ADVERTISEMENT

ದೂರವಾದ ನೀರಿನ ಆತಂಕ

ಮೇ ಅಂತ್ಯದವರೆಗೂ `ಕಾವೇರಿ' ಹರಿವು ಸರಾಗ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2013, 19:12 IST
Last Updated 5 ಏಪ್ರಿಲ್ 2013, 19:12 IST

ಬೆಂಗಳೂರು: ಕೃಷ್ಣರಾಜ ಸಾಗರ(ಕೆಆರ್‌ಎಸ್) ಜಲಾಶಯದಲ್ಲಿ ನೀರಿನ ಮಟ್ಟ ಕನಿಷ್ಠ ಮಟ್ಟಕ್ಕೆ ತಲುಪಿದ್ದರೂ ರಾಜಧಾನಿಗೆ ಇನ್ನೆರಡು ತಿಂಗಳು ಕಾಲ ಕುಡಿಯುವ ನೀರಿನ ಪೂರೈಕೆಯಲ್ಲಿ ಯಾವುದೇ ಸಮಸ್ಯೆಯಾಗದು. ಈ ಮೂಲಕ ಏಪ್ರಿಲ್‌ನಲ್ಲಿ ನಗರಕ್ಕೆ `ಕಾವೇರಿ' ಕೈಕೊಡಲಿದೆ ಎಂಬ ಆತಂಕ ದೂರವಾಗಿದೆ.

ಕಾವೇರಿ ನೀರು ಪೂರೈಕೆಯ ಸ್ಥಿತಿಗತಿಯ ಬಗ್ಗೆ ಸಮಗ್ರ ಮಾಹಿತಿ ನೀಡಲು ಫೆಬ್ರುವರಿ 20ರಂದು ಬಿಬಿಎಂಪಿ ಸದಸ್ಯರಿಗೆ ಜಲಮಂಡಳಿಯು ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ಶಿವ ಸಮತೋಲನ ಜಲಾಶಯ ಹಾಗೂ ತೊರೆಕಾಡನಹಳ್ಳಿಗೆ `ಪ್ರವಾಸ' ಆಯೋಜಿಸಲಾಗಿತ್ತು. ಜಲಾಶಯದ ನೀರಿನ ಮಟ್ಟ ಪರಿಶೀಲಿಸಿ ಮಂಡಳಿಯ ಅಧ್ಯಕ್ಷ ಗೌರವ್ ಗುಪ್ತ, `ನಗರಕ್ಕೆ ಬೇಕಾಗಿರುವ ಅಗತ್ಯ ನೀರಿನ ಪೂರೈಕೆ ಏಪ್ರಿಲ್ ತಿಂಗಳಿನಲ್ಲಿ ಕಷ್ಟವಾಗಲಿದೆ. ಈ ಬಾರಿ ಜಲಾಶಯದ ಬಳಸಲಾರದ ನೀರನ್ನು (ಡೆಡ್ ಸ್ಟೋರೇಜ್) ಬಳಸಿಕೊಳ್ಳುವ ಯೋಚನೆಯೂ ಇದೆ. ಬೇರೆ ಜಲಾಶಯಗಳ ನೀರನ್ನು ಬಳಸಿಕೊಳ್ಳುವ ಬಗ್ಗೆಯೂ ಗಮನ ಹರಿಸುವ ಗಂಭೀರ ಸ್ಥಿತಿ ಇದೆ' ಎಂದು ಆತಂಕ ವ್ಯಕ್ತಪಡಿಸಿದ್ದರು.

ಮಾರ್ಚ್‌ನಲ್ಲಿ ಶಿವ ಜಲಾಶಯದಲ್ಲಿ ನೀರಿನ ಮಟ್ಟ ಏರಿಳಿತ ಆತಂಕ ಸೃಷ್ಟಿಸಿತ್ತು. ಜಲಾಶಯಕ್ಕೆ ಕೆಆರ್‌ಎಸ್‌ನಿಂದ ಬಿಡುಗಡೆಯಾಗುವ ನೀರಿನ ಪ್ರಮಾಣ ಸಹ ಕಡಿಮೆಯಾಗಿತ್ತು. ಹೆಚ್ಚುವರಿ ನೀರು ಬಿಡುಗಡೆಗೆ ಜಲಮಂಡಳಿ ಅಧಿಕಾರಿಗಳು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದರು. ಶಿವ ಜಲಾಶಯಕ್ಕೆ ಈಗ ಬಿಡುಗಡೆಯಾಗುವ ನೀರಿನ ಪ್ರಮಾಣದಲ್ಲಿ ಸುಧಾರಣೆಯಾಗಿದೆ.
`ಮೇ ಅಂತ್ಯದ ವರೆಗೆ ನಗರಕ್ಕೆ 3 ಟಿಎಂಸಿ ನೀರು ಅಗತ್ಯ ಇದೆ. ಕೆಆರ್‌ಎಸ್ ಜಲಾಶಯದಲ್ಲಿ ಈಗ 3.4 ಟಿಎಂಸಿ ನೀರು ಇದೆ. ನಗರಕ್ಕೆ ಸಮರ್ಪಕ ನೀರು ಪೂರೈಕೆಗೆ ಶಿವ ಸಮತೋಲನ ಜಲಾಶಯಕ್ಕೆ ಪ್ರತಿನಿತ್ಯ 600 ಕ್ಯೂಸೆಕ್ ನೀರು ಹರಿದು ಬರಬೇಕಿದೆ.

