ADVERTISEMENT

ಗೆಳೆಯನನ್ನು ನೆನೆದು ಕಣ್ಣೀರಿಟ್ಟ ಬರಗೂರು

ಛಾಯಾಗ್ರಾಹಕ ‘ಸುಂದರ್‌ನಾಥ ಸುವರ್ಣ ನೆನಪು’ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2013, 20:00 IST
Last Updated 17 ಡಿಸೆಂಬರ್ 2013, 20:00 IST

ಬೆಂಗಳೂರು: ‘ಅವನು ತೀರಿಕೊಂಡ ಸಂದರ್ಭದಲ್ಲಿ ನನ್ನ ಪತ್ನಿ, ಮಕ್ಕಳು ನನಗಿಂತ ಮೊದಲು ಅವನ ದರ್ಶನ ಪಡೆದಿದ್ದರು’ ಎನ್ನುತ್ತಾ  ಭಾವುಕರಾದ ಸಾಹಿತಿ ಬರಗೂರು ರಾಮಚಂದ್ರಪ್ಪ ಅವರು ಕಣ್ಣೀರಿಟ್ಟರು..

ಪ್ರೆಸ್‌ಕ್ಲಬ್‌ ಸಭಾಂಗಣದಲ್ಲಿ ಮಂಗಳ­ವಾರ ನಡೆದ ಚಲನಚಿತ್ರ ಛಾಯಾಗ್ರಾಹಕ ‘ಸುಂದರನಾಥ ಸುವರ್ಣ ನೆನಪು’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಕನ್ನಡ ಚಿತ್ರರಂಗ ಕ್ಷೇತ್ರ ಬೆಳವಣಿಗೆಗೆ ತಮ್ಮದೇ ಆದ ರೀತಿಯಲ್ಲಿ ವಿಶಿಷ್ಟ ಸೇವೆ ಸಲ್ಲಿಸಿರುವ ಸುಂದರನಾಥ ಸುವರ್ಣ ಅವರ ಹೆಸರಿನಲ್ಲಿ ಸ್ನೇಹಿತರೆಲ್ಲರೂ ಸೇರಿ ನಿಧಿ ಸ್ಥಾಪನೆ ಮಾಡಿ, ಅವರ ನೆನಪನ್ನು ಸದಾ ಹಸಿರಾಗಿಡುವ ಪ್ರಯತ್ನ ಮಾಡೋಣ’ ಎಂದು ಸಲಹೆ ನೀಡಿದರು.

‘ಸುವರ್ಣ ಕುಟುಂಬಕ್ಕೆ ನೆರವು ಅಗತ್ಯ ಬಿದ್ದರೆ ನಾವೆಲ್ಲಾ ಸೇರಿಕೊಂಡು ಸಹಾಯ ಮಾಡೋಣ ಇದಕ್ಕಾಗಿ ಯಾರ ಬಳಿ ಕೈ ಚಾಚುವುದು ಬೇಡ’ ಎಂದರು.

‘ಸಂಕಲ್ಪದಿಂದ ಸಾಧನೆಗೈದ ಉದ್ಯೋಗ ಅರಿಸಿ ಬೆಂಗಳೂರು ನಗರಕ್ಕೆ ಬಂದ ಸುವರ್ಣ ಸ್ವಂತ ಊರಿಗೆ ವಾಪಸ್ ಹೋಗಲಿಲ್ಲ. ಇರುವ ಜಾಗ­ದಲ್ಲಿಯೇ ಗೂಡುಕಟ್ಟಿಕೊಂಡು ಜೀವನ ರೂಪಿಸಿಕೊಂಡವರು.  ಆತ್ಮವಿಶ್ವಾಸವೇ ಆ ಮಟ್ಟಕ್ಕೆ ಅವರನ್ನು ಬೆಳಸಿತ್ತು’ ಎಂದು ಹೇಳಿದರು.

ಸಂಗೀತ ನಿರ್ದೇಶಕ ಹಂಸಲೇಖ ಮಾತನಾಡಿ, ‘ಎಲ್ಲರಿಗೂ ಅವರು ಸ್ನೇಹಿತ. ಒಬ್ಬ ಛಾಯಾಗ್ರಾಹಕನಿಗೆ 160ಕ್ಕೂ ಅಧಿಕ  ಚಿತ್ರಗಳಿಗೆ ಛಾಯಾಗ್ರಹಣ ಮಾಡುವ ಅವಕಾಶವು ದೊರೆತಿದ್ದು ದಾಖಲೆಯೇ ಸರಿ. ಕ್ರಿಯಾಶೀಲ, ಸೃಜನಶೀಲ ವ್ಯಕ್ತಿಯಾಗಿದ್ದರು’ ಎಂದರು.

‘ಅನ್ಯಭಾಷಿಕರ ನಿರ್ದೇಶಕರಿಗೆ ಸುವರ್ಣ ಮಾರ್ಗದರ್ಶಕರಾಗಿದ್ದರು. ಒಬ್ಬ ತಂತ್ರಜ್ಞನಿಗೆ ಇರಬೇಕಾದ ಕ್ರಿಯಾ­ಶೀಲತೆಯಿತ್ತು. ಬೇಕಾದಷ್ಟು ದೃಶ್ಯ­ಗಳನ್ನು ಕಟ್ಟುತ್ತಿದ್ದರು’ ಎಂದು ನೆನಪಿಸಿ­ಕೊಂಡರು.

ನಟ ಕಾಶೀನಾಥ್‌ ಮಾತನಾಡಿ, ‘ಅಪರೂಪದ ಅತಿಥಿಗಳು’ ಚಿತ್ರದ ಮೂಲಕ ಪ್ರಾರಂಭವಾದ ನಮ್ಮ ಒಡನಾಟ ‘ಅನಾಮಿಕ’ ಚಿತ್ರದವರೆಗೂ ಮುಂದುವರಿದಿತ್ತು. ನಮ್ಮದು ಗಂಡ­ಹೆಂಡತಿ ತರದ ಜೋಡಿಯಾಗಿತ್ತು. ಚಿಕ್ಕ ಚಿಕ್ಕ ಜಗಳಗಳು ನಡೆದು ಮತ್ತೆ ನಾವು ಒಂದಾಗುತ್ತಿದ್ದೆವು’ ಎಂದರು.

‘ಅತಿ ಹುಮ್ಮಸ್ಸಿನಿಂದ ಕೆಲಸ ಮಾಡು­ತ್ತಿ­ದ್ದರು. ಅವರಲ್ಲಿನ ಹುಮ್ಮಸ್ಸನ್ನು ಯಾವ ಛಾಯಾಗ್ರಾಹಕನಲ್ಲಿಯೂ ನಾವು ಇದುವರೆಗೂ ನೋಡಿಲ್ಲ. ಅವರು ಮಾಡಿದ ಸಾಧನೆ ಎಂದಿಗೂ ಹಚ್ಚ ಹಸಿರು’ ಎಂದು ಹೇಳಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.