ADVERTISEMENT

ದುರಸ್ತಿ ಕಾಣದ ಸೊರಹುಣಸೆ ಮುಖ್ಯರಸ್ತೆ

ಹ.ಸ.ಬ್ಯಾಕೋಡ
Published 2 ಆಗಸ್ಟ್ 2016, 20:02 IST
Last Updated 2 ಆಗಸ್ಟ್ 2016, 20:02 IST
ಸೊರಹುಣಸೆ ಮುಖ್ಯರಸ್ತೆಯಲ್ಲಿ ಹೊಂಡಗಳು ಬಿದ್ದಿವೆ
ಸೊರಹುಣಸೆ ಮುಖ್ಯರಸ್ತೆಯಲ್ಲಿ ಹೊಂಡಗಳು ಬಿದ್ದಿವೆ   

ಬೆಂಗಳೂರು: ಮಹದೇವಪುರ ಕ್ಷೇತ್ರದ ವರ್ತೂರು ವಾರ್ಡ್ ವ್ಯಾಪ್ತಿಯ ಸೊರಹುಣಸೆ ಗ್ರಾಮದ ಮುಖ್ಯರಸ್ತೆ ಹದಗೆಟ್ಟು ಏಳು ವರ್ಷಗಳು ಕಳೆದರೂ ರಸ್ತೆಯನ್ನು ದುರಸ್ತಿಗೊಳಿಸಿಲ್ಲ.

ಸೊರಹುಣಸೆಯಿಂದ ವಾಲೆಪುರ ಗ್ರಾಮದವರೆಗಿನ 2 ಕಿ.ಮೀ. ದೂರದ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದೆ. ರಸ್ತೆಯಲ್ಲಿ ದೊಡ್ಡ ಗಾತ್ರದ ಹೊಂಡಗಳು ನಿರ್ಮಾಣವಾಗಿವೆ. ಮಳೆ ನೀರು ಹೊಂಡಗಳಲ್ಲಿ ನಿಂತಿದ್ದು, ಕೆಸರು ಗದ್ದೆಯಂತ್ತಾಗಿದೆ. ದಿನೇದಿನೇ ಹೊಂಡಗಳ ಗಾತ್ರ ಹಿರಿದಾಗುತ್ತಿದೆ. ಇದರಿಂದ ವಾಹನ ಸವಾರರಿಗೆ ತೀವ್ರ ತೊಂದರೆ ಉಂಟಾಗಿದೆ.

‘ವೈಟ್‌ಫೀಲ್ಡ್, ಹಗದೂರು, ಇಮ್ಮಡಿಹಳ್ಳಿ, ನಾಗೊಂಡನಹಳ್ಳಿ, ಅಜಗೊಂಡನಹಳ್ಳಿ, ಚೆನ್ನಸಂದ್ರ ಹಾಗೂ ಕಾಡುಗೋಡಿಗೆ ಈ ರಸ್ತೆ ಸಂಪರ್ಕ ಕಲ್ಪಿಸುತ್ತದೆ. ಆದರೆ, ಈ ರಸ್ತೆ ಹಾಳಾಗಿರುವುದರಿಂದ ವಾಹನ ಸವಾರರು ವರ್ತೂರು ಕೋಡಿ ಮಾರ್ಗದಲ್ಲಿ ಸಂಚರಿಸುವಂತಾಗಿದೆ. ಇದರಿಂದ 6–7 ಕಿ.ಮೀ. ಹೆಚ್ಚುವರಿ ದೂರವನ್ನು ಕ್ರಮಿಸಬೇಕಿದೆ’ ಎಂದು ಸೊರಹುಣಸೆ ನಿವಾಸಿ  ಎಸ್.ಒ.ಶ್ರೀನಿವಾಸ ರೆಡ್ಡಿ ಹೇಳಿದರು.

‘ಈ ರಸ್ತೆಯನ್ನು ದುರಸ್ತಿ ಗೊಳಿಸುವಂತೆ ಹಲವು ಬಾರಿ ಸ್ಥಳೀಯ ಶಾಸಕ ಅರವಿಂದ ಲಿಂಬಾವಳಿ ಅವರಿಗೆ ಮನವಿ ಸಲ್ಲಿಸಿದ್ದೇವೆ. ಆದರೆ, ರಸ್ತೆ ಮಾತ್ರ ಸುಧಾರಣೆ ಕಂಡಿಲ್ಲ. ₹ 1.65 ಕೋಟಿ ವೆಚ್ಚದಲ್ಲಿ ರಸ್ತೆಗೆ ಡಾಂಬರು ಹಾಕುತ್ತೇವೆ ಎಂದು ಅವರು 2014ರಲ್ಲೇ ಹೇಳಿಕೆ ನೀಡಿದ್ದರು. ಆದರೆ, ಎರಡು ವರ್ಷ ಕಳೆದರೂ ರಸ್ತೆಗೆ ಡಾಂಬರು ಹಾಕಿಲ್ಲ’ ಎಂದು ದೂರಿದರು.

‘ಹತ್ತು ವರ್ಷಗಳ ಹಿಂದೆ ಈ ರಸ್ತೆ ಸೊರಹುಣಸೆ ಗ್ರಾಮ ಪಂಚಾಯ್ತಿಗೆ ಸೇರಿತ್ತು. ಆಗ ಖುದ್ದು ಪಂಚಾಯ್ತಿಯ ಅನುದಾನದಿಂದ ರಸ್ತೆಗೆ ಡಾಂಬರು ಹಾಕಲಾಗಿತ್ತು. ಬಿಬಿಎಂಪಿ ವ್ಯಾಪ್ತಿಗೆ ಸೇರಿ ಆರು ವರ್ಷಗಳು ಕಳೆದರೂ ರಸ್ತೆಯನ್ನು ದುರಸ್ತಿ ಮಾಡಿಲ್ಲ’ ಎಂದು ಸ್ಥಳೀಯ ನಿವಾಸಿ ಎಂ.ಸಿ.ಸಿ. ರವಿ ಆರೋಪಿಸಿದರು.

‘ರಸ್ತೆಯಲ್ಲಿ 1–2 ಅಡಿ ಆಳದ ಹೊಂಡಗಳು ಬಿದ್ದಿವೆ. ವಾಹನ ಸವಾರರು ಜೀವವನ್ನು ಕೈಯ್ಯಲ್ಲಿ ಹಿಡಿದು ಸಂಚರಿಸುವಂತಾಗಿದೆ. ಬೈಕ್‌ ಸವಾರರು ಈ ರಸ್ತೆಯಲ್ಲಿ ಸಂಚರಿಸಲು ಹರಸಾಹಸ ಪಡುವ ದೃಶ್ಯ ಸಾಮಾನ್ಯ’ ಎಂದು ಹೇಳಿದರು.‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.