ಬೆಂಗಳೂರು: ಕೆ.ಆರ್.ಪುರದ ಪರೋಪಕಾರಿ ಶ್ರೀನಿವಾಸ್ ಚಾರಿಟಬಲ್ ಟ್ರಸ್ಟ್ ಇತ್ತೀಚೆಗೆ ಆಯೋಜಿಸಿದ್ದ ಆರನೇ ಉಚಿತ ಸರಳ ಸಾಮೂಹಿಕ ವಿವಾಹ ಮಹೋತ್ಸವದಲ್ಲಿ 35 ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟರು.ಧಾರಾ ಮುಹೂರ್ತದ ವಸ್ತ್ರಗಳು, ಕಾಲುಂಗುರು, ಮಾಂಗಲ್ಯ ಇತರೆ ವಸ್ತುಗಳನ್ನು ಶ್ರೀನಿವಾಸ್ ಅವರು ಉಚಿತವಾಗಿ ನೀಡಿ ಶುಭ ಕೋರಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸುಪ್ರೀಂ ಕೋರ್ಟ್ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಸ್.ರಾಜೇಂದ್ರಬಾಬು, ‘ಉಚಿತ ಸರಳ ವಿವಾಹಗಳನ್ನು ಆಯೋಜಿಸುವ ಮೂಲಕ ಶ್ರೀನಿವಾಸ್ ಅವರು ಉತ್ತಮ ಸೇವೆ ಸಲ್ಲಿಸುತ್ತಿದ್ದಾರೆ. ಆದರೆ ಸರ್ಕಾರ ಇಂತಹ ಸಮಾಜ ಸೇವಕರಿಗೆ ಯಾವುದೇ ರೀತಿಯ ಪ್ರೋತ್ಸಾಹ ನೀಡುತ್ತಿಲ್ಲ. ಹಾಗಿದ್ದರೂ ಶ್ರೀನಿವಾಸ್ ಅವರು ಸೇವಾ ಕಾರ್ಯ ಮುಂದುವರಿಸಿರುವುದು ಶ್ಲಾಘನೀಯ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಆದಾಯ ತೆರಿಗೆ ಇಲಾಖೆ ಸಹಾಯಕ ಆಯುಕ್ತರಾದ ಸಿ.ಯಮುನಾ ಅವರನ್ನು ಸನ್ಮಾನಿಸಲಾಯಿತು.ಶಾಸಕ ಎನ್.ಎಸ್. ನಂದೀಶ್‌ರೆಡ್ಡಿ, ಎಡಿಜಿಪಿ (ಕಾರಾಗೃಹ) ಕುಚ್ಚಣ್ಣ ಶ್ರೀನಿವಾಸ್, ಬಿಬಿಎಂಪಿ ವಿಶೇಷ ಆಯುಕ್ತ ನಿರಂಜನ್, ಪೂರ್ವ ವಲಯದ ಡಿಸಿಪಿ ಎಂ.ಚಂದ್ರಶೇಖರ್, ಹರಿದಾಸ ಸಂಘದ ಅಧ್ಯಕ್ಷ ಹ.ರಾ.ನಾಗರಾಜಾಚಾರ್ಯ ಇತರರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.