ADVERTISEMENT

ತರಬೇತಿ ಕೇಂದ್ರಕ್ಕೆ ಅ.2ರಂದು ಚಾಲನೆ

ಪೆಟ್ರೋಲಿಯಂ ಸಚಿವ ಎಂ.ವೀರಪ್ಪ ಮೊಯಿಲಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2013, 19:59 IST
Last Updated 25 ಸೆಪ್ಟೆಂಬರ್ 2013, 19:59 IST

ಬೆಂಗಳೂರು: ದೇಶದಲ್ಲೇ ಮೊದಲ ಬಾರಿಗೆ ಚಿಕ್ಕಬಳ್ಳಾಪುರ ಬಳಿ ಆರಂಭ ವಾಗುತ್ತಿರುವ ವಿಶ್ವೇಶ್ವರಯ್ಯ ಮಾಸ್ಟರ್ ಟ್ರೈನರ್ಸ ತರಬೇತಿ ಕೇಂದ್ರಕ್ಕೆ ಅ.2ರಂದು ಶಂಕು ಸ್ಥಾಪನೆ ನೆರವೇರಿಸಲಾಗುವುದು ಎಂದು ಪೆಟ್ರೋಲಿಯಂ ಸಚಿವ ಎಂ.ವೀರಪ್ಪ ಮೊಯಿಲಿ ಹೇಳಿದರು.

ರಾಷ್ಟ್ರದಲ್ಲಿರುವ 180 ಕೌಶಲ ಕೇಂದ್ರಗಳಲ್ಲಿ ತರಬೇತಿ ನೀಡುವ ಸಿಬ್ಬಂದಿಗೆ ಸೂಕ್ತ ತರಬೇತಿ ನೀಡುವ ಉದ್ದೇಶದಿಂದ ಈ ಕೇಂದ್ರವನ್ನು ಆರಂಭಿ ಸಲಾಗುತ್ತಿದೆ ಎಂದು ಬುಧವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಕಟ್ಟಡ ನಿರ್ಮಾಣ ಕಾರ್ಯ ಪೂರ್ಣ ಗೊಳ್ಳುವವರೆಗೂ ಯಲಹಂಕದ ನಿಟ್ಟೆ ಮೀನಾಕ್ಷಿ ಇನ್‌ಸ್ಟಿಟೂ್ಯಟ್‌ ಆಫ್‌ ಟೆಕ್ನಾಲಜಿ ಕ್ಯಾಂಪಸ್‌ ಆವರಣದಲ್ಲಿ ತಾತ್ಕಾಲಿಕವಾಗಿ ಕೇಂದ್ರವು ಕಾರ್ಯ ನಿರ್ವಹಿಸಲಿದ್ದು, ಅ.2ರಿಂದಲೇ ಇದಕ್ಕೆ ಚಾಲನೆ ದೊರೆಯಲಿದೆ ಎಂದರು.

ಸರ್ಕಾರಿ, ಖಾಸಗಿ ಸಹಭಾಗಿತ್ವದಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿ ಹೋಬಳಿಯ ಅನಗಟ್ಟಿಯಲ್ಲಿ ತರಬೇತಿ ಕೇಂದ್ರ ಆರಂಭಿಸಲಾಗುತ್ತಿದೆ. ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ಇದಕ್ಕೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಎಂದು ತಿಳಿಸಿದರು.
ಈ ಕೇಂದ್ರಕ್ಕೆ ಅಗತ್ಯವಿರುವ ಹತ್ತು ಎಕರೆ ಜಮೀನನ್ನು ರಾಜ್ಯ ಸರ್ಕಾರ ನೀಡಿದೆ. ಎರಡು ತಿಂಗಳಲ್ಲಿ ಕಾಮಗಾರಿ ಆರಂಭವಾಗಲಿದ್ದು, ಒಂದೂವರೆ ವರ್ಷದಲ್ಲಿ ಕಟ್ಟಡ ನಿರ್ಮಾಣ ಕಾರ್ಯ ಪೂರ್ಣಗೊಳ್ಳಲಿದೆ ಎಂದರು.


ಒಎನ್‌ಜಿಸಿ ₨5 ಕೋಟಿ, ಗೇಲ್‌ ಇಂಡಿಯಾ ಸಂಸ್ಥೆ ₨ 2 ಕೋಟಿ ಹಾಗೂ ಕೆನರಾ ಬ್ಯಾಂಕ್‌, ವಿಜಯಾ ಬ್ಯಾಂಕ್‌, ಸಿಂಡಿಕೇಟ್‌ ಬ್ಯಾಂಕ್‌, ಕಾರ್ಪೋರೇಷನ್‌ ಬ್ಯಾಂಕ್‌, ಸ್ಟೇಟ್‌ ಬ್ಯಾಂಕ್‌ ಆಫ್‌ ಮೈಸೂರು ತಲಾ ಒಂದು ಕೋಟಿ ರೂಪಾಯಿ ನೀಡುವುದಾಗಿ ತಿಳಿಸಿವೆ. ಈಗಾಗಲೇ ಎರಡು ಕೋಟಿ ರೂಪಾಯಿ ಬಿಡುಗಡೆಯಾಗಿದೆ ಎಂದು ತಿಳಿಸಿದರು.

ಬಾಷ್‌ ಮತ್ತು ಎಲ್‌ ಅಂಡ್‌ ಟಿ ಸಂಸ್ಥೆಗಳು ಆಟೊಮೊಟಿವ್‌ ಎಂಜಿನ್‌, ಬಾರ್ ಬೆಂಡಿಂಗ್‌ ಇತ್ಯಾದಿ ಕ್ಷೇತ್ರಗಳಲ್ಲಿ ತರಬೇತಿ
ನೀಡಲಿದೆ. ಮುಂದಿನ ದಿನಗಳಲ್ಲಿ ಆರು ಕೋರ್ಸ್‌ಗಳಲ್ಲಿ ತರಬೇತಿ ನೀಡಲು ಉದ್ದೇಶಿಸಲಾಗಿದೆ. ಮೂರು ತಿಂಗಳ ಕೋರ್ಸ್‌ಗೆ ಕನಿಷ್ಠ ಶುಲ್ಕ ನಿಗದಿಪಡಿಸಲಾಗುವುದು. ಒಂದು ಸಾವಿರ ಮಂದಿಗೆ ತರಬೇತಿ ನೀಡುವ ಉದ್ದೇಶವಿದೆ ಎಂದು ಬಿಎಂವಿ ಸಂಸ್ಥೆಯ ಉಪಾಧ್ಯಕ್ಷ ಡಾ.ಎನ್‌.ಆರ್‌.ಶೆಟ್ಟಿ ತಿಳಿಸಿದರು.

ಮುಖ್ಯಕಾರ್ಯದರ್ಶಿ ಎಸ್‌.ವಿ. ರಂಗನಾಥ್‌, ಕಾರ್ಮಿಕ ಇಲಾಖೆಯ ಕಾರ್ಯದರ್ಶಿ ಎಂ.ಬಿ.ದ್ಯಾಬೇರಿ ಅವರು ಕೇಂದ್ರದ ಬಗ್ಗೆ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT