ADVERTISEMENT

ಚಿತ್ರರಂಗದ ಗಣ್ಯರ ಅಭಿಪ್ರಾಯ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2012, 19:15 IST
Last Updated 6 ಅಕ್ಟೋಬರ್ 2012, 19:15 IST

ನಿರಂತರ ಅನ್ಯಾಯ
`ಕರ್ನಾಟಕ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಕೇಂದ್ರ ಸರ್ಕಾರಕ್ಕೆ ಹನುಮಂತನ ಹಾಗೆ ಕನ್ನಡಿಗರು ಎದೆ ಸೀಳಿ ತೋರಿಸಿದ್ದೇವೆ. ಆದರೂ, ನಮ್ಮ ನೋವಿಗೆ ಕೇಂದ್ರ ಈವರೆಗೂ ಸ್ಪಂದಿಸಿಲ್ಲ. ರಾಜ್ಯಕ್ಕೆ ನಿರಂತರವಾಗಿ ಅನ್ಯಾಯವಾಗುತ್ತಿದೆ~
-ಅಂಬರೀಷ್, ಹಿರಿಯ ನಟ

ಹೋರಾಟದಲ್ಲಿ ಅನ್ಯಭಾಷಿಕರು ಭಾಗಿಯಾಗಲಿ

`ಕಾವೇರಿ ಹೋರಾಟಕ್ಕೆ ಚಿತ್ರರಂಗ ನಿರಂತರ ಬೆಂಬಲ ನೀಡಲಿದೆ. ನೆಲ, ಜಲ, ಭಾಷೆಯ ವಿಚಾರದಲ್ಲಿ ಎಂದೂ ರಾಜಿ ಮಾಡಿಕೊಳ್ಳುವುದಿಲ್ಲ. ಕೇಂದ್ರ ಸರ್ಕಾರದ ತಾರತಮ್ಯದ ನೀತಿಯ ವಿರುದ್ಧ ಹೋರಾಟಕ್ಕೆ ನಾಡಿನ ಎಲ್ಲ ಜನರು ಕೈಜೋಡಿಸಬೇಕು. ಅಲ್ಲದೆ ಇಲ್ಲಿ ನೆಲೆಸಿರುವ ಬೇರೆ ಭಾಷೆಗಳ ಜನರೂ ಹೋರಾಟದಲ್ಲಿ ಭಾಗಿಯಾಗಬೇಕು. ಆ ಮೂಲಕ ರೈತರು ಹಾಗೂ ಕನ್ನಡ ಪರ ಸಂಘಟನೆಗಳು ನಡೆಸುತ್ತಿರುವ ಹೋರಾಟಕ್ಕೆ ಸ್ಥೈರ್ಯ ತುಂಬಬೇಕು~.
-ಶಿವರಾಜ್ ಕುಮಾರ್, ನಟ

ನೀರು ಬಿಡುವುದು ತಕ್ಷಣ ನಿಲ್ಲಿಸಲಿ
`ಬರ ಪರಿಸ್ಥಿತಿ ಇದೇ ರೀತಿಯಲ್ಲಿ ಮುಂದುವರಿದರೆ ಕರ್ನಾಟಕದ ಜನರಿಗೆ ಕುಡಿಯಲು ನೀರು ಇರುವುದಿಲ್ಲ. ಇಂತಹ ಸಂಕಷ್ಟ ಸ್ಥಿತಿಯಲ್ಲಿ ತಮಿಳುನಾಡಿಗೆ ನೀರು ಬಿಡುಗಡೆ ಮಾಡಬೇಕು ಎಂಬುದು ಸರಿಯಲ್ಲ. ತಮಿಳುನಾಡಿಗೆ ಕಾವೇರಿ ನೀರು ಬಿಡುವುದನ್ನು ತಕ್ಷಣ ನಿಲ್ಲಿಸಬೇಕು~.
-ರಾಘವೇಂದ್ರ ರಾಜ್‌ಕುಮಾರ್, ನಟ

