ADVERTISEMENT

ದಕ್ಷಿಣದತ್ತ ಪಯಣ: ಹಸಿರು ಸಿರಿ ಹೊಸ ದರುಶನ

ಪೀರ್‌ ಪಾಶ, ಬೆಂಗಳೂರು
Published 17 ಜೂನ್ 2017, 20:11 IST
Last Updated 17 ಜೂನ್ 2017, 20:11 IST
ಯಲಚೇನಹಳ್ಳಿ ಮೆಟ್ರೊ ನಿಲ್ದಾಣದ ಒಳಾಂಗಣ ನೋಟ
ಯಲಚೇನಹಳ್ಳಿ ಮೆಟ್ರೊ ನಿಲ್ದಾಣದ ಒಳಾಂಗಣ ನೋಟ   

ಬೆಂಗಳೂರು: ಪಡುವಣದ ದಿಕ್ಕಿನಲ್ಲಿ ಸೂರ್ಯ ಪವಡಿಸಲು ಜಾರುತ್ತಿದ್ದ. ತಂಗಾಳಿಯ ಅಲೆಗಳು ಮೈಸೋಕುತ್ತಿದ್ದವು. ಹಗಲು ಉರುಳಿ ಇರುಳು ಕವಿಯು ಆಹ್ಲಾದಕರ ವಾತಾವರಣದಲ್ಲಿ ‘ನಮ್ಮ ಮೆಟ್ರೊ’ ದಕ್ಷಿಣ ದಿಕ್ಕಿನತ್ತ ಸಾಗಿತು.

ಶನಿವಾರ ಸಂಜೆ 6.20ಕ್ಕೆ ವಿಧಾನಸೌಧದ ಆವರಣದಲ್ಲಿ ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಅವರು ಸಂಪಿಗೆ ರಸ್ತೆ– ಯಲಚೇನಹಳ್ಳಿ ಮಾರ್ಗದ ಮೊದಲ ರೈಲಿಗೆ  ಹಸಿರು ನಿಶಾನೆ ತೋರಿಸಿದರು. 

ಸಿಂಗಾರಗೊಂಡು ಸಜ್ಜಾಗಿದ್ದ 7219 ಸಂಖ್ಯೆಯ ಮೆಟ್ರೊ ರೈಲು ಸಂಪಿಗೆ ರಸ್ತೆ ನಿಲ್ದಾಣದಿಂದ ಯಲಚೇನಹಳ್ಳಿ ಕಡೆಗೆ ಹೊರಟಿತು. ರೈಲು ನಿಧಾನವಾಗಿ ಸುರಂಗಮಾರ್ಗದೊಳಗೆ ಸಾಗುವ ದೃಶ್ಯವನ್ನು ಸಂಪಿಗೆ ರಸ್ತೆ ನಿಲ್ದಾಣದಲ್ಲಿ ಸೇರಿದ್ದ ಮಂದಿ ಕಣ್ತುಂಬಿಕೊಂಡರು.

ADVERTISEMENT

ವಿಜಯದ ಚಿಹ್ನೆಯನ್ನು ಕೈಬೆರಳಿನಲ್ಲಿ ತೋರಿಸುತ್ತ ಚಾಲಕರು ರೈಲನ್ನು ಓಡಿಸಲಾರಂಭಿಸಿದಾಗ ನಿಲ್ದಾಣದಲ್ಲಿದ್ದ ಮೆಟ್ರೊ ಸಿಬ್ಬಂದಿ ಚಪ್ಪಾಳೆ ತಟ್ಟಿ, ಸಿಹಿ ಹಂಚಿ ಹಾಗೂ ಪರಸ್ಪರ ಶುಭಕೋರುತ್ತ ಸಂಭ್ರಮಿಸಿದರು.

