ADVERTISEMENT

ದೆಹಲಿಯ ಬಾಲಕಿ ರಕ್ಷಣೆ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2017, 19:07 IST
Last Updated 7 ಅಕ್ಟೋಬರ್ 2017, 19:07 IST

ಬೆಂಗಳೂರು: ದುಷ್ಕರ್ಮಿಗಳು ಅಪಹರಿಸಿದ್ದ ದೆಹಲಿಯ 17 ವರ್ಷದ ಬಾಲಕಿಯನ್ನು ರಕ್ಷಿಸಿರುವ ನಗರದ ರೈಲ್ವೆ ಪೊಲೀಸರು, ಆಕೆಯನ್ನು ಪೋಷಕರ ಮಡಿಲಿಗೆ ಸೇರಿಸಿದ್ದಾರೆ.

‘2014ರಲ್ಲಿ ಬಾಲಕಿಯನ್ನು ಅಪಹರಿಸಿದ್ದ ದುಷ್ಕರ್ಮಿಗಳು, ನಗರಕ್ಕೆ ಕರೆತಂದು ಉದ್ಯಮಿಯೊಬ್ಬರ ಮನೆಗೆಲಸಕ್ಕಾಗಿ ಮಾರಾಟ ಮಾಡಿದ್ದರು. ಅಂದಿನಿಂದ ಅವರ ಮನೆಯಲ್ಲಿ ಜೀತದಾಳುವಾಗಿ ದುಡಿದಿದ್ದ ಬಾಲಕಿ, ಇತ್ತೀಚೆಗೆ ಅಲ್ಲಿಂದ ತಪ್ಪಿಸಿಕೊಂಡು ರೈಲ್ವೆ ನಿಲ್ದಾಣಕ್ಕೆ ಬಂದಿದ್ದಳು.’

‘ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಆಕೆಯನ್ನು ಗಮನಿಸಿದ್ದ ಸಿಬ್ಬಂದಿ, ವಿಚಾರಣೆಗೆ ಒಳಪಡಿಸಿದ್ದರು. ಆಗ ಅಪಹರಣ ವಿಷಯ ಗೊತ್ತಾಗಿತ್ತು. ಬಳಿಕ ಪೋಷಕರಿಗೆ ಮಾಹಿತಿ ನೀಡಿ, ಅವರನ್ನು ಇಲ್ಲಿಗೆ ಕರೆಸಿಕೊಂಡೆವು. ಬಾಲಕಿಯನ್ನು ಅವರ ಸುಪರ್ದಿಗೆ ಒಪ್ಪಿಸಿದ್ದೇವೆ. ಆಕೆಯನ್ನು ಖರೀದಿಸಿದ್ದ ಉದ್ಯಮಿ ಯಾರು ಎಂಬುದನ್ನು ಪತ್ತೆ ಹಚ್ಚುತ್ತಿದ್ದೇವೆ’ ಎಂದು ರೈಲ್ವೆ ಪೊಲೀಸ್‌ ಅಧಿಕಾರಿ ತಿಳಿಸಿದರು.

ADVERTISEMENT

ಮಕ್ಕಳ ರಕ್ಷಣೆಗಾಗಿ ಆಗಾಗ ವಿಶೇಷ ಕಾರ್ಯಾಚರಣೆ ಹಮ್ಮಿಕೊಳ್ಳುತ್ತಿದ್ದೇವೆ. ಮೂರು ತಿಂಗಳಿನಲ್ಲಿ ರಾಜ್ಯದ ರೈಲು ನಿಲ್ದಾಣಗಳಲ್ಲಿ 450ಕ್ಕೂ ಹೆಚ್ಚು ಮಕ್ಕಳು ಹಾಗೂ ಮಹಿಳೆಯರನ್ನು ರಕ್ಷಿಸಿದ್ದೇವೆ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.