ಸಮಸ್ಯೆ ಕಾನೂನು ಚೌಕಟ್ಟಿನಲ್ಲಿ ಬಗೆಹರಿಸಲಿ
`ಮಳೆ ಕೊರತೆ ಹಾಗೂ ಬರ ಕಾರಣದಿಂದಾಗಿ ನಾಡಿನ ಜನತೆ ಸಂದಿಗ್ಧ ಪರಿಸ್ಥಿತಿಯನ್ನು ಎದುರಿಸುತ್ತಿದ್ದೇವೆ. ಇಂತಹ ಪರಿಸ್ಥಿತಿ ಇರುವಾಗ ವಸ್ತುಸ್ಥಿತಿಯ ಮಾಹಿತಿ ಪಡೆದು ಪ್ರಧಾನಮಂತ್ರಿ ಸೂಚನೆ ನೀಡಬೇಕಿತ್ತು. ಈಗ ಅನ್ಯಾಯ ಆಗಿ ಹೋಗಿದೆ. ಇನ್ನಷ್ಟು ಅನ್ಯಾಯವನ್ನು ತಡೆಯಲು ರಾಜ್ಯದ ರಾಜಕೀಯ ಪಕ್ಷಗಳು ಒಮ್ಮತ ತಾಳಿ ಕಾನೂನಿನ ಚೌಕಟ್ಟಿನಲ್ಲಿ ಸಮಸ್ಯೆಯನ್ನು ಬಗೆಹರಿಸಬೇಕು~.
-ಉಮಾಶ್ರೀ, ಹಿರಿಯ ನಟಿ

ಪ್ರತಿಭಟನೆಯಿಂದ ಪರಿಹಾರ ಸಿಗಲ್ಲ
`ಕಾವೇರಿ ನಮ್ಮದು. ಈ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗಬೇಕು. ನಾವೆಲ್ಲ ಚುನಾಯಿತ ಪ್ರತಿನಿಧಿಗಳ ಮನೆ ಮುಂದೆ ಧರಣಿ ನಡೆಸಬೇಕು. ಅದರ ಬದಲು ಗಲಾಟೆ ಮಾಡುವುದರಿಂದ, ಪ್ರತಿಭಟನೆ ನಡೆಸುವುದರಿಂದ ಸಮಸ್ಯೆಗೆ ಪರಿಹಾರ ಸಿಗುವುದಿಲ್ಲ~.
-ಉಪೇಂದ್ರ, ನಟ

ಹೋರಾಟಕ್ಕೆ ಚಿತ್ರರಂಗ ಸ್ಪಂದಿಸಲಿದೆ

`ನೀರಿನ ವಿಚಾರದಲ್ಲಿ ನಾಡಿಗೆ ಆಗಿರುವ ಅನ್ಯಾಯದ ವಿರುದ್ಧ ಕನ್ನಡಿಗರು ಶಾಂತಿಯುತ ಪ್ರತಿಭಟನೆ ಮುಂದುವರಿಸಬೇಕು. ರೈತರು, ಕನ್ನಡಪರ ಸಂಘಟನೆಗಳು ನಡೆಸುತ್ತಿರುವ ಹೋರಾಟಕ್ಕೆ ಚಿತ್ರರಂಗದ ಸದಾ ಬೆಂಬಲ ನೀಡಲಿದೆ.  ಈ ಹಿಂದೆಯು ರಾಜ್ಯಕ್ಕೆ ಸಂಕಷ್ಟ ಎದುರಾದಾಗ ಚಿತ್ರರಂಗ ಸ್ಪಂದಿಸಿದೆ. ಭವಿಷ್ಯದಲ್ಲೂ ಸ್ಪಂದಿಸಲಿದೆ~.
-ಭಾರತಿ ವಿಷ್ಣುವರ್ಧನ್, ಹಿರಿಯ ನಟಿ

ಆದೇಶ ಪುನರ್ ಪರಿಶೀಲಿಸಲಿ
`ರಾಜ್ಯವನ್ನು ಪ್ರತಿನಿಧಿಸುವ ಕೇಂದ್ರ ಸಚಿವರು ಹಾಗೂ ಸಂಸದರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಆಗ ಮಾತ್ರ ಸಮಸ್ಯೆ ಶೀಘ್ರದಲ್ಲಿ ಪರಿಹಾರ ದೊರಕಲಿದೆ. ಕೇಂದ್ರ ಸರ್ಕಾರ ಹಾಗೂ ಸುಪ್ರೀಂ ಕೋರ್ಟ್ ನೀಡಿರುವ ಆದೇಶವನ್ನು ಪುನರ್ ಪರಿಶೀಲಿಸಬೇಕು~.
- `ಮುಖ್ಯಮಂತ್ರಿ~ ಚಂದ್ರು, ಹಿರಿಯ ನಟ

