ADVERTISEMENT

ಕ್ಷತ್ರಿಯರಿಗೆ ಟಿಕೆಟ್‌ ನೀಡಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2018, 19:32 IST
Last Updated 7 ಏಪ್ರಿಲ್ 2018, 19:32 IST

ಬೆಂಗಳೂರು: ಎಲ್ಲ ರಾಜಕೀಯ ಪಕ್ಷಗಳು ಕ್ಷತ್ರಿಯ ಸಮುದಾಯದ ಅಭ್ಯರ್ಥಿಗಳಿಗೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಬೇಕು ಎಂದು ಅಖಿಲ ಭಾರತ ಕ್ಷತ್ರಿಯ ಮಹಾಸಭಾ ಆಗ್ರಹಿಸಿದೆ.

ಶನಿವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮಹಾಸಭಾದ ಮುಖಂಡ ಸಿ.ಎ.ಶ್ರೀಧರ್‌ ರಾಜ್‌ ಅರಸ್‌, ‘ರಾಜ್ಯದಲ್ಲಿ 30-40 ಕ್ಷತ್ರಿಯ ಪಂಗಡಗಳಿದ್ದು, ಒಂದು ಕೋಟಿಗೂ ಅಧಿಕ ಜನಸಂಖ್ಯೆಯಿದೆ. ಆದರೆ, ನಮ್ಮ ಸಮುದಾಯಕ್ಕೆ ಸಿಗಬೇಕಾದ ರಾಜಕೀಯ ಸ್ಥಾನಮಾನ ಸಿಗುತ್ತಿಲ್ಲ. ನಮ್ಮ ಸಮುದಾಯದವರಾದ ದೇವರಾಜು ಅರಸು ಹಾಗೂ ಧರ್ಮಸಿಂಗ್‌ ಮುಖ್ಯಮಂತ್ರಿಯಾಗಿ ಅಪಾರವಾದ ಸೇವೆ ಸಲ್ಲಿಸಿದ್ದಾರೆ’ ಎಂದು ಹೇಳಿದರು.

ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ರಾಷ್ಟ್ರೀಯ ಮತ್ತು ಪ್ರಾದೇಶಿಕ ಪಕ್ಷಗಳು ಕ್ಷತ್ರಿಯ ಸಮುದಾಯದ ಅಭ್ಯರ್ಥಿಗಳನ್ನು ಗುರುತಿಸಿ ಟಿಕೆಟ್‌ ನೀಡಬೇಕು. ಈ ಮೂಲಕ ಸಮುದಾಯದ ಅಭಿವೃದ್ಧಿಗೆ ಹಾಗೂ ಬೆಳವಣಿಗೆಗೆ ಅವಕಾಶ ಮಾಡಿಕೊಡಬೇಕು. ಮುಂದಿನ ಲೋಕಸಭೆ, ರಾಜ್ಯಸಭೆ, ನಗರಸಭೆ, ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿಗಳಿಗೆ ನಡೆಯುವ ಚುನಾವಣೆಯಲ್ಲಿಯೂ ಸೂಕ್ತ ಅವಕಾಶ ನೀಡಬೇಕು ಎಂದು ಆಗ್ರಹಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.