ADVERTISEMENT

ಜ. 29ರಂದು ಚಿತ್ರ ಸಂತೆ

​ಪ್ರಜಾವಾಣಿ ವಾರ್ತೆ
Published 11 ಜನವರಿ 2012, 19:20 IST
Last Updated 11 ಜನವರಿ 2012, 19:20 IST

ಬೆಂಗಳೂರು: ರಾಜ್ಯ ಚಿತ್ರಕಲಾ ಪರಿಷತ್ತು ಜ. 29ರಂದು ಬೆಂಗಳೂರಿನಲ್ಲಿ ಚಿತ್ರ ಸಂತೆಯನ್ನು ಏರ್ಪಡಿಸಿದ್ದು, ದೇಶದ ಸುಮಾರು ಎರಡು ಸಾವಿರ ಕಲಾವಿದರು ಕಲಾಕೃತಿಗಳನ್ನು ಪ್ರದರ್ಶಿಸಲಿದ್ದಾರೆ. ಬೆಳಿಗ್ಗೆ ಒಂಬತ್ತು  ಗಂಟೆಯಿಂದ ರಾತ್ರಿ ಎಂಟು ಗಂಟೆವರೆಗೆ ಚಿತ್ರ ಸಂತೆ ನಡೆಯಲಿದೆ. ಆಹ್ವಾನಿತ ಕಲಾವಿದರ ಕಲಾಕೃತಿಗಳನ್ನು ಜ. 29ರಿಂದ 31ರ ವರೆಗೆ ಕಲಾ ಗ್ಯಾಲರಿಗಳಲ್ಲಿ ಪ್ರದರ್ಶಿಸಲಾಗುತ್ತದೆ.

`ಇದು ಒಂಬತ್ತನೇ ಚಿತ್ರ ಸಂತೆಯಾಗಿದೆ. ಚಿತ್ರಕಲಾ ಪರಿಷತ್ತಿನ ಆವರಣ, ಶಿವಾನಂದ ವೃತ್ತದಿಂದ ವಿಂಡ್ಸರ್ ಮ್ಯಾನರ್ ಹೋಟೆಲ್‌ವರೆಗೆ ಕಲಾಕೃತಿಗಳ ಪ್ರದರ್ಶನ ಇರಲಿದೆ. ಸುಮಾರು 1,300 ಮಳಿಗೆಗಳನ್ನು ತೆರೆಯಲಾಗುತ್ತದೆ.

ವೃದ್ಧರು ಮತ್ತು ಅಂಗವಿಕಲರು ಚಿತ್ರಸಂತೆ ವೀಕ್ಷಿಸಲು ಅನುಕೂಲವಾಗುವಂತೆ ವಿಶೇಷ ವಾಹನ ವ್ಯವಸ್ಥೆ ಮಾಡಲಾಗಿದೆ. ಹಿರಿಯ, ಅಂಧ ಮತ್ತು ಅಂಗವಿಕಲ ಕಲಾವಿದರಿಗೆ ವಿಶೇಷ ಮಳಿಗೆಗಳ ವ್ಯವಸ್ಥೆಯನ್ನೂ ಮಾಡಲಾಗಿದೆ~ ಎಂದು ಚಿತ್ರಕಲಾ ಪರಿಷತ್ತಿನ ಆಡಳಿತಾಧಿಕಾರಿ ಜಿ.ಕೆ. ಕೊಂಗವಾಡ ಅವರು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

`ಸಂತೆಯಲ್ಲಿ ಪಾಲ್ಗೊಳ್ಳುವ ಕಲಾವಿದರಿಂದ ಯಾವುದೇ ರೀತಿಯ ಶುಲ್ಕ ಪಡೆಯುವುದಿಲ್ಲ. ಭಾಗವಹಿಸುವ ಎಲ್ಲರಿಗೂ ಉಚಿತ ಊಟ ಮತ್ತು ವಸತಿ ವ್ಯವಸ್ಥೆ ಮಾಡಲಾಗಿದೆ. ಮಾರಾಟವಾದ ಕಲಾಕೃತಿಗೂ ಶುಲ್ಕ ಪಡೆಯುವುದಿಲ್ಲ. ಕಲಾವಿದರಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ. ಸುಮಾರು ಎರಡು ಲಕ್ಷ ಜನರು ಚಿತ್ರಸಂತೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ~ ಎಂದು ಅವರು ಮಾಹಿತಿ ನೀಡಿದರು.

