ADVERTISEMENT

ಗೋವಿಂದ ಕಾರಜೋಳ ಧರಣಿ

​ಪ್ರಜಾವಾಣಿ ವಾರ್ತೆ
Published 5 ಜೂನ್ 2013, 19:37 IST
Last Updated 5 ಜೂನ್ 2013, 19:37 IST

ಬೆಂಗಳೂರು: `ನನ್ನ ಕ್ಷೇತ್ರದಲ್ಲಿ (ಮುಧೋಳ) ಬಡವರು ಸಾಗುವಳಿ ಜಮೀನಿನಲ್ಲಿ ಮನೆಗಳನ್ನು ನಿರ್ಮಿಸಿಕೊಂಡಿದ್ದಾರೆ. ಈಗ ಏಕಾಏಕಿ ಅವುಗಳನ್ನು ತೆರವುಗೊಳಿಸುವುದು ಸರಿಯಲ್ಲ. ಇದನ್ನು ತಡೆಯಬೇಕು' ಎಂದು ಗೋವಿಂದ ಕಾರಜೋಳ ವಿಧಾನಸಭೆಯಲ್ಲಿ ಪಟ್ಟು ಹಿಡಿದರು.

ಸಣ್ಣ ಹಿಡುವಳಿದಾರರ ರಕ್ಷಣೆಗೆ ಕಾನೂನಿನ ವ್ಯಾಪ್ತಿ ಒಳಗೆ ಕ್ರಮಕೈಗೊಳ್ಳಲಾಗುವುದು ಎಂದು ಅರಣ್ಯ ಸಚಿವ ಬಿ.ರಮಾನಾಥ ರೈ ನೀಡಿದ ಉತ್ತರದಿಂದ ತೃಪ್ತರಾಗದ ಕಾರಜೋಳ, ಸಭಾಧ್ಯಕ್ಷರ ಪೀಠದ ಮುಂಭಾಗಕ್ಕೆ ಬಂದು ಧರಣಿ ನಡೆಸಿದರು.

`ಸರ್ಕಾರವು ಸುಪ್ರೀಂ ಕೋರ್ಟ್ ಆದೇಶದ ಪ್ರಕಾರವೇ ಉತ್ತರ ನೀಡಬೇಕಾಗುತ್ತದೆ. ಆದರೆ, ಆ ಪ್ರಕಾರ ಉತ್ತರ ನೀಡಿ ಸುಮ್ಮನಾದರೆ ಸಮಸ್ಯೆ ಬಗೆಹರಿಯುವುದಿಲ್ಲ. ಪಾರಂಪರಿಕ ಅರಣ್ಯ ರಕ್ಷಣೆ ಕಾನೂನು ಪ್ರಕಾರ ಸಾಗುವಳಿದಾರರಿಗೆ ರಕ್ಷಣೆ ನೀಡಬಹುದು. ಆ ನಿಟ್ಟಿನಲ್ಲಿ ಪ್ರಯತ್ನ ಮಾಡೋಣ' ಎಂದು ಕಾಗೋಡು ತಿಮ್ಮಪ್ಪ ಹೇಳಿದರು. ಸಚಿವ ರೈ ಅವರೂ ಇದಕ್ಕೆ ಸ್ಪಂದಿಸಿದ್ದರಿಂದ ಕಾರಜೋಳ ಅವರು ಧರಣಿ ಕೈಬಿಟ್ಟರು.

ಶಿವಮೂರ್ತಿಗೆ ಖಡಕ್ ಎಚ್ಚರಿಕೆ
ಅರಣ್ಯ ಸಾಗುವಳಿ ಭೂಮಿ ತೆರವು ವಿಷಯದ ಬಗ್ಗೆ ಚರ್ಚೆ ನಡೆಯುವಾಗ ಬಿಜೆಪಿಯ ಸಿ.ಟಿ.ರವಿ, ಆರ್.ಅಶೋಕ ಮತ್ತು ಕಾಂಗ್ರೆಸ್‌ನ ಕೆ.ಶಿವಮೂರ್ತಿ ನಾಯಕ ಅವರ ಮಧ್ಯೆ ಮಾತಿನ ಚಕಮಕಿ ನಡೆಯಿತು. ಬಿಜೆಪಿ ಸದಸ್ಯರು ಮಾತನಾಡುವಾಗ ಶಿವಮೂರ್ತಿ ಅವರು ಪದೇ ಪದೇ ಎದ್ದು ನಿಂತು ಟೀಕೆ ಮಾಡಲು ಮುಂದಾದರು. ಹೀಗಾಗಿ ಸದನದಲ್ಲಿ ಆರೋಪ - ಪ್ರತ್ಯಾರೋಪ ಕೇಳಿಬಂತು.

ಈಗ ಉಂಟಾಗಿರುವ ಸಮಸ್ಯೆಗೆ ಬಿಜೆಪಿಯವರೇ ಕಾರಣ. ಅವರಿಗೆ ಅರಣ್ಯ ಕಾಯ್ದೆ ಗೊತ್ತಿಲ್ಲ. ಮೂರು ವರ್ಷದ ಹಿಂದೆ ಕಾಯ್ದೆ ಜಾರಿಗೆ ಬಂದಿದ್ದರೂ ಅನುಷ್ಠಾನಗೊಳಿಸಿರಲಿಲ್ಲ ಎಂದು ಶಿವಮೂರ್ತಿ ಆರೋಪಿಸಿದರು. ಇದರಿಂದ ಕೆರಳಿದ ಅಶೋಕ, `ಸಚಿವರಿಗೆ (ರಮಾನಾಥ ರೈ) ಸಾಮರ್ಥ್ಯ ಇಲ್ಲದಿದ್ದರೆ ಅವರನ್ನು (ಶಿವಮೂರ್ತಿ) ಬಳಸಿಕೊಳ್ಳಲಿ. ನಾವು ಅವರಿಗೆ ಪ್ರಶ್ನೆ ಕೇಳಿಲ್ಲ' ಎಂದು ಏರಿದ ಧ್ವನಿಯಲ್ಲಿ ಹೇಳಿದರು. ರವಿ, ಜೀವರಾಜ್, ವಿಶ್ವೇಶ್ವರ ಹೆಗಡೆ ಕಾಗೇರಿ ಸೇರಿದಂತೆ ಅನೇಕ ಸದಸ್ಯರು ಶಿವಮೂರ್ತಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಸ್ವಲ್ಪ ಹೊತ್ತು ಸದನದಲ್ಲಿ ಕಾವೇರಿದ ವಾತಾವರಣ ನಿರ್ಮಾಣವಾಯಿತು.

ಸುಮ್ಮನಿರುವಂತೆ 3-4 ಬಾರಿ ಸಭಾಧ್ಯಕ್ಷರು ಹೇಳಿದರೂ ಶಿವಮೂರ್ತಿ ಮಾತನಾಡುತ್ತಲೇ ಇದ್ದರು. ಇದರಿಂದ ಸಿಟ್ಟಿಗೆದ್ದ ಕಾಗೋಡು ತಿಮ್ಮಪ್ಪ, `ಸುಮ್ಮನೆ ಕುಳಿತುಕೊಳ್ಳಿ. ಇಲ್ಲದಿದ್ದರೆ ಹೊರಗೆ ಹೋಗುವಂತೆ ಹೇಳಬೇಕಾಗುತ್ತದೆ' ಎಂದು ಖಡಕ್ಕಾಗಿ ಹೇಳಿದರು. ಇದಾದ ನಂತರ ಸದನದ ಕಲಾಪ ಸುಗಮವಾಗಿ ನಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.