ADVERTISEMENT

ಚಿತ್ರಗಳು ಸಮಾಜ ಬದಲಾವಣೆಗೆ ಪೂರಕವಾಗಲಿ

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2011, 19:30 IST
Last Updated 10 ಸೆಪ್ಟೆಂಬರ್ 2011, 19:30 IST

ಬೆಂಗಳೂರು: ಇಂದಿನ ಚಿತ್ರಗಳಲ್ಲಿ ಅಶ್ಲೀಲ, ಅಪರಾಧ, ಕ್ರೌರ್ಯ ವಿಜೃಂಭಿಸುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಹಿರಿಯ ಪಂಚಭಾಷಾ ನಟಿ `ಸಾಹುಕಾರ್~ ಜಾನಕಿ, ಸಮಾಜದಲ್ಲಿ ಬದಲಾವಣೆ ತರುವಂತಹ ಚಿತ್ರಗಳನ್ನು ನಿರ್ಮಿಸಲು ಚಿತ್ರೋದ್ಯಮ ಚಿಂತಿಸಬೇಕು ಎಂದು ಮನವಿ ಮಾಡಿದರು.

ಕರ್ನಾಟಕ ಚಲನಚಿತ್ರ ಅಕಾಡೆಮಿ ಬಾದಾಮಿ ಹೌಸ್‌ನ ಪ್ರಿಯದರ್ಶಿನಿ ಚಿತ್ರಮಂದಿರದಲ್ಲಿ ಶನಿವಾರ ಹಮ್ಮಿಕೊಂಡಿದ್ದ 22ನೇ `ಬೆಳ್ಳಿ ಹೆಜ್ಜೆ~ ಮುಖಾಮುಖಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

`ಸಿನಿಮಾ ಇಂದು ವ್ಯಾಪಾರವಾಗಿ ಮಾರ್ಪಟ್ಟಿದೆ. ಹಣ ಪ್ರಧಾನ ಪಾತ್ರ ನಿರ್ವಹಿಸುತ್ತಿದೆ. ಹಣ ಗಳಿಕೆಯಲ್ಲಿ ನಟ-ನಟಿಯರು ಪೈಪೋಟಿಗಳಿದಿದ್ದಾರೆ. ಸದಭಿರುಚಿಯ ಚಿತ್ರಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಇದರಿಂದಾಗಿ ಹತ್ತಾರು ಸಿನಿಮಾಗಳು ತೆರೆ ಕಂಡರೂ ಕೇವಲ ಒಂದೋ- ಎರಡು ಚಿತ್ರಗಳು ಯಶಸ್ವಿಯಾಗುತ್ತಿವೆ~ ಎಂದು ಅವರು ವಿಷಾದಿಸಿದರು.

`ಇಂದಿನ ತಂತ್ರಜ್ಞಾನ ಯುಗದಲ್ಲಿ ಸಂಗೀತ ಹಾಗೂ ನಟನೆಯನ್ನು ಕಂಪ್ಯೂಟರ್‌ಗಳೇ ನಿರ್ವಹಿಸುತ್ತಿವೆ. ಇದರಿಂದ ಸಹಜ ನಟನೆಯಿಂದ ಕಲಾವಿದರು ದೂರವಾಗುತ್ತಿದ್ದಾರೆ. `ಡೆಲ್ಲಿ ಬೆಲ್ಲಿ~ (ಹಿಂದಿ)ಯಂತಹ ಕೆಟ್ಟ ಚಿತ್ರವನ್ನು ನೋಡಿ ನಾನು ಮೂರು ದಿನ ಊಟ ಮಾಡಲಿಲ್ಲ. ಇದೊಂದು ಬ್ಲೂ ಫಿಲಂಗಿಂತ ಕೆಟ್ಟದ್ದಾಗಿದೆ. ಇಂತಹ ಚಿತ್ರಗಳಿಂದ ಸಮಾಜದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ~ ಎಂದರು.

`ಸಾಹುಕಾರ್~ ಚಿತ್ರದ ಅಭಿನಯಕ್ಕಾಗಿ ನನ್ನ ಹೆಸರಿಗೆ `ಸಾಹುಕಾರ್~ ಎಂಬ ಪದ ಶಾಶ್ವತವಾಗಿ ಸೇರಿ ಹೋಗಿದೆ. ಆದರೆ, ಅಂತಹ ಆಸ್ತಿ- ಐಶ್ವರ್ಯ ಯಾವುದೂ ನನ್ನಲ್ಲಿಲ್ಲ. ಕಂಬಳಿ ಹುಳುವಿನ ರೀತಿ ಚಿತ್ರರಂಗಕ್ಕೆ ಕಾಲಿಟ್ಟ ನಾನು, ಕೊಟ್ಟ ಪಾತ್ರಗಳಿಗೆ ಜೀವ ತುಂಬುವ ಮೂಲಕ ಬಣ್ಣ ಬಣ್ಣದ ಚಿಟ್ಟೆಯಾಗಿ ಗುರುತಿಸಿಕೊಂಡೆ.
 
