ADVERTISEMENT

ದೂರಿತ್ತ ಎಂಜಿನಿಯರ್‌ಗೆ ಚುಚ್ಚುಮಾತು

​ಪ್ರಜಾವಾಣಿ ವಾರ್ತೆ
Published 28 ಮೇ 2012, 19:30 IST
Last Updated 28 ಮೇ 2012, 19:30 IST

ಬೆಂಗಳೂರು: ಪಾಲಿಕೆಯಲ್ಲಿ ಪ್ರಮುಖ ಹಗರಣಗಳನ್ನು ಬಯಲಿಗೆಳೆದು ಅನಾಮಧೇಯ ವ್ಯಕ್ತಿಗಳಿಂದ ಬೆದರಿಕೆಗೆ ಒಳಗಾಗಿದ್ದ ಬಿಬಿಎಂಪಿ ಆಯುಕ್ತರ ಜಾಗೃತ ಕೋಶದ (ಟಿವಿಸಿಸಿ) ಮುಖ್ಯ ಎಂಜಿನಿಯರ್ ಎನ್. ದೇವರಾಜು ಅವರಿಗೆ ಜನಪ್ರತಿನಿಧಿಗಳು ಹಾಗೂ ಹಿರಿಯ ಅಧಿಕಾರಿಗಳು ರಕ್ಷಣೆ ನೀಡುವ ಬದಲಿಗೆ ಹೀಗಳೆದು ಅವಮಾನಿಸಿರುವ ಘಟನೆ ಸೋಮವಾರ ನಡೆದಿದೆ.

ಮೇಯರ್ ವಿಡಿಯೋ ಕಾನ್ಫರೆನ್ಸ್ ನಡೆಸಿದ ನಂತರ ನಡೆದ ಸ್ಥಾಯಿ ಸಮಿತಿ ಅಧ್ಯಕ್ಷರು ಹಾಗೂ  ಅಧಿಕಾರಿಗಳ ಸಭೆಯಲ್ಲಿ ಈ ಘಟನೆ ನಡೆದಿದೆ.ಯಲಹಂಕ ವ್ಯಾಪ್ತಿಯ ಬೈರತಿ, ಬಾಗಲೂರು ಹಾಗೂ ಬಿಳಿಶಿವಾಲೆಯಲ್ಲಿ ಕೈಗೊಳ್ಳುತ್ತಿರುವ ರಸ್ತೆ ವಿಸ್ತರಣೆ ಕಾಮಗಾರಿಯ ಅಭಿವೃದ್ಧಿ ಹಕ್ಕುಗಳ ಹಸ್ತಾಂತರ (ಟಿಡಿಆರ್) ಪ್ರಕ್ರಿಯೆಗೆ ಸಂಬಂಧಿಸಿದ ಮೂರು ಕಡತಗಳನ್ನು ಪರಿಶೀಲಿಸಿದ ನಂತರ ತಮಗೆ ಅನುಕೂಲವಾಗುವ ರೀತಿಯಲ್ಲಿ ವರದಿ ಸಲ್ಲಿಸಬೇಕು ಎಂದು ಆರೇಳು ಮಂದಿ ಅನಾಮಧೇಯ ವ್ಯಕ್ತಿಗಳು ಇದೇ ತಿಂಗಳ 21ರಂದು ಟಿವಿಸಿಸಿ ಕಚೇರಿಗೆ ಆಗಮಿಸಿ ಬೆದರಿಕೆ ಹಾಕಿದ್ದರು. ತಪ್ಪಿದಲ್ಲಿ ಟಿವಿಸಿಸಿ ಕಚೇರಿಗೆ ಬೆಂಕಿಯಿಡುವುದಾಗಿ ಬೆದರಿಕೆ ಹಾಕಿದ್ದರು. ಇದರಿಂದ ಟಿವಿಸಿಸಿ ಕಚೇರಿ ಎರಡು ದಿನ ಸುದ್ದಿಯಾಗಿತ್ತು.

