ADVERTISEMENT

ಕೊಲೆಗೆ ಹೊಂಚು: ಕುಟ್ಟಿ, ಸಹಚರರ ಬಂಧನ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2012, 19:30 IST
Last Updated 7 ಅಕ್ಟೋಬರ್ 2012, 19:30 IST

ಬೆಂಗಳೂರು: ಕೊಲೆ ಮಾಡಲು ಹೊಂಚು ಹಾಕುತ್ತಿದ್ದ ಕುಖ್ಯಾತ ರೌಡಿ ತಿರುಕುಮಾರನ್ ಅಲಿಯಾಸ್ ಕುಟ್ಟಿ (42) ಮತ್ತು ಆತನ ಸಹಚರರನ್ನು ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಪೊಲೀಸರು ಬಂಧಿಸಿದ್ದಾರೆ.

ಛಲವಾದಿಪಾಳ್ಯದ ಜೈಕಾಂತ್ (36), ಸಿದ್ದಾರ್ಥನಗರದ ಬಾಬುಪ್ರಸಾದ್ (40) ಮತ್ತು ಜಗಜೀವನರಾಂನಗರದ ಪೀಟರ್ (37) ಇತರೆ ಬಂಧಿತ ಆರೋಪಿಗಳು. ಬಂಧಿತರಿಂದ ಮೊಬೈಲ್‌ಗಳು ಹಾಗೂ ಮಾರಕಾಸ್ತ್ರಗಳನ್ನು ಜಪ್ತಿ ಮಾಡಲಾಗಿದೆ.

ತಿರುಕುಮಾರನ್, ತನ್ನ ಎದುರಾಳಿ ಸೀನ ಎಂಬಾತನನ್ನು ಕೊಲೆ ಮಾಡಿ ಹಣ ಹಾಗೂ ಚಿನ್ನಾಭರಣ ದೋಚಲು ಬಿನ್ನಿಮಿಲ್ ರಸ್ತೆಯಲ್ಲಿ ಹೊಂಚುಹಾಕುತ್ತಿದ್ದ. ಈ ಬಗ್ಗೆ ಮಾಹಿತಿ ಕಲೆ ಹಾಕಿ ಅವರನ್ನು ಬಂಧಿಸಲಾಯಿತು.  ಅವರ ಸಹಚರರಾದ ಗಾರ್ಡನ್ ಶಿವ, ರಂಜಿತ್ ಮತ್ತು ಪ್ರವೀಣ್ ಎಂಬುವರು ಪರಾರಿಯಾಗಿದ್ದಾರೆ. ಬಂಧಿತರ ವಿರುದ್ಧ ಕಾಟನ್‌ಪೇಟೆ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ತಿರುಕುಮಾರನ್ ಮತ್ತು ಜೈಕಾಂತ್, ಸೀನನ ಸ್ನೇಹಿತನನ್ನು ಕೊಲೆ ಮಾಡಲು ಯತ್ನಿಸಿದ್ದರು. ಈ ಸಂಬಂಧ ಕಾಟನ್‌ಪೇಟೆ ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣ ದಾಖಲಾಗಿತ್ತು.  ಸೀನ ಈ ಪ್ರಕರಣದಲ್ಲಿ ನ್ಯಾಯಾಲಯದಲ್ಲಿ ಸಾಕ್ಷ್ಯ ಹೇಳುತ್ತಾನೆ ಎಂಬ ಕಾರಣಕ್ಕೆ ಆರೋಪಿಗಳು ಆತನನ್ನು ಕೊಲೆ ಮಾಡಲು ಸಂಚು ರೂಪಿಸಿದ್ದರು.

ಕಾಟನ್‌ಪೇಟೆ ಠಾಣೆಯ ರೌಡಿ ಪಟ್ಟಿಯಲ್ಲಿ ತಿರುಕುಮಾರನ್ ಹೆಸರಿದ್ದು, ಆತ ಚಾಮರಾಜಪೇಟೆಯ ವ್ಯಕ್ತಿಯೊಬ್ಬರನ್ನು ಕೊಲೆ ಮಾಡಲು ಸುಪಾರಿ ಪಡೆದುಕೊಂಡಿದ್ದ.  ಅಲ್ಲದೇ ಆತನ ವಿರುದ್ಧ ಕೊಲೆ, ದರೋಡೆ, ಅಪಹರಣ ಸೇರಿದಂತೆ ನಗರದ ವಿವಿಧ ಠಾಣೆಗಳಲ್ಲಿ ಸುಮಾರು 25 ಅಪರಾಧ ಪ್ರಕರಣಗಳುದಾಖಲಾಗಿದ್ದವು ಎಂದು ಪೊಲೀಸರು ತಿಳಿಸಿದ್ದಾರೆ.

ಜೈಕಾಂತ್ ಮತ್ತು ಪೀಟರ್ ವಿರುದ್ಧವೂ ಕೊಲೆ ಹಾಗೂ ಕೊಲೆ ಯತ್ನ ಪ್ರಕರಣಗಳು ದಾಖಲಾಗಿದ್ದವು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಬಂಧನ: ಸಾಲಗಾರರಿಂದ ಹೆಚ್ಚಿನ ಬಡ್ಡಿ ಪಡೆಯುತ್ತಿದ್ದ ಆರೋಪದ ಮೇಲೆ ಮಹಿಳೆ ಸೇರಿದಂತೆ ಮೂರು ಮಂದಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಇಟ್ಟಮಡುವಿನ ಪ್ರಭಾಕರ್ (36), ಕಮಲಾನಗರದ ಭಾಗ್ಯಮ್ಮ (35) ಮತ್ತು ಜೆ.ಸಿ.ನಗರದ ಜಾನಕಿರಾಂ (39) ಬಂಧಿತರು.

