ADVERTISEMENT

ಗೋಪ್ಯ ಸಭೆ ಕರೆದು ಸುತ್ತೋಲೆ ತಿದ್ದಿದರು!

ಎಂ.ಸಿ.ಮಂಜುನಾಥ
Published 15 ಏಪ್ರಿಲ್ 2018, 19:36 IST
Last Updated 15 ಏಪ್ರಿಲ್ 2018, 19:36 IST
ಗೋಪ್ಯ ಸಭೆ ಕರೆದು ಸುತ್ತೋಲೆ ತಿದ್ದಿದರು!
ಗೋಪ್ಯ ಸಭೆ ಕರೆದು ಸುತ್ತೋಲೆ ತಿದ್ದಿದರು!   

ಬೆಂಗಳೂರು: ‘ಕ್ವೀನ್ ಲತೀಫಾ’ ಕುದುರೆಯ ಮೂತ್ರವನ್ನು ನಿಯಮಬಾಹಿರವಾಗಿ ಮಾರಿಷಸ್‌ನ ‘ಕ್ವಾಂಟಿ ಲ್ಯಾಬ್‌’ಗೆ ಕಳುಹಿಸಿ ತಮಗೆ ಬೇಕಾದಂತೆ ವರದಿ ತರಿಸಿಕೊಂಡಿದ್ದ ಬಿಟಿಸಿಯ ಕೆಲ ಅಧಿಕಾರಿಗಳು, ಕುದುರೆಗೆ ಉದ್ದೀಪನ ನೀಡಿಲ್ಲ ಎಂಬುದನ್ನು ಸಾಬೀತುಪಡಿಸಲು 2017ರ ಏ.27ರಂದು ಬಿಟಿಸಿಯಲ್ಲಿ ಗೋಪ್ಯ ಸಭೆ ನಡೆಸಿ ಹಿಂದಿನ ಸುತ್ತೋಲೆ ತಿದ್ದಿದ್ದರು.

ಸಿಐಡಿ ಅಧಿಕಾರಿಗಳು ನ್ಯಾಯಾಲಯಕ್ಕೆ ಸಲ್ಲಿಸಿರುವ 680 ಪುಟಗಳ ಆರೋಪಪಟ್ಟಿಯಲ್ಲಿ ಈ ಅಂಶವನ್ನು ಉಲ್ಲೇಖಿಸಿದ್ದಾರೆ.

‘ಬೆಂಗಳೂರು ಟರ್ಫ್‌ ಕ್ಲಬ್‌ (ಬಿಟಿಸಿ) ಸಿಇಒ ನಿರ್ಮಲ್ ಪ್ರಸಾದ್, ಮುಖ್ಯ ಸ್ಟೀವರ್ಡ್ ವಿವೇಕ್ ಉಭಯ್‌ಕರ್ ಹಾಗೂ ಸ್ಟೈಫಂಡರಿ ಅಧಿಕಾರಿ ಪ್ರದ್ಯುಮ್ನ ಸಿಂಗ್ ಅವರು ಭಾರೀ ತಂತ್ರ ನಡೆಸಿ ಪ್ರಕರಣವನ್ನು ಮುಚ್ಚಿ ಹಾಕಲು ಹೊರಟಿದ್ದರು’ ಎಂದು ಕ್ಲಬ್‌ನ ಹಿಂದಿನ ಅಧ್ಯಕ್ಷ ಎನ್‌. ಹರೀಂದ್ರಶೆಟ್ಟಿ ನೀಡಿರುವ ಹೇಳಿಕೆ ಸಹ ಅದರಲ್ಲಿದೆ.