ಇದರ ಬೆನ್ನಲ್ಲಿಯೇ ಸೋಮವಾರ ಮೇಯರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಗೆ ಎನ್. ದೇವರಾಜು ಅವರನ್ನು ಕರೆಸಿ ಸ್ಥಾಯಿ ಸಮಿತಿಗಳ ಅಧ್ಯಕ್ಷರ ಸಮ್ಮುಖದಲ್ಲಿಯೇ ತರಾಟೆಗೆ ತೆಗೆದುಕೊಳ್ಳಲಾಯಿತು ಎಂದು ಮೂಲಗಳು ಖಚಿತಪಡಿಸಿವೆ. `ಬೆದರಿಕೆ ಪ್ರಕರಣದಲ್ಲಿ ನೀವು ನೇರವಾಗಿ ಮಾಧ್ಯಮಗಳಿಗೆ ಮಾಹಿತಿ ನೀಡುವ ಮೂಲಕ `ಮಾಧ್ಯಮಗಳ ಹೀರೋ~ ಹೋಗಲು ಹೊರಟಿದ್ದೀರಿ. ಇದರಿಂದ ಪಾಲಿಕೆ ವರ್ಚಸ್ಸಿಗೆ ಧಕ್ಕೆಯಾಗಿದೆ~ ಎಂದು ಹಿರಿಯ ಅಧಿಕಾರಿಗಳು ದೇವರಾಜು ಅವರಿಗೆ  ಚುಚ್ಚಿ ಮಾತನಾಡಿದರು ಎಂದು ತಿಳಿದು ಬಂದಿದೆ.

ಅನಾಮಧೇಯ ವ್ಯಕ್ತಿಗಳಿಂದ ಬೆದರಿಕೆ ಬಂದಿರುವ ಹಿನ್ನೆಲೆಯಲ್ಲಿ ರಕ್ಷಣೆ ನೀಡುವಂತೆ ಮುಖ್ಯ ಎಂಜಿನಿಯರ್ ಕೋರಿರುವ ಕುರಿತು ಸಭೆಯಲ್ಲಿ ಪ್ರಸ್ತಾಪಿಸಿದ ಜನಪ್ರತಿನಿಧಿಯೊಬ್ಬರು, `ನಿಮಗೆ ದೊಡ್ಡ ಗನ್ ಕೊಡಿಸುತ್ತೇನೆ. ಅದನ್ನು ಹಿಡ್ಕೊಂಡು ಓಡಾಡಿ~ ಎಂದು ವ್ಯಂಗ್ಯವಾಗಿ ಮೂದಲಿಸಿದರು ಎಂದು ಈ ಮೂಲಗಳು ತಿಳಿಸಿವೆ.
 ರಾಜೀನಾಮೆ

ಬಿಬಿಎಂಪಿಯ ವಿರೋಧ ಪಕ್ಷದ ಉಪ ನಾಯಕನ ಸ್ಥಾನಕ್ಕೆ ಕಾಂಗ್ರೆಸ್‌ನ ಟಿ. ಮಲ್ಲೇಶ್ ಸೋಮವಾರ ರಾಜೀನಾಮೆ ನೀಡಿದ್ದಾರೆ. ವಿರೋಧ ಪಕ್ಷದ ನಾಯಕನ ಸ್ಥಾನ ಸಿಗದೇ ಇರುವುದರಿಂದ ಬೇಸರಗೊಂಡು ಉಪನಾಯಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ ಎನ್ನಲಾಗಿದೆ. ಈ ನಡುವೆ, ಪಾಲಿಕೆಯ ವಿರೋಧ ಪಕ್ಷದ ನಾಯಕರಾಗಿ ಎಂ.ಕೆ. ಗುಣಶೇಖರ್ ಸೋಮವಾರ ಅಧಿಕಾರ ವಹಿಸಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.