ವೈಯಕ್ತಿಕವಾಗಿ ಹೇಳುವುದಾದರೆ ನನ್ನ ಬದುಕು ಶೂನ್ಯ~ ಎಂದು ಜಾನಕಿ ಜೀವನದುದ್ದಕ್ಕೂ ಎದುರಿಸಿದ ಸಂಕಷ್ಟಗಳ ಸರಮಾಲೆಯನ್ನೇ ಬಿಚ್ಚಿಟ್ಟರು. `ಹನ್ನೊಂದನೇ ವಯಸ್ಸಿನಲ್ಲಿಯೇ ಆಕಾಶವಾಣಿ ಕಲಾವಿದೆಯಾದೆ. ನಾಟಕಗಳಲ್ಲಿನ ನನ್ನ ಧ್ವನಿಯಿಂದ ಚಿತ್ರರಂಗ ಕೈಬೀಸಿ ಕರೆಯಿತು. ಆದರೆ, ಅದಕ್ಕೆ ನನ್ನ ಕುಟುಂಬದಿಂದ ವ್ಯಾಪಕ ವಿರೋಧ ವ್ಯಕ್ತವಾಯಿತು. ಸಿನಿಮಾ ಪ್ರವೇಶಿಸುವುದನ್ನು ವಿರೋಧಿಸಿ ನನ್ನ ಪೋಷಕರು 15ನೇ ವಯಸ್ಸಿನಲ್ಲಿಯೇ ವಿವಾಹ ಮಾಡಿದರು. ದೇಶಕ್ಕೆ ಸ್ವಾತಂತ್ರ್ಯ ಬಂದ 1947ರಲ್ಲಿ ನನ್ನ ಬದುಕಿನ ಸ್ವತಂತ್ರವೂ ಕಳೆದು ಹೋಯಿತು. 22ನೇ ವಯಸ್ಸಿಗೆ ನನಗೆ ಮೂರು ಮಕ್ಕಳಾದವು. ಬದುಕು ಸಾಗಿಸಲು ಪತಿ ತೋರಿದ ಅಸಹಕಾರದಿಂದ ಜೀವನೋಪಾಯಕ್ಕಾಗಿ ಚಿತ್ರರಂಗವನ್ನು ಅರಸಿ ಬಂದೆ~ ಎಂದು ಸಿನಿಮಾ ಕ್ಷೇತ್ರ ಪ್ರವೇಶಿಸಿದ ಆರಂಭದ ದಿನಗಳ ಸಂಕಷ್ಟಗಳನ್ನು ಸ್ಮರಿಸಿದರು.

`ಅಂದಿನ ದಿನಗಳಲ್ಲಿ ಸಿನಿಮಾಗಳಲ್ಲಿ ನಟಿಸುವ ಕಲಾವಿದರ ಬಗ್ಗೆ ಸಮಾಜದಲ್ಲಿ ಅಂತಹ ಒಳ್ಳೆಯ ಅಭಿಪ್ರಾಯವಿರಲಿಲ್ಲ. ಆದರೂ, ಸಂಸಾರ ನಡೆಸಲು ಹಣ ಬೇಕಾಗಿತ್ತು. ಹೀಗಾಗಿ ಚಿತ್ರರಂಗ ಪ್ರವೇಶಿಸುವುದು ಅನಿವಾರ್ಯವಾಯಿತು. ದೇವರ ಆಶೀರ್ವಾದ ಹಾಗೂ ಯಾವುದೋ ಜನ್ಮದ ಪುಣ್ಯದಿಂದ ಒಳ್ಳೆಯ ಕಲಾವಿದೆಯಾದೆ~ ಎಂದು ಹೇಳಿದರು.

`ಆಂಧ್ರಪ್ರದೇಶದ ರಾಜಮಂಡ್ರಿಯಲ್ಲಿ ಹುಟ್ಟಿದ ನನ್ನನ್ನು ತಂದೆ-ತಾಯಿ ಸುಖದ ಸುಪ್ಪತ್ತಿನಲ್ಲಿಯೇ ಬೆಳೆಸಿದರು. ಆದರೆ, ಒಳ್ಳೆಯ ಶಿಕ್ಷಣ ಕೊಡಿಸಲಿಲ್ಲ. ನನ್ನ ಮಕ್ಕಳು ಹಾಗಾಗಬಾರದು ಎನ್ನುವ ಉದ್ದೇಶದಿಂದ ಮಗನನ್ನು ಅಮೆರಿಕಾಗೆ ಕಳಿಸಿ ಓದಿಸಿದೆ. ಆದರೆ, ಮಗ ಪಾಶ್ಚಿಮಾತ್ಯ ವ್ಯಾಮೋಹಕ್ಕೆ ಮಾರು ಹೋಗಿ ಅಲ್ಲೇ ಮದುವೆಯಾಗಿ ನೆಲೆಸಿದ್ದಾನೆ. ಮಕ್ಕಳಿಗೆ ಸಂಪೂರ್ಣ ಸ್ವಾತಂತ್ರ್ಯ ಕೊಡುವುದು ಕೂಡ ತಪ್ಪು ಎಂದು ಈಗ ವ್ಯಥೆ ಪಡುತ್ತಿದ್ದೇನೆ~ ಎಂದು ನೊಂದು ನುಡಿದರು.