ADVERTISEMENT

‘ಕ್ವೀನ್ ಲತೀಫಾ ಕುದುರೆ ಮೂತ್ರದಲ್ಲಿ ಪ್ರೊಕೈನ್ ಅಂಶ ಪತ್ತೆಯಾಗಿದೆ’ ಎಂದು ದೆಹಲಿಯ ನ್ಯಾಷನಲ್ ಡೋಪಿಂಗ್ ಟೆಸ್ಟ್ ಲ್ಯಾಬೊರೇಟರಿ (ಎನ್‌ಡಿಟಿಎಲ್) ಮಾರ್ಚ್ 23ರಂದೇ ಬಿಟಿಸಿಗೆ ವರದಿ ಕೊಟ್ಟಿತ್ತು. ಪ್ರದ್ಯುಮ್ನ ಅದನ್ನು ನಿರ್ಮಲ್‌ಗೆ ತಲುಪಿಸಿದ್ದರು. ವರದಿಯನ್ನು ಅಲ್ಮೆರಾದಲ್ಲಿ ಇಟ್ಟು ಲಾಕ್ ಮಾಡಿದ ಅವರು, ‘ಇದರ ಬಗ್ಗೆ ತಲೆ ಕೆಡಿಸಿಕೊಳ್ಳಬೇಡ. ಹತ್ತು ದಿನ ರಜೆ ಹೋಗು. ನಾನು ನೋಡಿಕೊಳ್ಳುತ್ತೇನೆ’ ಎಂದು ಹೇಳಿ ಪ್ರದ್ಯುಮ್ನಗೆ ರಜೆ ಮಂಜೂರು ಮಾಡಿದ್ದರು ಎಂದು ಆರೋಪ ಪಟ್ಟಿಯಲ್ಲಿದೆ.

ಹರೀಂದ್ರ ಶೆಟ್ಟಿ ಹೇಳಿಕೆ: ‘ಎನ್‌ಡಿಟಿಎಲ್‌ನಿಂದ ವರದಿ ಬಂದ ವಿಚಾರ ಏಪ್ರಿಲ್ ಮೊದಲ ವಾರದಲ್ಲಿ ನನಗೆ ಗೊತ್ತಾಯಿತು. ಅಷ್ಟು ಗಂಭೀರ ವಿಚಾರವನ್ನು ನನ್ನ ಗಮನಕ್ಕೆ ತಾರದೆ ಮುಚ್ಚಿಟ್ಟಿದ್ದರ ಬಗ್ಗೆ ಪ್ರದ್ಯುಮ್ನ ಅವರನ್ನು ವಿಚಾರಿಸಿದೆ. ‘ಸಿಇಒ ಸೂಚನೆ ಮೇರೆಗೆ ನಡೆದುಕೊಂಡಿದ್ದೇನೆ. ಅವರನ್ನು ಎದುರು ಹಾಕಿಕೊಳ್ಳುವ ಧೈರ್ಯ ನನಗಿರ
ಲಿಲ್ಲ’ ಎಂದು ಹೇಳಿದರು. ಏನೋ ಕುತಂತ್ರ ನಡೆಯುತ್ತಿದೆ ಎಂಬುದು ಆಗ ನನ್ನ ಅರಿವಿಗೆ ಬಂತು’ ಎಂದು ಹರೀಂದ್ರ ಶೆಟ್ಟಿ ಹೇಳಿಕೆ ಕೊಟ್ಟಿದ್ದಾರೆ.

