ADVERTISEMENT

ಜಾನಪದ ಸೊಗಡು ಬಿಂಬಿಸಿದ `ಜಾನಪದ ಹಬ್ಬ'

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2013, 20:02 IST
Last Updated 3 ಏಪ್ರಿಲ್ 2013, 20:02 IST

ಬೆಂಗಳೂರು: ಅಲ್ಲಿ ಹಳ್ಳಿಯ ಸೊಗಡು ಮೈವೆತ್ತಂತಿತ್ತು. ಹುಡುಗಿಯರು ಸೀರೆ ಉಟ್ಟು ತಲೆ ತುಂಬ ಮಲ್ಲಿಗೆ ಹೂ ಮುಡಿದು ಸಿಂಗರಿಸಿಕೊಂಡು ಅಲ್ಲಿಂದಲ್ಲಿಗೆ ಹೆಜ್ಜೆ ಹಾಕುತ್ತಿರುವುದು ಆಕರ್ಷಕವಾಗಿತ್ತು. ಜನಪದ ಕಲಾವಿದರು ಹಾಡಿದ ಜನಪದ ಗೀತೆಗಳು ಮತ್ತು ಅವರು ಮಾಡಿದ ನೃತ್ಯಗಳು ಅಲ್ಲಿದ್ದವರ ಮನಸೂರೆಗೊಳಿಸಿದ್ದಂತೂ ಸುಳ್ಳಲ್ಲ.

ಕರ್ನಾಟಕ ಜಾನಪದ ಪರಿಷತ್ತು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಸರ್ಕಾರಿ ಕಲಾ ಕಾಲೇಜಿನಲ್ಲಿ ಬುಧವಾರ ನಡೆದ `ಜಾನಪದ ಹಬ್ಬ' ಕಾರ್ಯಕ್ರಮದಲ್ಲಿ ಕಂಡುಬಂದ ನೋಟವಿದು.

ಬಾಗಿಲಲ್ಲಿ ತಳಿರು ತೋರಣಗಳಿಂದ ಶೃಂಗಾರಗೊಂಡ ಕಾಲೇಜಿನಲ್ಲಿ ಒಂದು ರೀತಿಯ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಬಣ್ಣ ಬಣ್ಣದ ರಂಗೋಲಿಗಳು ಸ್ವಾಗತಿಸಿದವು.

ಕಾರ್ಯಕ್ರಮದಲ್ಲಿ ಕರ್ನಾಟಕ ಜಾನಪದ ಪರಿಷತ್ತಿನ ಅಧ್ಯಕ್ಷ ಟಿ.ತಿಮ್ಮೇಗೌಡ ಮಾತನಾಡಿ, `ಇಂದಿನ ದಿನಗಳಲ್ಲಿ ಜೀವನದ ಮೌಲ್ಯ ಮತ್ತು ಸಾಮಾಜಿಕ ಮೌಲ್ಯವನ್ನು ಉಳಿಸಿಕೊಳ್ಳಬೇಕಾಗಿದೆ. ಇಂದಿನ ಜಾನಪದ ಹಬ್ಬವನ್ನು ನೋಡಿದರೆ, ಯುವಜನತೆ ಜಾನಪದದಿಂದ ವಿಮುಖರಾಗುತ್ತಿದ್ದಾರೆ ಅಥವಾ ಆಸಕ್ತಿಯನ್ನು ಕಳೆದುಕೊಳ್ಳುತ್ತಿದ್ದಾರೆ ಎಂಬುದು ಸುಳ್ಳು ಅನಿಸುತ್ತದೆ. ಏಕೆಂದರೆ, ಇಲ್ಲಿ ಬಂದಿರುವ ಕಲಾವಿದರು ಬಹುತೇಕ ಯುವಕರಾಗಿದ್ದಾರೆ' ಎಂದರು.

`ನಮ್ಮ ಜಾನಪದ ಪರಂಪರೆ ನಮ್ಮ ನಡೆ, ನುಡಿ, ನಮ್ಮ ಜೀವನ ವಿಧಾನ, ನಾವು ಜೀವಿಸುವ ಶೈಲಿಯನ್ನು ಪ್ರತಿನಿಧಿಸುವಂತಹುದು. ಇಂದು ಆಧುನಿಕ ಸಂಸ್ಕೃತಿಯಲ್ಲಿ ಅದು ಎಲ್ಲೋ ಕಳೆದುಹೋಗುತ್ತಿದೆ. ಅದನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡಬೇಕಾಗಿದೆ' ಎಂದರು.

ಕಾಲೇಜು ಶಿಕ್ಷಣ ಇಲಾಖೆಯ ನಿರ್ದೇಶಕಿ ಡಾ.ಬಿ.ಎಲ್.ಭಾಗ್ಯಲಕ್ಷ್ಮಿ ಮಾತನಾಡಿ, `ಜಾಗತೀಕರಣ ಮತ್ತು ಪಾಶ್ಚಿಮಾತ್ಯ ಸಂಸ್ಕೃತಿಯು ನಮ್ಮ ಜೀವನದ ಮೇಲೆ ಗಾಢವಾಗಿ ಪರಿಣಾಮವನ್ನು ಬೀರುತ್ತಿದೆ. ಇಂತಹ ಸಂದರ್ಭದಲ್ಲಿ ಜಾನಪದ ಹಬ್ಬಗಳ ಆಚರಣೆಗಳು ನಡೆಯಬೇಕು. ಆಗಮಾತ್ರ ನಮ್ಮ ಯುವಜನತೆ ನಮ್ಮ ಸಂಸ್ಕೃತಿಯನ್ನು ಉಳಿಸಲು ಶಕ್ತವಾಗುತ್ತದೆ' ಎಂದು ಹೇಳಿದರು.

ಹಲವು ಜನಪದ ಕಾರ್ಯಕ್ರಮಗಳು ನಡೆದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.