ಚಿತ್ರಕಲಾ ಸ್ಪರ್ಧೆ: `ಪ್ರಜಾವಾಣಿ~ ಮತ್ತು `ಡೆಕ್ಕನ್ ಹೆರಾಲ್ಡ್~ ಪತ್ರಿಕೆಗಳ ವತಿಯಿಂದ ಮಕ್ಕಳಿಗೆ ಜ.29ರಂದು ಚಿತ್ರಕಲಾ ಸ್ಪರ್ಧೆ ಏರ್ಪಡಿಸಲಾಗುತ್ತದೆ. ಒಂದರಿಂದ ಐದನೇ ತರಗತಿ ಮಕ್ಕಳಿಗೆ ಮತ್ತು ಆರರಿಂದ ಹತ್ತನೇ ತರಗತಿಯ ಮಕ್ಕಳಿಗೆ ಪ್ರತ್ಯೇಕ ಸ್ಪರ್ಧೆ ನಡೆಸಲಾಗುತ್ತದೆ. ನವಕರ್ನಾಟಕ ಪಬ್ಲಿಕೇಷನ್‌ನವರು ರವೀಂದ್ರನಾಥ್ ಟ್ಯಾಗೋರ್ ಅವರ ಎಲ್ಲ ಪುಸ್ತಕಗಳನ್ನು ಒಂದೇ ಮಳಿಗೆಯಲ್ಲಿ ಮಾರಾಟ ಮಾಡಲಿದ್ದಾರೆ ಎಂದು ಕೊಂಗವಾಡ ಹೇಳಿದರು.

`ಮನೆಗೊಂದು ಕಲಾಕೃತಿ ಎಂಬ ಆಶಯದಡಿ ಈ ಬಾರಿ ಚಿತ್ರಸಂತೆ ನಡೆಸಲಾಗುತ್ತಿದೆ. ನೂರು ರೂಪಾಯಿಯಿಂದ 1 ಲಕ್ಷ ರೂಪಾಯಿ ಮೌಲ್ಯದ ಕಲಾಕೃತಿಗಳು ಮಾರಾಟವಾಗುವ ನಿರೀಕ್ಷೆ ಇದೆ. ಮಧ್ಯಮ ವರ್ಗದವರೂ ಕಲಾಕೃತಿಯೊಂದನ್ನು ಖರೀದಿಸುವಂತಿರಬೇಕು~ ಎಂದು ಪರಿಷತ್ತಿನ ಮುಖ್ಯ ಆಡಳಿತಾಧಿಕಾರಿ ಸಿ.ಎನ್. ರುದ್ರಪ್ಪ ಹೇಳಿದರು.

ಸಾಂಪ್ರದಾಯಿಕ ಮೈಸೂರು, ತಂಜಾವೂರು, ರಾಜಸ್ತಾನಿ, ಮಧುಬನಿ ಶೈಲಿ ಕಲಾಕೃತಿಗಳು ಲಭ್ಯವಿರುತ್ತವೆ. ತೈಲ ಮತ್ತು ಜಲವರ್ಣಗಳಲ್ಲಿ ರಚಿಸಿರುವ ಕಲಾಕೃತಿಗಳು, ಕೊಲಾಜ್, ಲಿಥೋಗ್ರಾಫ್ ಮತ್ತು ಎಂಬೋಸಿಂಗ್ ಮಾಧ್ಯಮಗಳ ಕಲಾಕೃತಿಗಳನ್ನು ಪ್ರದರ್ಶಿಸಲಾಗುತ್ತದೆ. ಪ್ರಸಿದ್ಧ ಕಲಾವಿದರ ಕಲಾಕೃತಿಗಳನ್ನು ನಕಲು ಮಾಡುವವರಿಗೆ ಅವಕಾಶ ನೀಡುವುದಿಲ್ಲ. ಈ ಬಗ್ಗೆ ಎಚ್ಚರಿಕೆ ವಹಿಸಲಾಗುತ್ತದೆ ಎಂದರು.  ಚಿತ್ರಕಲಾ ಮಹಾ ವಿದ್ಯಾಲಯದ ಪ್ರಾಚಾರ್ಯ ತೇಜೇಂದ್ರಸಿಂಗ್ ಬೋನಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.