‘ನಿರ್ಮಲ್ ಪ್ರಸಾದ್ ಅವರನ್ನು ವಿಚಾರಿಸಿದಾಗ, ‘ಕೆಲಸದ ಒತ್ತಡಗಳ ಮಧ್ಯೆ ವರದಿಯ ವಿಚಾರವನ್ನು ನಿಮ್ಮ ಗಮನಕ್ಕೆ ತರುವುದೇ ಮರೆತು ಹೋಯಿತು’ ಎಂಬ ಹಾರಿಕೆಯ ಉತ್ತರ ನೀಡಿದರು. ಹೀಗಾಗಿ, ಕ್ಲಬ್ ನಿಯಮ ಉಲ್ಲಂಘನೆ ಸಂಬಂಧ ಆಡಳಿತ ಮಂಡಳಿಗೆ ದೂರು ನೀಡಿದ ನಾನು, ಆಂತರಿಕ ತನಿಖೆ ನಡೆಸಬೇಕು ಹಾಗೂ ಅಲ್ಲಿಯವರೆಗೂ ನಿರ್ಮಲ್ ಅವರನ್ನು ಅಮಾನತುಗೊಳಿಸಬೇಕು ಎಂದೂ ಮನವಿ ಮಾಡಿದ್ದೆ. ಆದರೆ, ಮುಖ್ಯ ಸ್ಟೀವರ್ಡ್ ವಿವೇಕ್ ಉಭಯ್‌ಕರ್ (ಆರೋಪಿ) ನೇತೃತ್ವದ 9 ಅಧಿಕಾರಿಗಳ ಸಮಿತಿ ತನಿಖೆಗೂ ಆದೇಶಿಸದೆ, ಅಮಾನತನ್ನೂ ಮಾಡದೆ ಸಿಇಒ ಪರ ನಿಂತುಕೊಂಡಿತು.’

‘ಯಾವುದೇ ಆರೋಪಗಳು ಇಲ್ಲದಿದ್ದರೂ ಸಮಿತಿ ರಾತ್ರೋರಾತ್ರಿ ನನ್ನನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಿತು. ಆ ನಂತರ ಸ್ಟೀವರ್ಡ್‌ ಆಗಿಯೇ ಕಾರ್ಯನಿರ್ವಹಿಸಿ, 2017ರ ಸೆಪ್ಟಂಬರ್‌ನಲ್ಲಿ ನಿವೃತ್ತಿ ಹೊಂದಿದೆ’ ಎಂದು ಅವರು ಅಧಿಕಾರಿಗಳಿಗೆ ವಿವರಿಸಿದ್ದಾರೆ.

ಪೇಚಿಗೆ ಸಿಲುಕಿದರು: ‘2016ರ ಜ.17ರಂದು ಸ್ಟೀವರ್ಡ್‌ಗಳು ಎಲ್ಲ ತರಬೇತುದಾರರಿಗೂ ಸುತ್ತೋಲೆ ಕಳುಹಿಸಿದ್ದರು. ‘ಕುದುರೆಗೆ ಉದ್ದೀಪನಾ ಮದ್ದು ನೀಡಿರುವುದು ದೃಢಪಟ್ಟಿದೆ ಎಂದು ಒಂದು ಪ್ರಯೋಗಾಲಯ ವರದಿ ಕೊಟ್ಟರೆ, ತಾವು ಕ್ಲಬ್‌ನೊಂದಿಗೆ ಒಪ್ಪಂದ ಮಾಡಿಕೊಂಡಿರುವ ಬೇರೆ ಯಾವುದೇ ಲ್ಯಾಬ್‌ಗಳಲ್ಲಿ ಬೇಕಾದರೂ ಮತ್ತೊಮ್ಮೆ ತಪಾಸಣೆ ಮಾಡಿಸಬಹುದು’ ಎಂದು ಅದರಲ್ಲಿತ್ತು. ಕ್ಲಬ್‌ ಒಪ್ಪಂದ ಮಾಡಿಕೊಂಡಿರುವ ಪ್ರಯೋಗಾಲಗಳ ಪಟ್ಟಿಯಲ್ಲಿ ‘ಕ್ವಾಂಟಿ ಲ್ಯಾಬ್‌’ನ ಹೆಸರು ಇರಲಿಲ್ಲ. ಆದರೂ, ಕ್ವೀನ್ ಲತೀಫಾ ಪ್ರಕರಣದಲ್ಲಿ ಏ.26ರಂದು ಆ ಲ್ಯಾಬ್‌ನಿಂದ ನಿಯಮಬಾಹಿರವಾಗಿ 2ನೇ ವರದಿ ತರಿಸಿಕೊಂಡಿದ್ದರು.’

