ಬೆಂಗಳೂರು: `ಚಲನಚಿತ್ರ ಸಬ್ಸಿಡಿ ಸಲಹಾ ಸಮಿತಿಯ ಕೆಲವರ ಮೇಲೆ ಲಂಚ ಪಡೆದ ಆರೋಪ ಇರುವ ಮಾತ್ರಕ್ಕೆ ಇಡೀ ಸಮಿತಿಯನ್ನೇ ವಜಾಗೊಳಿಸುವುದು ತಪ್ಪು ಹಾಗೂ ಸಮಿತಿಯು ಆಯ್ಕೆ ಮಾಡಿದ ಚಿತ್ರಗಳಲ್ಲಿ ಉತ್ತಮ ಚಿತ್ರಗಳು ಇವೆ. ಈ ದೃಷ್ಟಿಯಲ್ಲಿ ಆಯ್ಕೆಯಾದ ಚಿತ್ರಗಳನ್ನು ತಿರಸ್ಕರಿಸುವುದು ಸೂಕ್ತವಲ್ಲ~ ಎಂದು ನಿರ್ಮಾಪಕರ ಒಂದು ಬಣ ಅಭಿಪ್ರಾಯಪಟ್ಟಿದೆ.
ನಗರದಲ್ಲಿ ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಿರ್ಮಾಪಕ ಬಿ.ಸಿ.ಪಾಟೀಲ್, `ಲಂಚ ಪಡೆದ ವ್ಯಕ್ತಿಗಳಿಗೆ ಶಿಕ್ಷೆಯಾಗಬೇಕು. ಆದರೆ ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಎಂಬಂತೆ ಆಗಬಾರದು. ಆಯ್ಕೆಯಾದ ಸಿನಿಮಾಗಳನ್ನು ಯಾವುದೇ ಕಾರಣಕ್ಕೂ ಪಟ್ಟಿಯಿಂದ ಕೈಬಿಡಬಾರದು. ಒಂದು ವೇಳೆ ಸಿನಿಮಾಗಳನ್ನು ತಿರಸ್ಕರಿಸಿದರೆ ನಿರ್ಮಾಪಕರಿಗೆ ಅನ್ಯಾಯವಾಗುತ್ತದೆ~ ಎಂದರು.
`ಯಾರೊ ಒಬ್ಬ ಸಚಿವರು ತಪ್ಪು ಮಾಡಿದರೆ ಸರ್ಕಾರದಲ್ಲಿ ಇದ್ದವರೆಲ್ಲರೂ ರಾಜೀನಾಮೆ ನೀಡುವುದಿಲ್ಲ. ಆದ್ದರಿಂದ ಹೊಸ ಸಬ್ಸಿಡಿ ಸಮಿತಿ ರಚನೆ ಮಾಡುವ ಅಗತ್ಯವಿಲ್ಲ. ರಿಮೇಕ್ ಮತ್ತು ಅಶ್ಲೀಲ ಚಿತ್ರಗಳು ಆಯ್ಕೆ ಪಟ್ಟಿಯಲ್ಲಿ ಇದ್ದಲ್ಲಿ ಅವುಗಳನ್ನು ಹೊರತುಪಡಿಸಿ ಉಳಿದ ಚಿತ್ರಗಳಿಗೆ ಸಹಾಯಧನ ಸಿಗಬೇಕು~ ಎಂದು ಅವರು ಒತ್ತಾಯಿಸಿದರು.
`ದೇವರು ಕೊಟ್ಟ ತಂಗಿ~ ಚಿತ್ರದ ನಿರ್ಮಾಪಕ ಸಾಯಿಪ್ರಕಾಶ್ ಮಾತನಾಡಿ, `ನನ್ನ ಚಿತ್ರವು ಸಹಾಯಧನ ಪಟ್ಟಿಯಲ್ಲಿದೆ. ಆದರೆ ನಾನು ಲಂಚ ಕೊಟ್ಟಿಲ್ಲ. ಈ ಬಾರಿ ಘೋಷಿಸುತ್ತಿರುವುದು 2009-10ನೇ ಸಾಲಿನ ಸಹಾಯಧನ. ಈಗಾಗಲೇ ಸಹಾಯಧನ ನೀಡಿಕೆ ವಿಳಂಬವಾಗಿದೆ. ಈಗ ಸರ್ಕಾರ ನಿರ್ಧಾರ ಬದಲಿಸಿದರೆ ಆಯ್ಕೆ ಪಟ್ಟಿಯಲ್ಲಿರುವ ಸಿನಿಮಾಗಳ ನಿರ್ಮಾಪಕರಿಗೆ ಮತ್ತಷ್ಟು ತೊಂದರೆಯಾಗಲಿದೆ~ ಎಂದು ಹೇಳಿದರು.