ದುರಾಸೆ ಬೇಡ: `ಹಣ ಗಳಿಸುವ ದುರಾಸೆ ಯಾರಿಗೂ ಬೇಡ. ಒಂದು ಕುಟುಂಬ ಸಂತೋಷದಿಂದ ಬಾಳಲು ಎಷ್ಟು ಬೇಕು? ಏನು ಬೇಕು? ಅಷ್ಟನ್ನಷ್ಟೇ ಸಂಪಾದಿಸಿದರೆ ಸಾಕು. ಈಗಲೂ ನನಗೆ ಹಣ ಸಂಪಾದನೆ ಮಾಡಲು ಇಷ್ಟವಿಲ್ಲ. ಒಬ್ಬ ಸೌಜನ್ಯ- ಪ್ರಾಮಾಣಿಕ ನಾಗರಿಕಳಾಗಿ ಬದುಕಿದರೆ ಸಾಕು~ ಎಂದರು.

`ಡಾ.ರಾಜ್‌ಕುಮಾರ್, ಎಂಜಿಆರ್, ಶಿವಾಜಿ ಗಣೇಶನ್, ಎನ್‌ಟಿಆರ್, ಅಕ್ಕಿನೇನಿ ನಾಗೇಶ್ವರರಾವ್ ಭಾರತ ಚಲನಚಿತ್ರ ಕಂಡಂತಹ ಅತಿಶ್ರೇಷ್ಠ ನಟರು. ಡಾ. ರಾಜ್ ಅವರಲ್ಲಿನ ಸಹನೆ, ಆತ್ಮೀಯ ಗುಣಗಳನ್ನು ಯಾರಲ್ಲೂ ಕಾಣಲು ಸಾಧ್ಯವಿಲ್ಲ~ ಎಂದು ಕೊಂಡಾಡಿದರು.

`ಚಿತ್ರರಂಗವೇ ಬೇರೆ, ವೈಯಕ್ತಿಕ ಬದುಕೇ ಬೇರೆ. ಹೀಗಾಗಿ, ನಾವು ಬದುಕಿನಲ್ಲಿ ಲಕ್ಷ್ಮಣರೇಖೆ ಹಾಕಿಕೊಳ್ಳಬೇಕಾಗಿದೆ. ಎಂದಿಗೂ ಮರ್ಯಾದೆ ಕಳೆದುಕೊಳ್ಳಬಾರದು. ಪ್ರತಿಯೊಬ್ಬರೂ ತಪ್ಪು ಮಾಡುವುದು ಸಹಜ. ಆದರೆ, ಗೊತ್ತಿದ್ದೂ ಮಾಡಿದ ತಪ್ಪನ್ನೇ ಪದೇ ಪದೇ ಮಾಡುತ್ತಾ ಹೋದರೆ ಅದರಿಂದ ಹೊರಗೆ ಬರಲು ಕಷ್ಟ~ ಎಂದು ಸಲಹೆ ಮಾಡಿದರು. `ನನಗೆ ಗೌರವಾರ್ಥ ಡಾಕ್ಟರೇಟ್ ಪದವಿ ಸಿಕ್ಕರೂ ವ್ಯಾಸಂಗ ಮಾಡಿ ಪದವಿ ಪಡೆಯಲು ಸಾಧ್ಯವಾಗಲಿಲ್ಲ. ಹಾಡುವುದು ಹಾಗೂ ಭಾಷಣ ಮಾಡುವುದನ್ನು ಕಲಿತಿಲ್ಲ. ಮುಂದಿನ ಜನ್ಮವಿದ್ದರೆ ಈ ಮೂರನ್ನೂ ಕಲಿತು ಪರಿಪೂರ್ಣಳಾಗುತ್ತೇನೆ~ ಎಂದರು.

`ದೂರದ ರಾಜಮಂಡ್ರಿಯಲ್ಲಿ ಹುಟ್ಟಿದರೂ ಕನ್ನಡ ನೆಲ- ಭಾಷೆಯ ಮೇಲಿನ ಅಭಿಮಾನದಿಂದ ಬೆಂಗಳೂರಿನಲ್ಲಿ ನೆಲೆಯೂರುವಂತಾಯಿತು~ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಕರ್ನಾಟಕ ಚಲನಚಿತ್ರ ಅಕಾಡೆಮಿ ಸದಸ್ಯ ಕೆ.ಎಚ್. ಸಾವಿತ್ರಿ ಸಂವಾದ ಕಾರ್ಯಕ್ರಮ ನಡೆಸಿಕೊಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.