ನಗರದ ಜನರು ಬಹುವರ್ಷಗಳಿಂದ ನಿರೀಕ್ಷಿಸುತ್ತಿದ್ದ  ನಗರದ ನಾಲ್ಕೂ ದಿಕ್ಕುಗಳಿಗೂ ಮೆಟ್ರೊ ಸಂಪರ್ಕ ಬೆಸೆಯುವ ಕನಸು ಸಾಕಾರಗೊಂಡ ಅಪೂರ್ವ ಕ್ಷಣಗಳಿವು.

ಸಂಪಿಗೆ ರಸ್ತೆಯಿಂದ ಹೊರಟ ರೈಲು ಸುಞೀ...ಕ್ರಿಕ್‌...ಕ್ರಿಕ್‌... ಎಂದು ಶಬ್ದ ಹೊರಡಿಸುತ್ತ ಮುನ್ನಡೆದು ಸುರಂಗ ಹೊಕ್ಕಿತು. ಆ ಸುರಂಗ ಮೂಲಕ ಕೆಂಪೇಗೌಡ ನಿಲ್ದಾಣ ಮೆಜೆಸ್ಟಿಕ್‌, ಚಿಕ್ಕಪೇಟೆ, ಕೆ.ಆರ್‌.ಮಾರುಕಟ್ಟೆ ದಾಟುವವರೆಗೂ ಮಾರ್ಗದುದ್ದಕ್ಕೂ ಕತ್ತಲೋ ಕತ್ತಲು.

ಕೆ.ಆರ್‌.ರಸ್ತೆಯ ಮೆಟ್ರೊ ಮಾರ್ಗದಲ್ಲಿ ರೈಲು ಹೊರಬಂದಾಗ ಮೆಟ್ರೊ ಸಿಬ್ಬಂದಿ ಮತ್ತು ಮಾಧ್ಯಮ ಪ್ರತಿನಿಧಿಗಳಿಂದ ಮತ್ತೆ ಸಂತೋಷದ ಕೇಕೆ.  ರೈಲು ನ್ಯಾಷನಲ್‌ ಕಾಲೇಜು ನಿಲ್ದಾಣಕ್ಕೆ ಬಂದಾಗ   ಎದುರುಗೊಂಡ ಸೂರ್ಯಾಸ್ತದ ವಿಹಂಗಮ ದೃಶ್ಯ ನೋಡುಗರ ಕಣ್ಣಿಗೆ ಹಬ್ಬ ಉಂಟು ಮಾಡಿತು.

ಉದ್ಘಾಟನಾ ರೈಲು ಎತ್ತರಿಸಿದ ಮಾರ್ಗದಲ್ಲಿ ಹಾದುಹೋಗುವಾಗ ಮಾಳಿಗೆಯ ಮೇಲಿದ್ದ ಕೆಲವರು, ಟ್ರಾಫಿಕ್‌ ಸಿಗ್ನಲ್‌ಗಳ ಸಂಚಾರ ದಟ್ಟಣೆಯಲ್ಲಿ ನಿಂತಿದ್ದ ವಾಹನಗಳ ಸವಾರರು ಮೆಟ್ರೊದಲ್ಲಿದ್ದ ಸಿಬ್ಬಂದಿಯತ್ತ ಕೈಬೀಸಿ, ಚಪ್ಪಾಳೆ ತಟ್ಟುತ್ತ ಶುಭಕೋರಿದರು.