ನಿರ್ಮಾಪಕ ಜಯಸಿಂಹ ಮುಸುರಿ, `ಲಂಚ ಪಡೆದಿರುವುದು ಎಷ್ಟು ತಪ್ಪೋ, ಲಂಚ ನೀಡಿರುವುದು ಅಷ್ಟೇ ತಪ್ಪು. ಪ್ರಶಸ್ತಿ ಆಸೆಗಾಗಿಯೇ ಕೆಲವರು ಲಂಚ ಕೊಟ್ಟಿದ್ದಾರೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಹಾಗೆ ಲಂಚ ನೀಡಿದ ನಿರ್ಮಾಪಕರೊಬ್ಬರು ತಮಗೆ ಪ್ರಶಸ್ತಿ ದೊರೆಯಲಿಲ್ಲ ಎಂಬ ಕಾರಣಕ್ಕೆ ಉಳಿದವರಿಗೂ ಪ್ರಶಸ್ತಿ ಬರದಂತೆ ತಡೆಯುವುದು ಸರಿಯಲ್ಲ~ ಎಂದು ಅವರು ಅಭಿಪ್ರಾಯಪಟ್ಟರು.
`ಇನ್ನು ಮುಂದೆ ಕನ್ನಡದಲ್ಲಿ ನಿರ್ಮಾಣವಾಗುವ ಎಲ್ಲ ಚಿತ್ರಗಳಿಗೂ ಸಹಾಯಧನ ದೊರೆಯುವಂತಾಗಬೇಕು. ಹಣದ ಮೊತ್ತ ಕಡಿಮೆಯಾದರೂ ಚಿಂತೆಯಿಲ್ಲ. ಸಹಾಯಧನ ಸಮವಾಗಿ ಹಂಚಿಕೆಯಾಗಬೇಕು~ ಎಂದು ನಿರ್ಮಾಪಕ ಅಭಿಜಿತ್ ಹೇಳಿದರು.
ನಿರ್ಮಾಪಕಿ ವಿಜಯಲಕ್ಷ್ಮಿಸಿಂಗ್, `ಬಡ್ಡಿ ಅಥವಾ ಸಾಲ ತೀರಿಸಲು ಸಹಾಯಧನದ ಹಣ ನೆರವಾಗುತ್ತದೆ. ಈಗಾಗಲೇ ನಿರ್ಮಾಪಕರು ಸಂಕಷ್ಟದಲ್ಲಿದ್ದಾರೆ. ಅಂತಹವರನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡುವ ಅಗತ್ಯವಿಲ್ಲ. ಪ್ರತಿ ವರ್ಷ ಇಂತಹ ಸಮಸ್ಯೆಗಳು ಉದ್ಭವಿಸುತ್ತಿರುತ್ತವೆ. ಆದ್ದರಿಂದ ಸಮಸ್ಯೆಗೆ ತಾತ್ವಿಕ ಪರಿಹಾರ ಕಂಡುಕೊಳ್ಳಬೇಕಿದೆ~ ಎಂದರು.
ನಿರ್ಮಾಪಕಿ ಇಂದುಮತಿ ರಮೇಶ್, `ನಮ್ಮ `ಪೊಲೀಸ್ ಕ್ವಾಟ್ರಸ್~ ಚಿತ್ರ ರಿಮೇಕ್ ಅಲ್ಲ ಎಂಬುದನ್ನು ರಿಮೇಕ್ ಚಿತ್ರಗಳ ಪರಿಶೋಧನಾ ಸಮಿತಿ ಘೋಷಿಸಿದೆ. ಈ ಸಂಬಂಧ ಕಾನೂನು ಹೋರಾಟವನ್ನು ನಡೆಸಲಾಗಿದೆ. ಚಿತ್ರ ರಿಮೇಕ್ ಅಲ್ಲ ಎಂಬುದಕ್ಕೆ ಅಗತ್ಯ ಪುರಾವೆಗಳಿವೆ~ ಎಂದು ತಿಳಿಸಿದರು.
ನಿರ್ಮಾಪಕರಾದ ಅಣಜಿ ನಾಗರಾಜ್, ಎ.ನಾಗೇಶ್ ಮತ್ತಿತರರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.