ಬೆಂಗಳೂರು: ಕನಕಪುರ ರಸ್ತೆಯ ಅಗರ ಬಳಿ ಇರುವ ಹತ್ತು ಎಕರೆ ಜಮೀನಿಗಾಗಿ ಪೊಲೀಸ್ ಪಡೆ ಹಾಗೂ ಬಾಬಾ ರಾಮದೇವ ಅವರ ಪತಂಜಲಿ ಯೋಗಾಶ್ರಮ ಟ್ರಸ್ಟ್ ನಡುವೆ ತೀವ್ರ ಪೈಪೋಟಿ ನಡೆದಿದೆ.
ಆ ಜಾಗದಲ್ಲಿ ಗರುಡ ಪಡೆ ಕಮಾಂಡೊಗಳಿಗಾಗಿ ತರಬೇತಿ ಕೇಂದ್ರ ಆರಂಭಿಸಬೇಕು ಎಂಬುದು ಪೊಲೀಸ್ ಪಡೆಯ ಚಿಂತನೆಯಾದರೆ, ಯೋಗಾಶ್ರಮ ಸ್ಥಾಪಿಸಲು ಜಾಗವನ್ನು ತಮಗೆ ನೀಡಬೇಕು ಎಂದು ಆಶ್ರಮದ ಆಡಳಿತ ಮಂಡಳಿ ಸರ್ಕಾರಕ್ಕೆ ಅರ್ಜಿ ಸಲ್ಲಿಸಿದೆ.
`ಸರ್ಕಾರದ ಭೂಮಿಗಾಗಿ ಆಶ್ರಮದೊಂದಿಗೆ ಪೈಪೋಟಿ ನಡೆಸುವಂತಹ ಪರಿಸ್ಥಿತಿ ಬಂದಿರುವುದು ದುರಾದೃಷ್ಟಕರ. ಆದರೆ, ನಾವು ವಾಣಿಜ್ಯ ಸಂಕೀರ್ಣ ನಿರ್ಮಿಸಲು ಆ ಜಾಗವನ್ನು ಕೇಳುತ್ತಿಲ್ಲ ಎಂಬುದನ್ನು ಸರ್ಕಾರ ಅರಿಯಬೇಕು. ತರಬೇತಿ ಕೇಂದ್ರ ಆರಂಭಿಸಲು ಐಎಸ್‌ಡಿ ಬಿಜೆಪಿ ಸರ್ಕಾರಕ್ಕೆ 40 ಎಕರೆ ಜಾಗ ಕೇಳಿತ್ತು.
ಆಗ ಸರ್ಕಾರ, ತರಬೇತಿ ಕೇಂದ್ರಕ್ಕಾಗಿ ಕೇವಲ 29 ಎಕರೆ ಜಾಗವನ್ನು ಮಾತ್ರ ನೀಡಿತ್ತು. ಇನ್ನೂ ಹತ್ತು ಎಕರೆ ಜಾಗವನ್ನು ನೀಡುವಂತೆ ವರ್ಷದ ಹಿಂದೆಯೇ ಮನವಿ ಮಾಡಲಾಗಿದೆ' ಎಂದು ಆಂತರಿಕ ಭದ್ರತಾ ವಿಭಾಗದ ಐಜಿಪಿ ಭಾಸ್ಕರ್ ರಾವ್ ಹೇಳಿದರು.
ಈಗ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ, ರಾಷ್ಟ್ರೀಯ ಭದ್ರತೆಗೆ ಒತ್ತು ನೀಡುವ ಒತ್ತಾಸೆಯನ್ನು ಹೊಂದಿದೆ. ಸರ್ಕಾರಕ್ಕೆ ಮತ್ತೊಂದು ಮನವಿ ಸಲ್ಲಿಸಲಾಗುವುದು ಎಂದರು.
ಸದ್ಯ ಗರುಡ ಪಡೆಯ ಕಮಾಂಡೊಗಳು ಕೂಡ್ಲುವಿನ ರಾಜ್ಯ ಮೀಸಲು ಪೊಲೀಸ್ ಪಡೆಯ (ಕೆಎಸ್‌ಆರ್‌ಪಿ) ಜಾಗದಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಸರ್ಕಾರ ಅಗರದಲ್ಲಿರುವ ಜಮೀನನ್ನು ನೀಡಿದರೆ ವ್ಯವಸ್ಥಿತ ಕೇಂದ್ರವನ್ನು ಸ್ಥಾಪಿಸಲು ನಿರ್ಧರಿಸಲಾಗುವುದು ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.