ನ್ಯಾಯ ಸಿಗುವವರೆಗೆ ಹೋರಾಟ
`ರಾಜ್ಯದಲ್ಲಿ ಬರ ಪರಿಸ್ಥಿತಿ ಇದೆ. ಇಂತಹ ಸಂದರ್ಭದಲ್ಲಿ ನೀರು ಬಿಡುಗಡೆಗೆ ಸೂಚಿಸಿರುವುದು ತಪ್ಪು. ರಾಜ್ಯದ ಗಂಭೀರ ಸ್ಥಿತಿಯನ್ನು ಕೇಂದ್ರಕ್ಕೆ ಮನವರಿಕೆ ಮಾಡಿಕೊಡುವ ಕೆಲಸ ರಾಜ್ಯ ಸರ್ಕಾರದಿಂದ ಆಗಬೇಕು. ರಾಜ್ಯದ ಎಲ್ಲರೂ ಕಾವೇರಿ ಹೋರಾಟಕ್ಕೆ ಬೆಂಬಲ ಸೂಚಿಸಬೇಕು. ರಾಜ್ಯಕ್ಕೆ ನ್ಯಾಯ ಸಿಗುವವರೆಗೆ ಹೋರಾಟ ಮುಂದುವರಿಸುವ ಅಗತ್ಯ ಇದೆ~
-ಟಿ.ಎನ್. ಸೀತಾರಾಮ್, ಕಿರುತೆರೆ ನಿರ್ದೇಶಕ

ಜಲವಿವಾದ ಮತಬ್ಯಾಂಕ್ ರಾಜಕಾರಣ
`ಕಾವೇರಿ ವಿವಾದವನ್ನು ಇತ್ಯರ್ಥಕ್ಕೆ ರಾಷ್ಟ್ರೀಯ ಜಲನೀತಿಯನ್ನು ರೂಪಿಸಬೇಕು. ಜಲವಿವಾದದಲ್ಲಿ ರಾಜಕೀಯ ಪ್ರವೇಶದಿಂದ ಈ ವಿವಾದ ಮತ ಬ್ಯಾಂಕ್ ರಾಜಕಾರಣ ಆಗಿದೆ. ಈ ವಿವಾದವನ್ನು ಇತ್ಯರ್ಥಪಡಿಸಲು ಪ್ರತಿವರ್ಷ ಉಭಯ ರಾಜ್ಯಗಳ ಪ್ರಮುಖರು ಎರಡು ಬಾರಿ ಸಭೆ ಸೇರಿ ಮಳೆ ಸ್ಥಿತಿ ಹಾಗೂ ಜಲಾಶಯದ ಸ್ಥಿತಿ ಗಮನಿಸಿ ನಿರ್ಧಾರ ಕೈಗೊಳ್ಳಬೇಕು~.
-ಬಿ. ಸುರೇಶ, ನಿರ್ದೇಶಕ

ಅನ್ಯಾಯ ಸಹಿಸಲು ಸಾಧ್ಯವಿಲ್ಲ
`ಸಿನಿಮಾ ರಂಗದವರು ಚಲನಚಿತ್ರಗಳ ಚಿತ್ರೀಕರಣವನ್ನು ಅನಿರ್ದಿಷ್ಟಾವಧಿ ಸ್ಥಗಿತಗೊಳಿಸಿ ಕಾವೇರಿ ಹೋರಾಟದಲ್ಲಿ ಪಾಲ್ಗೊಳ್ಳಬೇಕು.
ರಾಜ್ಯದ ಸಂಸದರ ಮನೆ ಮುಂದೆ ಪ್ರತಿಭಟನೆ ನಡೆಸಬೇಕು. ರಾಜ್ಯಕ್ಕೆ ಅನ್ಯಾಯವಾಗುವುದನ್ನು ಸಹಿಸಲು ಸಾಧ್ಯವಿಲ್ಲ~.
-ಅಶೋಕ್, ಹಿರಿಯ ನಟ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.