ಬೆಂಗಳೂರು: `ಗಡಿ ನಾಡಿನಲ್ಲಿ ಕನ್ನಡವನ್ನು ಕಾಪಾಡಿದಾಗ ಮಾತ್ರ ಕನ್ನಡ ಉಳಿಯಲು ಸಾಧ್ಯ~ ಎಂದು ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನದ ಅಧ್ಯಕ್ಷ ಡಾ.ಹಂಪ ನಾಗರಾಜಯ್ಯ ಹೇಳಿದರು.
ನಗರದ ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀಕೃಷ್ಣರಾಜ ಪರಿಷನ್ಮಂದಿರದಲ್ಲಿ ಕನ್ನಡ ಸಂಘರ್ಷ ಸಮಿತಿ ಬುಧವಾರ ಏರ್ಪಡಿಸಿದ್ದ ಬಹುಜನ ಕನ್ನಡಿಗರು ಪಾಕ್ಷಿಕ ಪತ್ರಿಕೆಯ ವಾರ್ಷಿಕೋತ್ಸವ ವಿಶೇಷ ಸಂಚಿಕೆ ಬಿಡುಗಡೆ ಮಾಡಿ ಮಾತನಾಡಿದರು.
`ಕನ್ನಡ ನಾಡು ಬಹಳ ವಿಸ್ತಾರವಾಗಿದ್ದು, ಗಡಿ ನಾಡಿನಲ್ಲಿ ಸಾಂಸ್ಕೃತಿಕ ಚಟುವಟಿಕೆ, ಕನ್ನಡ ಸಮ್ಮೇಳನಗಳನ್ನು ಏರ್ಪಡಿಸಿ ಕನ್ನಡವನ್ನು ಬೆಳಸಬೇಕು. ಪತ್ರಿಕೆಗಳು ಈ ನಿಟ್ಟಿನಲ್ಲಿ ಕೆಲಸಮಾಡಲು ನಾಡಿನ ಎಲ್ಲ ಚಿಂತಕರು, ಸಾಹಿತಿಗಳು, ಕನ್ನಡಪರ ಹೋರಾಟಗಾರರು ಪ್ರೋತ್ಸಾಹಿಸಬೇಕಾಗಿದೆ~ ಎಂದರು.
`ಸಾಹಿತ್ಯ ಚಟುವಟಿಕೆಗಳನ್ನು ನೀಡುವ ಅಪರೂಪದ ಪತ್ರಿಕೆ ಬಹುಜನ ಕನ್ನಡಿಗರು ಪತ್ರಿಕೆಯಾಗಿದೆ. ಅದರಲ್ಲಿ ನವ ಚಿಂತನಗಳನ್ನು ಕಾಣಬಹುದು~ ಎಂದರು.
ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಡಾ ವಸುಂಧರಾ ಭೂಪತಿ ಮಾತನಾಡಿ, `ಪತ್ರಿಕೆ ಪ್ರಾರಂಭಿಸುವುದು ಸುಲಭ ಆದರೆ ಉಳಿಸಿಕೊಂಡು ಹೋಗುವುದು ಬಹಳ ಮುಖ್ಯವಾಗಿದೆ. ಕನ್ನಡ ಲೇಖಕಿಯರನ್ನು ಬೆಳಸುವುದು ಪತ್ರಿಕೆಯಾಗಿದ್ದು, ಹೆಚ್ಚು ನಾಡಿನ ಬಗ್ಗೆ ಚಿಂತಿಸುವ ವಿಷಯಗಳು ಪತ್ರಿಕೆಯಲ್ಲಿ ಬರಲಿ~ ಎಂದರು.
ವಿರೋಧ ಬೇಡ
ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡ ವಿಭಾಗವು ಪದವಿ ತರಗತಿಗೆ ರೂಪಿಸಿರುವ ಸಾಹಿತ್ಯ ಸಲ್ಲಾಪ ಭಾಗ-2 ರಲ್ಲಿ ಡಾ.ಸಬಿಹಾ ಭೂಮಿಗೌಡ ಅವರು ಬರೆದಿರುವ `ಕೋಮುವಾದ ಮತ್ತು ಮಹಿಳೆ~ ಎಂಬ ಲೇಖನ ಹಾಗೂ ಡಾ.ಶಶಿಕಲಾ ವೀರಯ್ಯಸ್ವಾಮಿ ಬರೆದಿರುವ `ಕೃಷ್ಣನ ಕುರಿತ ಕವನ~ ವನ್ನು ಪಠ್ಯದಿಂದ ತೆಗೆದುಹಾಕಬೇಕೆಂದು ಒಂದು ಸಂಘಟನೆ ಅನಗತ್ಯ ವಿವಾದ ಮಾಡಿದೆ. ಲೇಖನದಲ್ಲಿ ಪ್ರಸ್ತಾಪಿಸಿರುವ ಘಟನೆಗಳು ಯಾವುದೇ ಒಂದು ಜಾತಿ, ಧರ್ಮದ ಪರವಾಗಿ ನಿಂತ ವಾದಗಳಾಗಿಲ್ಲ. ಮಹಿಳೆಯ ಪರವಾಗಿ ಮಾತನಾಡುವ ಈ ಲೇಖನಗಳಲ್ಲಿ ನೊಂದ ಮಹಿಳೆಯ ಬಗೆಗಿನ ಕಾಳಜಿಯು ಅಭಿವ್ಯಕ್ತವಾಗಿದೆ. ಇದು ಮಹಿಳೆಯರ ಮೇಲೆ ನಡೆಸಿದ ಬೌದ್ಧಿಕ ಹಲ್ಲೆ ಎಂದು ಹೇಳಬೇಕಾಗುತ್ತದೆ~ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕಸಾಪ ನಿಕಟಪೂರ್ವ ಗೌರವ ಕೋಶಾಧ್ಯಕ್ಷ ಪುಂಡಲೀಕ ಹಾಲಂಬಿ, ಕನ್ನಡ ಸಂಘರ್ಷ ಸಮಿತಿ ಕಾರ್ಯಾಧ್ಯಕ್ಷ ಡಾ.ಕೋ.ವೆಂ.ರಾಮಕೃಷ್ಣ ಮತ್ತು ಬಹುಜನ ಕನ್ನಡಿಗರು ಪತ್ರಿಕೆ ಸಂಪಾದಕ ರಾಮಣ್ಣ.ಎಚ್.ಕೋಡಿಹೊಸಳ್ಳಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.