ಈಗ ಕೆಆರ್‌ಎಸ್‌ನಿಂದ ಅಗತ್ಯ ಪ್ರಮಾಣದಲ್ಲಿ ನೀರು ಬಿಡುಗಡೆಯಾಗುತ್ತಿದೆ. ಹೀಗಾಗಿ ಮೇ ಅಂತ್ಯದ ವರೆಗೆ ನೀರಿನ ಸಮಸ್ಯೆ ಉದ್ಭವಿಸುವುದಿಲ್ಲ. ಜನ ಆತಂಕ ಪಡಬೇಕಾಗಿಲ್ಲ' ಎಂದು ಜಲಮಂಡಳಿಯ ಕಾವೇರಿ ಯೋಜನೆಯ ಮುಖ್ಯ ಎಂಜಿನಿಯರ್ ನಾರಾಯಣ್ `ಪ್ರಜಾವಾಣಿ'ಗೆ ಗುರುವಾರ ತಿಳಿಸಿದರು.

ಕೆಲವು ದಿನಗಳ ಹಿಂದೆ ಜಲಾಶಯದಲ್ಲಿ ನೀರಿನ ಪ್ರಮಾಣ ಕಡಿಮೆಯಾದ ಕಾರಣ ಹೆಚ್ಚುವರಿ ನೀರು ಬಿಡುಗಡೆಗೆ ವಿನಂತಿಸಲಾಗಿತ್ತು. ನಿತ್ಯ 600 ಕ್ಯೂಸೆಕ್ ನೀರು ಬಿಡುಗಡೆ ಮಾಡುವಂತೆ ವಿನಂತಿಸಿದಾಗ 800 ಕ್ಯೂಸೆಕ್ ಬಿಟ್ಟಿದ್ದರು. ನಡುವೆ 450 ಕ್ಯೂಸೆಕ್‌ಗೆ ಇಳಿಸಿದ್ದರು. ಪ್ರತಿದಿನ 600 ಕ್ಯೂಸೆಕ್ ಬಿಡುಗಡೆಗೆ ಆಗ್ರಹಿಸಲಾಗಿತ್ತು. ಈಗ ಅದೇ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ' ಎಂದು ಅವರು ಮಾಹಿತಿ ನೀಡಿದರು.

`ನಗರಕ್ಕೆ ಪ್ರತಿದಿನ 1,400 ದಶಲಕ್ಷ ಲೀಟರ್ ನೀರು ಅಗತ್ಯ ಇದೆ. ಅಂದರೆ ತಿಂಗಳಿಗೆ 1.5 ಟಿಎಂಸಿ ನೀರು ಬೇಕು. ಈ ವರ್ಷದಿಂದ ಕಾವೇರಿ 4ನೇ ಹಂತದ 2ನೇ ಘಟ್ಟದಿಂದ ನಗರಕ್ಕೆ ನೀರು ಪೂರೈಕೆ ಆಗುತ್ತಿರುವ ಹಿನ್ನೆಲೆಯಲ್ಲಿ ನಗರಕ್ಕೆ ಪೂರೈಕೆ ಪ್ರಮಾಣ ಗಣನೀಯವಾಗಿ ಹೆಚ್ಚಿದೆ. ಕಳೆದ ಏಪ್ರಿಲ್‌ಗೆ ಹೋಲಿಸಿದರೆ ಈ ಬಾರಿ ಸಮಸ್ಯೆ ಕಡಿಮೆ' ಎಂದು ಜಲಮಂಡಳಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

`ತಿಪ್ಪಗೊಂಡನಹಳ್ಳಿ ಜಲಾಶಯ ನವೆಂಬರ್‌ನಲ್ಲಿ ಖಾಲಿಯಾಗಿದೆ. ಕಬಿನಿ ಜಲಾಶಯವೂ ಬರಿದಾಗಿದೆ. ಶಿವ ಜಲಾಶಯದಲ್ಲಿ ನೀರಿನ ಮಟ್ಟ ಕುಸಿದಿದ್ದರಿಂದ ಹೇಮಾವತಿ ನೀರು ಬಳಸಿಕೊಳ್ಳುವ ಬಗ್ಗೆಯೂ ಗಮನ ಹರಿಸಲಾಗಿತ್ತು. ಡೆಡ್ ಸ್ಟೋರೇಜ್ ನೀರನ್ನು ಎತ್ತುವ ಕುರಿತು ಚರ್ಚೆಗಳು ನಡೆದಿದ್ದವು. ಈಗ ಅಂತಹ ಪ್ರಮೇಯ ಇಲ್ಲ. ಅಲ್ಲದೆ ಜಲಾನಯನ ಪ್ರದೇಶದಲ್ಲಿ ಏಪ್ರಿಲ್ ಕೊನೆಯ ಭಾಗ ಹಾಗೂ ಮೇ ಆರಂಭದಲ್ಲಿ ಮುಂಗಾರುಪೂರ್ವ ಮಳೆಯಾಗುವ ನಿರೀಕ್ಷೆ ಇದೆ' ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.