ಆರೋಪಿಗಳಿಂದ ಬ್ಯಾಂಕ್ ಚೆಕ್‌ಗಳು. ಛಾಪಾ ಕಾಗದಗಳು, ಆಸ್ತಿಯ ದಾಖಲೆಪತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳು ಮಾಸಿಕ ಶೇ 5ರಿಂದ 10ರಷ್ಟು ಬಡ್ಡಿ ಪಡೆಯುತ್ತಿದ್ದರು. ಅವರು ವಾರ್ಷಿಕ ಸುಮಾರು 1.20 ಕೋಟಿ ರೂಪಾಯಿ ಬಡ್ಡಿ ವ್ಯವಹಾರ ಮಾಡುತ್ತಿದ್ದರು.

ಬಂಧಿತರ ವಿರುದ್ಧ ಬಸವೇಶ್ವರನಗರ ಹಾಗೂ ಚನ್ನಮ್ಮನಕೆರೆ ಅಚ್ಚುಕಟ್ಟು ಠಾಣೆಯಲ್ಲಿ ದೂರು ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಆರು ವರ್ಷದ ಬಾಲಕಿಗೆ ಲೈಂಗಿಕ ದೌರ್ಜನ್ಯ: ಕಾಮುಕ ಸೆರೆ: ವ್ಯಕ್ತಿಯೊಬ್ಬ ಆರು ವರ್ಷದ ಬಾಲಕಿಯನ್ನು ಅಪಹರಿಸಿ ಲೈಂಗಿಕ ದೌರ್ಜನ್ಯ ನಡೆಸಲೆತ್ನಿಸಿರುವ ಘಟನೆ ಕಾಡುಗೊಂಡನಹಳ್ಳಿ ಸಮೀಪದ ಮುಕ್ತಿ ನಗರದಲ್ಲಿ ಭಾನುವಾರ ಮಧ್ಯಾಹ್ನ ನಡೆದಿದೆ.

ಈ ಸಂಬಂಧ ಬಾಲಕಿಯ ತಂದೆ ದೂರು ಕೊಟ್ಟಿದ್ದು, ಕಾಡುಗೊಂಡನಹಳ್ಳಿ ಪೊಲೀಸರು ಆರೋಪಿ ಮಝಾರ್ (31) ಎಂಬಾತನನ್ನು ಬಂಧಿಸಿದ್ದಾರೆ.

ಮಝಾರ್‌ನ ಪಕ್ಕದ ಮನೆಯ ಬಾಲಕಿ ಚಾಕೊಲೇಟ್ ತರಲು ಅಂಗಡಿಗೆ ಹೋಗುತ್ತಿದ್ದಳು. ಈ ವೇಳೆ ಆತ ಚಾಕೊಲೇಟ್ ಕೊಡಿಸುವುದಾಗಿ ನಂಬಿಸಿ ಬಾಲಕಿಯನ್ನು ಯಾಸಿನ್‌ನಗರ ರೈಲ್ವೆ ಗೇಟ್ ಬಳಿ ಕರೆದೊಯ್ದು ಲೈಂಗಿಕ ದೌರ್ಜನ್ಯ ನಡೆಸಲೆತ್ನಿಸಿದ್ದಾನೆ. ಈ ಸಂದರ್ಭದಲ್ಲಿ ಬಾಲಕಿ ಕಿರುಚಿಕೊಂಡಿದ್ದಾಳೆ.

ADVERTISEMENT

ಆಕೆಯ ಚೀರಾಟ ಕೇಳಿದ ಸ್ಥಳೀಯರು, ಘಟನಾ ಸ್ಥಳಕ್ಕೆ ಧಾವಿಸಿ ಬಾಲಕಿಯನ್ನು ರಕ್ಷಿಸಿದರು. ಅಲ್ಲದೇ ಆರೋಪಿಗೆ ಹಿಗ್ಗಾಮುಗ್ಗಾ ಥಳಿಸಿ ಠಾಣೆಗೆ ಕರೆದುಕೊಂಡು ಬಂದರು ಎಂದು ಪೊಲೀಸರು ತಿಳಿಸಿದ್ದಾರೆ.
ಮಝಾರ್ ವಿರುದ್ಧ ಅಪಹರಣ, ಹಲ್ಲೆ, ಲೈಂಗಿಕ ದೌರ್ಜನ್ಯ ಹಾಗೂ ಮಕ್ಕಳ ಮೇಲಿನ ಕ್ರೌರ್ಯದ ಆರೋಪದಡಿ ಪ್ರಕರಣ ದಾಖಲಿಸಲಾಗಿದೆ. ಆತ ಪೀಠೋಪಕರಣ ರಿಪೇರಿ ಕೆಲಸ ಮಾಡುತ್ತಾನೆ ಎಂದು ಪೊಲೀಸರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.