ADVERTISEMENT

ನಗರದಲ್ಲಿ ‘ಚಂದ್ರಯಾನ– 2’ ರ ರೋವರ್‌ ಪರೀಕ್ಷೆ

ಎಸ್.ರವಿಪ್ರಕಾಶ್
Published 25 ಅಕ್ಟೋಬರ್ 2017, 19:50 IST
Last Updated 25 ಅಕ್ಟೋಬರ್ 2017, 19:50 IST
ನಗರದಲ್ಲಿ  ‘ಚಂದ್ರಯಾನ– 2’ ರ ರೋವರ್‌ ಪರೀಕ್ಷೆ
ನಗರದಲ್ಲಿ ‘ಚಂದ್ರಯಾನ– 2’ ರ ರೋವರ್‌ ಪರೀಕ್ಷೆ   

ಬೆಂಗಳೂರು: ಮುಂದಿನ ಮಾರ್ಚ್‌ನಲ್ಲಿ ಉಡಾವಣೆಗೊಳ್ಳುವ ‘ಚಂದ್ರಯಾನ–2’ ರ ರೋವರ್‌ ಚಲನೆ ಮತ್ತು ಇತರ ಸಂಕೀರ್ಣ ಪರೀಕ್ಷೆಗಳು ಅಂತಿಮ ಘಟ್ಟಕ್ಕೆ ತಲುಪಿದೆ. ಬರುವ 3– 4 ವಾರಗಳಲ್ಲಿ ಬಾಹ್ಯಾಕಾಶ ನೌಕೆ ಜೋಡಣೆ ಕಾರ್ಯವೂ ಆರಂಭಗೊಳ್ಳಲಿದೆ.

ನಗರದ ಇಸ್ರೊ ಕೇಂದ್ರ ಕಚೇರಿ ಸಮೀಪದಲ್ಲೇ ಕಲ್ಲು– ಮಣ್ಣುಗಳಿಂದ ಕೂಡಿದ ಚಂದ್ರನ ಮೇಲ್ಮೈ ಹೋಲುವ ಪ್ರದೇಶವನ್ನು ಸೃಷ್ಟಿಸಲಾಗಿದ್ದು, ಅಲ್ಲಿ ಆರು ಚಕ್ರಗಳ ರೋವರ್‌ ಚಲನೆಯ ಪರೀಕ್ಷೆ ನಡೆಯುತ್ತಿದೆ ಎಂದು ಇಸ್ರೊ ಹಿರಿಯ ನಿರ್ದೇಶಕ ಎಂ.ಅಣ್ಣಾದೊರೈ ‘ಪ್ರಜಾವಾಣಿ’ಗೆ ಖಚಿತಪಡಿಸಿದರು.

ಚಂದ್ರನ ಅಂಗಳದ ಮೇಲೆ ರೋವರ್‌ ಇಳಿಸಿ ಸಂಶೋಧನೆ ನಡೆಸುವ ಉದ್ದೇಶದ ‘ಚಂದ್ರಯಾನ– 2’ ಭಾರತದ ಬಾಹ್ಯಾಕಾಶ ವಿಜ್ಞಾನದಲ್ಲಿ ಮೈಲಿಗಲ್ಲು ಎನಿಸಲಿದೆ. ಭಾರತ ಅಂತರ ಗ್ರಹಯಾನ ಆರಂಭಿಸಿ 2018 ಕ್ಕೆ ಒಂದು ದಶಕ ತುಂಬಲಿದೆ. ಚಂದ್ರಯಾನದ ಮುಂದುವರಿದ ಭಾಗವಾಗಿ ‘ಚಂದ್ರಯಾನ –2’ ನೌಕೆಯನ್ನು ಕಳುಹಿಸಲಾಗುತ್ತಿದೆ. ಈ ಯಾನದಲ್ಲಿ ಕಕ್ಷೆಗಾಮಿ (ಆರ್ಬಿಟರ್), ಲ್ಯಾಂಡರ್‌ ಮತ್ತು ರೋವರ್‌ ಇರುತ್ತದೆ. ಲ್ಯಾಂಡರ್‌ ಮೂಲಕ ರೋವರ್‌ ಅನ್ನು ಇಳಿಸಿದ ಬಳಿಕ ಕಕ್ಷೆಗಾಮಿ ಚಂದ್ರನನ್ನು ಪರಿಭ್ರಮಣ ನಡೆಸಲಿದೆ.

ADVERTISEMENT

‘ಮಂಗಳಯಾನ’ದ ಯಶಸ್ಸಿನ ಬಳಿಕ ಬಾಹ್ಯಾಕಾಶ ಯಾನದ ತಂತ್ರಜ್ಞಾನದ ಪರೀಕ್ಷೆಗೆ ‘ಚಂದ್ರಯಾನ–2 ’ವೇದಿಕೆಯಾಗಲಿದೆ. ವಿಶೇಷವಾಗಿ ಬಾಹ್ಯಾಕಾಶ ನೌಕೆಯಿಂದ ಲ್ಯಾಂಡರ್‌ ಮೂಲಕ ರೋವರ್‌ ಅನ್ನು ನಿಧಾನವಾಗಿ ಚಂದ್ರನ ನೆಲದ ಮೇಲೆ ಇಳಿಸುವ ಪ್ರಕ್ರಿಯೆ ದೊಡ್ಡ ಸವಾಲಾಗಿದ್ದು, ಅದರ ಪ್ರಯೋಗ ಭರದಿಂದ ನಡೆಯುತ್ತಿದೆ ಎಂದು ಮೂಲಗಳು ಹೇಳಿವೆ.