‘ಮರುದಿನವೇ ನಗರದ ಕ್ಯಾಪಿಟಲ್ ಹೋಟೆಲ್‌ನಲ್ಲಿ ಪ‍ತ್ರಿಕಾಗೋಷ್ಠಿ ನಡೆಸಿ, ಮಾಧ್ಯಮ ಪ್ರತಿನಿಧಿಗಳಿಗೆ ಕ್ವಾಂಟಿ ಲ್ಯಾಬ್‌ನ ವರದಿ ಪ್ರತಿಗಳನ್ನು ಹಂಚಿದ್ದರು. ಈ ಮೂಲಕ ‘ಕ್ವೀನ್‌ ಲತೀಫಾಗೆ ಉದ್ದೀಪನಾ ಮದ್ದು ನೀಡಲಾಗಿದೆ ಎಂಬ ಆರೋಪ ಸುಳ್ಳು’ ಎಂದು ಬಿಂಬಿಸಲು ಹೊರಟಿದ್ದರು. ಆದರೆ, ಸ್ಥಳೀಯ ಸುದ್ದಿವಾಹಿನಿಯೊಂದು ಬಿಟಿಸಿ 2016ರಲ್ಲಿ ಹೊರಡಿಸಿದ್ದ ಸುತ್ತೋಲೆಯ ಸಮೇತ ಸುದ್ದಿ ಪ್ರಸಾರ ಮಾಡಿತು. ಕ್ಲಬ್‌ ಪಟ್ಟಿಯಲ್ಲಿ ‘ಕ್ವಾಂಟಿ ಲ್ಯಾಬ್‌’ನ ಹೆಸರೇ ಇಲ್ಲ ಎಂಬುದನ್ನು ಬಹಿರಂಗಪಡಿಸಿತ್ತು. ಇದರಿಂದ ಸಿಇಒ, ಸ್ಟೀವರ್ಡ್ ಹಾಗೂ ಸ್ಟೈಫಂಡರಿ ಅಧಿಕಾರಿ ಪೇಚಿಗೆ ಸಿಲುಕಿದ್ದರು.’

‘ಬಳಿಕ ನನಗೇ ತಿಳಿಯದಂತೆ ಅದೇ ದಿನ ಮಧ್ಯಾಹ್ನ 1.30ರ ಸುಮಾರಿಗೆ ಗೋಪ್ಯ ಸಭೆ ನಡೆಸಿ, ಹಳೇ ಸುತ್ತೋಲೆಯನ್ನು ತಿದ್ದಿದ್ದರು. ಕ್ಲಬ್‌ನ ಪಟ್ಟಿಯಲ್ಲಿ ‘ಕ್ವಾಂಟಿ ಲ್ಯಾಬ್‌’ನ ಹೆಸರನ್ನೂ ಸೇರಿಸಿದ್ದರು. ಅಲ್ಲದೆ, ಕೊರಿಯರ್ ಬಾಯ್ ಅರುಣ್‌ ಕುಮಾರ್ ಹಾಗೂ ಟೆಲಿಫೋನ್ ಆಪರೇಟರ್ ರೇಖಾ ಅವರನ್ನು ಬಳಸಿಕೊಂಡು ನನ್ನನ್ನೂ ಸಭೆಗೆ ಆಹ್ವಾನಿಸಿರುವಂತೆ ನಕಲಿ ದಾಖಲೆಗಳನ್ನು ಸೃಷ್ಟಿಸಿದ್ದರು’ ಎಂದು ಹರೀಂದ್ರಶೆಟ್ಟಿ ನೀಡಿರುವ ಹೇಳಿಕೆ ಆರೋಪಪಟ್ಟಿಯಲ್ಲಿದೆ.

