ADVERTISEMENT

ದಕ್ಷ ಅಧಿಕಾರಿಗಳಿಂದ ಪ್ರಗತಿ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2012, 19:30 IST
Last Updated 5 ಫೆಬ್ರುವರಿ 2012, 19:30 IST

ಬೆಂಗಳೂರು: `ದಕ್ಷ ಮತ್ತು ಕ್ರಿಯಾಶೀಲ ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳ ಸಂಖ್ಯೆ ಹೆಚ್ಚಾದಲ್ಲಿ ದೇಶದ ಅಭಿವೃದ್ಧಿದ ಸಾಧ್ಯ. ಈ ನಿಟ್ಟಿನಲ್ಲಿ ಮಕ್ಕಳನ್ನು ತಯಾರುಗೊಳಿಸುವತ್ತ ಚಿಂತನೆ ನಡೆಸಬೇಕು~ ಎಂದು ಸಚಿವ ಆರ್. ಅಶೋಕ ಅಭಿಪ್ರಾಯಪಟ್ಟರು.

ಬೆಂಗಳೂರು ಸ್ಟಡಿ ಸರ್ಕಲ್ ಟ್ರಸ್ಟ್ ನಗರದಲ್ಲಿ ಭಾನುವಾರ ಆಯೋಜಿಸಿದ್ದ ನೂತನ ಕಟ್ಟಡದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

`ಗ್ರಾಮೀಣ ಭಾಗದ ಮಕ್ಕಳು ಆರ್ಥಿಕ ಪರಿಸ್ಥಿತಿಯಿಂದಾಗಿ ಉನ್ನತ ಶಿಕ್ಷಣ ಪಡೆಯುವಲ್ಲಿ ವಿಫಲರಾಗುತ್ತಾರೆ. ಅಂತಹವರಿಗೆ ಬೆಂಗಳೂರು ಸ್ಟಡಿ ಸರ್ಕಲ್ ಟ್ರಸ್ಟ್ ಶೈಕ್ಷಣಿಕ ಮಾರ್ಗದರ್ಶನ ನೀಡುತ್ತಿರುವುದು ಸಂತೋಷದ ಸಂಗತಿ~ ಎಂದು ಶ್ಲಾಘಿಸಿದರು.

ಪ್ರತಿ ಸಮುದಾಯವು ಐಪಿಎಸ್ ಮತ್ತು ಐಎಎಸ್ ಅಧಿಕಾರಿಗಳನ್ನು ರೂಪಿಸುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು  ಎಂದರು.ಸಚಿವ ಎಸ್.ಸುರೇಶ್ ಕುಮಾರ್, `ಸಮಾಜದಿಂದ ಪಡೆದ ಸಹಾಯವನ್ನು, ಅಸಹಾಯಕರಿಗೆ ನೆರವಾಗುವ ಮೂಲಕ ಸಮಾಜಕ್ಕೆ ಹಿಂದಿರುಗಿಸಬೇಕು. ಈ ಸಂಸ್ಥೆಯಲ್ಲಿ ಉನ್ನತ ಶಿಕ್ಷಣಕ್ಕಾಗಿ ಮಾರ್ಗದರ್ಶನ ಪಡೆದುಕೊಳ್ಳುವ ಪ್ರತಿ ವಿದ್ಯಾರ್ಥಿಯು ಸಮಾಜದ ಒಳಿತಿಗಾಗಿ ಶ್ರಮಿಸಬೇಕು~ ಎಂದರು.
`ಪೌರ ಕಾರ್ಮಿಕನ ಮಗನೊಬ್ಬ ಕೆಎಎಸ್ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಉದಾಹರಣೆ ಇದೆ. ಇಂತಹ ನಿದರ್ಶನಗಳಿಂದ ವಿದ್ಯಾರ್ಥಿಗಳು ಸ್ಫೂರ್ತಿ ಪಡೆಯಬೇಕು ಎಂದರು.

ಶಾಸಕ ಎಲ್.ಎ.ರವಿಸುಬ್ರಹ್ಮಣ್ಯ, `ಸ್ಪರ್ಧಾತ್ಮಕ ಪರೀಕ್ಷೆ ಸೇರಿದಂತೆ ವಿದ್ಯಾರ್ಥಿಗಳು ದೊಡ್ಡಮಟ್ಟದ ಧ್ಯೇಯೋದ್ದೇಶಗಳನ್ನು ಇಟ್ಟುಕೊಳ್ಳಬೇಕು~ ಎಂದು ಹೇಳಿದರು.ಆದಾಯ ತೆರಿಗೆ ನಿವೃತ್ತ ಆಯುಕ್ತ ಎಂ.ನರಸಿಂಹಪ್ಪ, ಟ್ರಸ್ಟ್‌ನ ಅಧ್ಯಕ್ಷ ಡಾ.ಎಂ.ಆರ್.ದೊರೆಸ್ವಾಮಿ ಇತರರು ಉಪಸ್ಥಿತರಿದ್ದರು.

