ಕೊಡಗು ಜಿಲ್ಲೆಯಲ್ಲಿ ಭಾರಿ ಮಳೆ ಮೋಡ ಬಿತ್ತನೆ ಶಂಕೆ
ಮಡಿಕೇರಿ : ಕೊಡಗಿನ ಹಲವೆಡೆ ಮೋಡ ಬಿತ್ತನೆ ಮಾಡುವ ಮೂಲಕ ಕೃತಕವಾಗಿ ಮಳೆ ಸುರಿಸಲಾಗುತ್ತಿದೆ ಎಂದು ಜಿಲ್ಲೆಯ ಕೃಷಿಕರು ಶಂಕಿಸಿದ್ದಾರೆ. ಇದರಿಂದಾಗಿ ಕಾಫಿ ಸೇರಿದಂತೆ ವಿವಿಧ ಬೆಳೆಗಳಿಗೆ ಹಾನಿ ಆಗುತ್ತಿದೆ ಎಂದು ಸರ್ಕಾರದ ವಿರುದ್ಧ ತೀವ್ರ ಅಸಮಾಧಾನಗೊಂಡಿದ್ದಾರೆ.
ಕೊಡಗು ಜಿಲ್ಲೆಯಲ್ಲಿ ಭಾನುವಾರ ಸಂಜೆಯಿಂದ ಸೋಮವಾರದ ಬೆಳಗಿನಜಾವದವರೆಗೂ ನಿರಂತರವಾಗಿ ಧಾರಾಕಾರ ಮಳೆಯಾಗಿದೆ. ಇದಕ್ಕೆ ಸರ್ಕಾರ ನಡೆಸಿದ ಮೋಡ ಬಿತ್ತನೆಯೇ ಕಾರಣವಾಗಿದೆ ಎಂದು ಸ್ಥಳೀಯರು ಸಂಶಯ ವ್ಯಕ್ತಪಡಿಸಿದ್ದಾರೆ.
ಸರ್ಕಾರ ಬೇರೆ ಜಿಲ್ಲೆಗಳ ಹಿತಕ್ಕೋಸ್ಕರ ಕೊಡಗಿನ ಕೃಷಿಕರನ್ನು ಬಲಿ ನೀಡುತ್ತಿದೆ ಎಂದು ಹಲವು ಜನ ಬೆಳೆಗಾರರು ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲೆಯಲ್ಲಿ ಮೋಡ ಬಿತ್ತನೆಗೆ ಅವಕಾಶ ನೀಡುವುದಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಪಿ. ಅಪ್ಪಚ್ಚು ರಂಜನ್ ಭರವಸೆ ನೀಡಿದ ದಿನವೇ ಹಾರಂಗಿ ಜಲಾನಯನ ಪ್ರದೇಶ ಸೇರಿದಂತೆ ಕೊಡಗಿನ ವಿವಿಧೆಡೆ ಮೋಡ ಬಿತ್ತನೆ ಮಾಡಿದ ಪರಿಣಾಮ ಧಾರಕಾರ ಮಳೆಗೆ ಕಾರಣವಾಗಿದೆ ಎಂದು ಬೆಳೆಗಾರರು ಆರೋಪಿಸಿದ್ದಾರೆ.
ಕೊಡಗು ಬೆಳೆಗಾರರ ಸಂಘದ ಎನ್.ಎಂ. ಅಪ್ಪಯ್ಯ ಪ್ರತಿಕ್ರಿಯೆ ನೀಡಿ, ಸುಂಟಿಕೊಪ್ಪ ವ್ಯಾಪ್ತಿಯಲ್ಲಿ ಮಳೆಗಾಲದಲ್ಲಿಯೂ ಬಾರದ ಭಾರೀ ಮಳೆ ಮೋಡ ಬಿತ್ತನೆಯಿಂದಾಗಿ ಸುರಿದಿದೆ. ಇದರಿಂದ ಅರೆಬಿಕಾ ಕಾಫಿ ಫಸಲು ಸಂಪೂರ್ಣ ಹಾನಿಗೊಳಗಾಗಿದೆ. ಒಂದೇ ದಿನ 6 ಇಂಚುಗಳಿಗೂ ಹೆಚ್ಚು ಧಾರಾಕಾರ ಮಳೆಯಾಗಿದೆ ಎಂದು ಆರೋಪಿಸಿದರು.
ಕೃತಕ ಮಳೆಯಿಂದಾಗಿ ಕಾಫಿ, ಬತ್ತ ಇನ್ನಿತರ ಕೃಷಿಗೆ ಮುಂದಿನ ವರ್ಷವೂ ತೊಂದರೆಯಾಗಲಿದೆ ಎಂದು ಅಪ್ಪಯ್ಯ ಆತಂಕ ವ್ಯಕ್ತಪಡಿಸಿದರು.
ಬೆಂಗಳೂರಲ್ಲಿ ಸೈಬರ್ ಫೊರೆನ್ಸಿಕ್ ಲ್ಯಾಬ್ ಶೀಘ್ರ ಸ್ಥಾಪನೆ
ವಿಜಾಪುರ:`ಬೆಂಗಳೂರಿನಲ್ಲಿ ಸ್ಥಾಪನೆಯಾಗಲಿರುವ ರಾಜ್ಯದ ಮೊಟ್ಟ ಮೊದಲ ಸೈಬರ್ ಫೊರೆನ್ಸಿಕ್ ಲ್ಯಾಬ್ 6 ತಿಂಗಳಲ್ಲಿ ಕಾರ್ಯ ಆರಂಭಿಸಲಿದೆ~ ಎಂದು ಅಪರಾಧ ಮತ್ತು ತಾಂತ್ರಿಕ ಸೇವೆಗಳ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ಎ.ಎಂ. ಪ್ರಸಾದ್ ಸೋಮವಾರ ಹೇಳಿದರು.
`ನಮ್ಮಲ್ಲಿ ಈಗ ಸೈಬರ್ ಅಪರಾಧಕ್ಕೆ ಪ್ರತ್ಯೇಕ ಠಾಣೆ ಇದೆ. ಆದರೆ, ಸೈಬರ್ ಫೊರೆನ್ಸಿಕ್ ಲ್ಯಾಬ್ ಇಲ್ಲ. ಹೀಗಾಗಿ ಸೈಬರ್ ಅಪರಾಧಗಳನ್ನು ದೃಢಪಡಿಸಿಕೊಳ್ಳಲು ನೆರೆ ರಾಜ್ಯಗಳ ಲ್ಯಾಬ್‌ಗಳನ್ನು ಅವಲಂಬಿಸಿದ್ದೇವೆ~ ಎಂದು ಸುದ್ದಿಗಾರರಿಗೆ ತಿಳಿಸಿದರು. `ಪ್ರಕರಣ ತನಿಖೆಗೆ ವೈಜ್ಞಾನಿಕ ಪದ್ಧತಿ ಅಳವಡಿಸಿಕೊಳ್ಳಲಾಗುವುದು. ಪ್ರತಿ ಠಾಣೆಗೂ ಲೈವ್ ಸ್ಕ್ಯಾನರ್ ಹಾಗೂ ಇಬ್ಬರು ಕಾನ್‌ಸ್ಟೆಬಲ್‌ಗಳಿಗೆ ಬೆರಳಚ್ಚು, ಡಿಎನ್‌ಎ ತಪಾಸಣೆ, ಮಾಹಿತಿ ತಂತ್ರಜ್ಞಾನದ ಉಪಕರಣಗಳ ಬಳಕೆಯ ಬಗ್ಗೆ ತರಬೇತಿ ನೀಡಲಾಗುತ್ತಿದೆ~ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.