ಮೆಟ್ರೊ ಉದ್ಘಾಟನಾ ಸಂಚಾರದಲ್ಲಿ ಕಿಟಕಿಯತ್ತ ಕಣ್ಣುನೆಟ್ಟು ನಗರದ ದೃಶ್ಯ ನೋಡಿದ

ಹಸಿರು ಹಾದಿ: ರೈಲು ಲಾಲ್‌ಬಾಗ್‌ ನಿಲ್ದಾಣ ದಾಟಿದಾಗ ಎಡಕ್ಕೆ ಹಸಿರಿನ ಹಾಸು, ಬಲಗಡೆ ಕಾಂಕ್ರೀಟ್‌ ಕಾಡು ಕಾಣುತ್ತಿತ್ತು. ಸೌಂತ್‌ ಎಂಡ್‌ ವೃತ್ತ, ಜಯನಗರ ನಿಲ್ದಾಣಗಳ ನಿಂತು ಸಾಗುತ್ತಿದ್ದ ರೈಲಿನ ಎರಡು ಬದಿಯಲ್ಲೂ ಹಸಿರು  ಬಣ್ಣ ಮಾತ್ರ ಕಾಣಿಸುತ್ತಿತ್ತು.  ಅವುಗಳ ಮೇಲೆ ಹಾರುತ್ತಿದ್ದ ಗಿಳಿಗಳು ನಗರ ನೋಟದ ಹೊಸ ರೂಪವನ್ನು ಪರಿಚಯಿಸಿದವು.

ರೈಲು ಆರ್‌.ವಿ.ರಸ್ತೆ, ಬನಶಂಕರಿ ಮತ್ತು ಯಲಚೇನಹಳ್ಳಿಗೆ ತಲುಪುವವರೆಗೂ ಸಹಸ್ರಾರು ಕಟ್ಟಡಗಳ ಮೇಲೆ ಹಾದುಹೋಗುತ್ತಿದ್ದ ಕಪ್ಪು ಮೋಡಗಳು ಮನ ತಣಿಸಿದವು.

ಉದ್ಘಾಟನೆಯ ಪ್ರಯುಕ್ತ ಮಾರ್ಗದ ನಿಲ್ದಾಣಗಳನ್ನು ಬಣ್ಣ–ಬಣ್ಣದ ಬಲೂನ್‌ಗಳಿಂದ ಸಿಂಗರಿಸಲಾಗಿತ್ತು. ಕೆಲವೆಡೆ ಸುಂದರ ರಂಗೋಲಿಗಳನ್ನು ಬಿಡಿಸಿ, ಹೂವಿನ ಅಲಂಕಾರ ಮಾಡಲಾಗಿತ್ತು.

***
ಚಿಕ್ಕಪೇಟೆಯಲ್ಲಿ ನೆಲೆಸಿರುವ ನಾನು ಯಶವಂತಪುರ, ಹಲಸೂರಿನಲ್ಲಿರುವ ಕಂಪೆನಿಗಳಲ್ಲಿ ಕೆಲಸ ಮಾಡುತ್ತೇನೆ. ಕೆಲಸಕ್ಕೆ ಹೋಗಲು ಸುಲಭ ಮತ್ತು ಅಗ್ಗದ ಸೌಲಭ್ಯ ಸಿಕ್ಕಿದೆ

ಖಲೀಂವುಲ್ಲಾ, ಖಾಸಗಿ ಕಂಪೆನಿ ಉದ್ಯೋಗಿ

***

ನೆಂಟರನ್ನು ಹಾಗೂ ಸ್ನೇಹಿತರನ್ನು ವಿಧಾನಸೌಧ, ಇಸ್ಕಾನ್‌ ಹಾಗೂ ಲಾಲ್‌ಬಾಗ್‌ ವೀಕ್ಷಣೆಗೆ ಮೆಟ್ರೊದಲ್ಲಿಯೇ ಕರೆದೊಯ್ಯುತ್ತೇನೆ. ಸಮಯ ಉಳಿತಾಯವಾಗಲಿದೆ.
ಸೌಮ್ಯಾ, ಜಯನಗರ ನಿವಾಸಿ

***

ಮಲ್ಲೇಶ್ವರದಲ್ಲಿ ವಾಸವಿದ್ದೇನೆ. ಜಯನಗರ, ಕೆಂಗೇರಿ ಉಪನಗರದಲ್ಲಿರುವ  ಸಂಬಂಧಿಕರ ಮನೆಗಳಿಗೆ ಹೋಗಿ ಬರಲು ತುಂಬ ಅನುಕೂಲವಾಯಿತು
ಎಸ್‌.ವಿ.ಎಸ್‌.ರಾವ್‌, ಹಿರಿಯ ನಾಗರಿಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.