ವಸತಿ ಸಹಿತ ತರಬೇತಿ: ದಿ ಬೆಂಗಳೂರು ಸ್ಟಡಿ ಸರ್ಕಲ್ ಟ್ರಸ್ಟ್ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಗ್ರಾಮೀಣ ಭಾಗದ ವಿದ್ಯಾರ್ಥಿಗಳನ್ನು ಅಣಿಗೊಳಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಬನಶಂಕರಿ 3ನೇ ಹಂತದಲ್ಲಿ ಟ್ರಸ್ಟ್‌ನ ಐದು ಅಂತಸ್ತಿನ ನೂತನ ಕಟ್ಟಡವೊಂದು ನಿರ್ಮಾಣಗೊಂಡಿದೆ.

ಟ್ರಸ್ಟ್ ಐಎಎಸ್, ಕೆಎಎಸ್, ಎಂಬಿಎ ಸೇರಿದಂತೆ ಇತರೆ ಸ್ಪರ್ಧಾತ್ಮಕ ಪರೀಕ್ಷೆಯನ್ನು ತೆಗೆದುಕೊಂಡಿರುವ ವಿದ್ಯಾರ್ಥಿಗಳಿಗೆ ಉಚಿತ ಶೈಕ್ಷಣಿಕ ಮಾರ್ಗದರ್ಶನ, ಊಟ ಮತ್ತು ವಸತಿ ನೀಡುತ್ತಿದೆ. ಸುಸಜ್ಜಿತ ಗ್ರಂಥಾಲಯ ಸೌಲಭ್ಯವಿದೆ. ಶೇ 75ರಷ್ಟು ಸೀಟುಗಳು ಕಮ್ಮವಾರಿ ಜನಾಂಗಕ್ಕೆ ಮೀಸಲಿದ್ದು, ಉಳಿದಂತೆ ಇರುವ ಸೀಟುಗಳು ಇತರೆ ಜನಾಂಗದ ವಿದ್ಯಾರ್ಥಿಗಳಿಗೆ ಲಭ್ಯವಿದೆ.

`ಹಿಂದುಳಿದ  ಮತ್ತು ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಉನ್ನತ ವಿದ್ಯಾಭ್ಯಾಸದ ಕನಸನ್ನು ಸಾಕಾರಗೊಳಿಸುವ ಸಲುವಾಗಿ ಕಾರ್ಯನಿರ್ವಹಿಸುತ್ತಿದೆ.   ಈ ಬಾರಿ 95 ಮಂದಿ ವಿದ್ಯಾರ್ಥಿಗಳು ಸೇರ್ಪಡೆಗೊಂಡಿದ್ದಾರೆ~ ಎಂದು ಟ್ರಸ್ಟ್‌ನ ಅಧ್ಯಕ್ಷ ಪ್ರೊ.ಎಂ.ಆರ್.ದೊರೆಸ್ವಾಮಿ ತಿಳಿಸಿದರು. 
 

`ಕಡತ ನಾಪತ್ತೆ ಕುರಿತು ಚರ್ಚೆ~

`ಬಿಬಿಎಂಪಿಯ ರಾಜರಾಜೇಶ್ವರಿ ನಗರ, ಮಲ್ಲೇಶ್ವರ ಮತ್ತು ಗಾಂಧಿನಗರ ವಿಭಾಗಗಳಲ್ಲಿ ನಡೆದ ಕಾಮಗಾರಿ ಹಗರಣಗಳಿಗೆ ಸಂಬಂಧಪಟ್ಟ ಕಡತಗಳನ್ನು ಪಾಲಿಕೆಯಿಂದ ಸಿಐಡಿ ಕಚೇರಿಗೆ ರಾತ್ರೋರಾತ್ರಿ ಸಾಗಿಸಿರುವ ಬಗ್ಗೆ ನನಗೆ ಮಾಹಿತಿ ಇಲ್ಲ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳುತ್ತೇನೆ~ ಎಂದು ಸಚಿವ ಆರ್.ಅಶೋಕ ಪ್ರತಿಕ್ರಿಯಿಸಿದರು.

ಸಮಾರಂಭದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, `ಈ ಮೂರು ವಿಧಾನಸಭಾ ಕ್ಷೇತ್ರಗಳ ಪ್ರತಿ ವಾರ್ಡಿನಲ್ಲಿ ಎಂಜಿನಿಯರಿಂಗ್ ಸೇರಿದಂತೆ ಎಲ್ಲಾ ವಿಭಾಗಗಳ ಸಮಗ್ರ ತನಿಖೆ ನಡೆಸಲು ಈಗಾಗಲೇ ಆದೇಶ ನೀಡಲಾಗಿದೆ. ಸಿಐಡಿ ಅಧಿಕಾರಿಗಳು ನಡೆಸುವ ತನಿಖೆಗೆ ರಾತ್ರಿ ಹಗಲೆಂಬ ಪ್ರಶ್ನೆ ಉದ್ಭವಿಸುವುದಿಲ್ಲ~ ಎಂದು ಸ್ಪಷ್ಟನೆ ನೀಡಿದರು.

ಹೆಚ್ಚಿನ ಮಾಹಿತಿ ನೀಡಲು ನಿರಾಕರಿಸಿದ ಅವರು, ಸಿಐಡಿ ತನಿಖೆಯು ನನ್ನ ಇಲಾಖೆಯ ವ್ಯಾಪ್ತಿಗೆ ಬರುವುದಿಲ್ಲ ಎಂದು ನುಣುಚಿಕೊಂಡರು.
 

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.