರದು.
ಕುಡಿಯುವ ನೀರಿನ ಸಮಸ್ಯೆಯೂ ಬಿಗಡಾಯಿಸಿದೆ. ನಾಲ್ಕೈದು ದಿನಕ್ಕೊಮ್ಮೆ 30 ನಿಮಿಷ ಮಾತ್ರ ಜಲಮಂಡಳಿ ನೀರು ಬಿಡುತ್ತಿದೆ. ಕೆಲವೊಮ್ಮೆ ಸರಿಯಾಗಿ ನೀರು ಸಿಗುವುದೇ ಇಲ್ಲ ಎಂದು ಗೃಹಿಣಿಯರಾದ ಸಂಧ್ಯಾ, ಸಮೀರಾ ನೊಂದು ನುಡಿದರು.
ಹಣವಂತರು ಟ್ಯಾಂಕರ್ ನೀರಿಗೆ 250- 300 ರೂಪಾಯಿ ಕೊಟ್ಟು ಖರೀದಿಸಿ ನೀರಿನ ಬವಣೆ ನೀಗಿಸಿಕೊಳ್ಳುತ್ತಾರೆ. ಆದರೆ, ಬಡವರು ಮಾತ್ರ ನೀರಿಗಾಗಿ ಬಿಂದಿಗೆಗಳನ್ನು ಹಿಡಿದು ಅಲೆಯಬೇಕಾಗಿದೆ. ಕೂಗಳತೆ ದೂರದಲ್ಲಿರುವ ಕೊತ್ತನೂರು ಬಡಾವಣೆ, ಆರ್‌ಬಿಐ ಲೇಔಟ್, ಜೆ.ಪಿ. ನಗರ, ಕನಕಪುರ ರಸ್ತೆ ಮುಂತಾದ ಪ್ರದೇಶಗಳಿಗೆ ನಿತ್ಯ ಕಾವೇರಿ ನೀರು ಸರಬರಾಜು ಮಾಡಲಾಗುತ್ತಿದೆ.
ಆದರೆ, ಸಾಮಾನ್ಯ ಜನರು ವಾಸಿಸುವ ಬಡಾವಣೆಗಳಿಗೆ ಕೊಳವೆ ಬಾವಿ ನೀರು ಕೂಡ ಸರಿಯಾಗಿ ಪೂರೈಕೆಯಾಗುತ್ತಿಲ್ಲ ಎಂದು ಸ್ಥಳೀಯರು ದೂರಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.