ಬೆಂಗಳೂರು: ನಗರದ ವ್ಯಾಪ್ತಿಯಲ್ಲಿ ಸಾರ್ವಜನಿಕ ರಸ್ತೆಗಳಲ್ಲಿ `ಡ್ರ್ಯಾಗ್ ರೇಸ್' ಮತ್ತು `ವೀಲಿಂಗ್' ನಡೆಸುತ್ತಿದ್ದವರ ವಿರುದ್ಧ 2011ರಿಂದ ಈವರೆಗೆ 1,507 ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಗೃಹ ಸಚಿವ ಕೆ.ಜೆ.ಜಾರ್ಜ್ ಅವರು ವಿಧಾನ ಪರಿಷತ್ತಿಗೆ ತಿಳಿಸಿದರು.
ಗಮನ ಸೆಳೆಯುವ ಸೂಚನೆ ಮಂಡಿಸಿದ ಬಿಜೆಪಿಯ ತಾರಾ ಅನೂರಾಧಾ ಅವರು, ನಗರದ ಪ್ರಮುಖ ರಸ್ತೆಗಳಲ್ಲೇ ಯುವಕರು `ಡ್ರ್ಯಾಗ್ ರೇಸ್' ಮತ್ತು `ವೀಲಿಂಗ್' ನಡೆಸುತ್ತಾರೆ. ಇಂತಹ ಅಪಾಯಕಾರಿ ಚಟುವಟಿಕೆಗಳಿಂದ ಪ್ರತಿ ವರ್ಷವೂ ಹಲವರು ಮರಣ ಹೊಂದುತ್ತಿದ್ದಾರೆ. ಅಮಾಯಕರು ಕೂಡ ಇದಕ್ಕೆ ಬಲಿಯಾಗುತ್ತಿದ್ದಾರೆ. ಸರ್ಕಾರ ತಕ್ಷಣವೇ `ಡ್ರ್ಯಾಗ್ ರೇಸ್' ಮತ್ತು `ವೀಲಿಂಗ್' ನಡೆಸುವವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
ಬಳಿಕ ಉತ್ತರಿಸಿದ ಸಚಿವರು, 2011ರಲ್ಲಿ 895, 2012ರಲ್ಲಿ 536 ಹಾಗೂ 2013ರಲ್ಲಿ 76 ಪ್ರಕರಣ ದಾಖಲಿಸಲಾಗಿದೆ. ಅಪಾಯಕಾರಿ ಚಾಲನೆ ಹಾಗೂ ಪದೇ ಪದೇ ನಿಯಮ ಉಲ್ಲಂಘಿಸಿದ ಆರೋಪದ ಮೇಲೆ 2012ರಲ್ಲಿ 4,587 ಹಾಗೂ ಈ ವರ್ಷ 2,781 ಪ್ರಕರಣಗಳನ್ನು ದಾಖಲಿಸಲಾಗಿದೆ. ಅತಿವೇಗದಲ್ಲಿ ವಾಹನ ಚಾಲನೆ ಮಾಡಿದ ಆರೋಪದ ಮೇಲೆ 2012ರಲ್ಲಿ 1,19,894 ಹಾಗೂ ಈ ವರ್ಷ 38,888 ಪ್ರಕರಣ ದಾಖಲಿಸಲಾಗಿದೆ ಎಂದು ವಿವರ ನೀಡಿದರು.
ಬೆಂಗಳೂರಿನಲ್ಲಿ ಮಾತ್ರವಲ್ಲ ರಾಜ್ಯದ ಎಲ್ಲ ಕಡೆಗಳಲ್ಲೂ `ಡ್ರ್ಯಾಗ್ ರೇಸ್' ಮತ್ತು `ವೀಲಿಂಗ್' ನಡೆಸುವವರ ವಿರುದ್ಧ ಕ್ರಮ ಜರುಗಿಸಲಾಗುವುದು. ಅಪಾಯಕಾರಿ ರೀತಿಯಲ್ಲಿ ವಾಹನ ಚಾಲನೆ ಮಾಡುವವರ ವಿರುದ್ಧ ಮೊಕದ್ದಮೆ ದಾಖಲಿಸಿ, ವಾಹನ ಚಾಲನಾ ಪರವಾನಗಿ ರದ್ದು ಮಾಡುವಂತೆ ಸಾರಿಗೆ ಇಲಾಖೆಗೆ ಶಿಫಾರಸು ಮಾಡಲಾಗುವುದು ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.