‘ಬ್ಲ್ಯಾಕ್‌ಮೇಲ್‌ಗೆ ಬೆದರಿದೆ’
‘ಏ.26ರ ಸಂಜೆ ನನ್ನನ್ನು ಕರೆದ ಸಿಇಒ, ‘ಸಭೆಯ ಕಾರ್ಯಸೂಚಿಯನ್ನು (ಅಜೆಂಡಾ) ಕ್ಲಬ್ ಸದಸ್ಯ ಸಿ.ವಿವೇಕಾನಂದ ಅವರಿಗೆ ಮಾತ್ರ ತಲುಪಿಸು. ಹರೀಂದ್ರ ಶೆಟ್ಟಿಗೆ ನೀಡಬೇಡ’ ಎಂದರು. ಅಂತೆಯೇ ನಾನು ಹಿಂದಿನ ಅಧ್ಯಕ್ಷರಿಗೆ ಅಜೆಂಡಾ ತಲುಪಿಸಿರಲಿಲ್ಲ. ಮರುದಿನ ಸಭೆ ಮುಗಿದ ಬಳಿಕ ಪುನಃ ಕರೆದ ಅವರು, ಹರೀಂದ್ರಶೆಟ್ಟಿಗೂ ಅಜೆಂಡಾ ತಲುಪಿಸಿರುವುದಾಗಿ ನೋಂದಣಿ ಪುಸ್ತಕದಲ್ಲಿ ಬರೆಯುವಂತೆ ಸೂಚಿಸಿದರು. ಅದಕ್ಕೆ ಒಪ್ಪದಿದ್ದಾಗ, ಕೆಲಸದಿಂದ ತೆಗೆದುಹಾಕುವುದಾಗಿ ಬ್ಲ್ಯಾಕ್‌ಮೇಲ್ ಮಾಡಿ ಹಾಗೆ ಬರೆಸಿದ್ದರು’ ಎಂದು ಅರುಣ್‌ಕುಮಾರ್ ತನಿಖಾಧಿಕಾರಿಗಳಿಗೆ ಹೇಳಿಕೆ ಕೊಟ್ಟಿದ್ದಾರೆ.

‘ಸಭೆಗೆ ಕರೆದಿರಲಿಲ್ಲ’
‘ಕ್ಲಬ್‌ನಲ್ಲಿ ಸಭೆಗಳಿದ್ದಾಗ ಎಲ್ಲ ಸದಸ್ಯರಿಗೂ ಕರೆ ಮಾಡಿ ತಿಳಿಸುವುದು ನನ್ನ ಕೆಲಸ. ‘ಏ.27ರ ಸಭೆ ಇರುವ ಬಗ್ಗೆ ಹರೀಂದ್ರ ಶೆಟ್ಟಿ, ಅಜಿತ್ ಸಲ್ಡಾನಾ, ಕೆನತ್ ಪಿಂಟೊ, ವೈ.ಜಗನ್ನಾಥ್, ರೋಷನ್ ತಲ್ವಾರ್ ಹಾಗೂ ಎಲ್.ವಿವೇಕಾನಂದ ಅವರಿಗೆ ಕರೆ ಮಾಡಿ ತಿಳಿಸಿದ್ದೇನೆ’ ಎಂದು ನಿರ್ವಹಣಾ ಪುಸ್ತಕದಲ್ಲಿ ಬರೆಯುವಂತೆ ಸಿಇಒ ಹಾಗೂ ಮುಖ್ಯ ಸ್ಟೈಫಂಡರಿ ಅಧಿಕಾರಿ ಬಲವಂತ ಮಾಡಿದರು. ಅಂತೆಯೇ ಆ ಹೆಸರುಗಳನ್ನು ಬರೆದಿದ್ದೆ. ವಾಸ್ತವವಾಗಿ ಸಭೆಗೆ ಹರೀಂದ್ರಶೆಟ್ಟಿಗೆ ಆಹ್ವಾನಿಸಿರಲಿಲ್ಲ’ ಎಂದು ರೇಖಾ ಹೇಳಿಕೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.