ಜಿಎಸ್‌ಎಲ್‌ವಿ– ಎಂಕೆ 2 ರಾಕೆಟ್‌ 3300 ಕೆ.ಜಿ ತೂಕದ ಕಕ್ಷೆಗಾಮಿ, ಲ್ಯಾಂಡರ್‌ ಮತ್ತು ರೋವರ್‌ ಅನ್ನು ಒಯ್ಯಲಿದೆ. ಲ್ಯಾಂಡರ್‌ ಅನ್ನು ಚಂದ್ರನಲ್ಲಿ ಯಾವ ಪ್ರದೇಶದಲ್ಲಿ ಇಳಿಸಬೇಕು ಎಂಬುದು ಇನ್ನೂ ನಿರ್ಧಾರ ಆಗಿಲ್ಲ. ಇದಕ್ಕಾಗಿ ‘ಚಂದ್ರಯಾನ–1’ ಸೆರೆ ಹಿಡಿದ ಚಿತ್ರಗಳ ಅಧ್ಯಯನ ನಡೆಸಲಾಗುತ್ತಿದೆ. ಲ್ಯಾಂಡರ್‌ ಪ್ರೊಪೆಲ್ಷನ್‌ ಮಾದರಿಯ ಪ್ರಯೋಗ ಮತ್ತು  ಲ್ಯಾಂಡರ್‌ ಅನ್ನು ನಿಖರವಾಗಿ ಇಳಿಸುವ ನಿರ್ವಹಣಾ ಪರೀಕ್ಷೆಯನ್ನು 2016 ರ ಅಕ್ಟೋಬರ್‌ ಮತ್ತು 2017 ಮಾರ್ಚ್‌ನಲ್ಲಿ ಚಿತ್ರದುರ್ಗದಲ್ಲಿ ಯಶಸ್ವಿಯಾಗಿ ನಡೆಸಲಾಗಿದೆ.

ಲ್ಯಾಂಡರ್‌ನ  ಸೆನ್ಸರ್‌ ಅನ್ನು ವಿಶೇಷ ವಿಮಾನಕ್ಕೆ ಅಳವಡಿಸಿ ಮೊದಲ ಹಂತದ ನಿರ್ವಹಣಾ ಪರೀಕ್ಷೆಯನ್ನೂ ಚಿತ್ರದುರ್ಗದಲ್ಲಿ  ನಡೆಸಲಾಗಿದೆ. ಈ ಪರೀಕ್ಷೆ ಬಳಿಕ ಸೆನ್ಸರ್‌ ಕಾರ್ಯನಿರ್ವಹಣೆ ತೃಪ್ತಿದಾಯಕವಾಗಿದೆ ಎಂದು ಮೂಲಗಳು ತಿಳಿಸಿವೆ.

ಚಂದ್ರನ ಅಂಗಳದ ಕಲ್ಲು ಮತ್ತು ಮಣ್ಣಿನಲ್ಲಿರುವ ರಾಸಾಯನಿಕ ಸಂಯೋಜನೆಯನ್ನು ಅಧ್ಯಯನ ನಡೆಸುವುದು ಚಂದ್ರಯಾನ–2 ರ ಮುಖ್ಯ ಉದ್ದೇಶಗಳಲ್ಲಿ ಒಂದು. ಇದಕ್ಕೆ ಅಗತ್ಯವಿರುವ ಉಪಕರಣ ‘ಸಿಎಂ–244 ಅಲ್ಫಾ ಎಮಿಟರ್‌’ ಅನ್ನು ರಷ್ಯಾದ ಐಸೊಟೋಪ್‌ ಸಂಸ್ಥೆ ಅಭಿವೃದ್ಧಿಪಡಿಸಿದ್ದು, ಇದನ್ನು ಇಸ್ರೊ ಖರೀದಿಸಿದೆ. ಅಲ್ಫಾ ಕಿರಣಗಳನ್ನು ಹೊರಸೂಸಿ ಚಂದ್ರನಲ್ಲಿರುವ ಯಾವುದೇ ಕಲ್ಲು ಮತ್ತು ಮಣ್ಣಿನಲ್ಲಿರುವ ರಾಸಾಯನಿಕ ಸಂಯೋಜನೆಯನ್ನು ಅಲ್ಫಾ ಎಮಿಟರ್‌ ಪತ್ತೆ ಮಾಡುತ್ತದೆ ಎಂದು ಇಸ್ರೊ ಮೂಲಗಳು ತಿಳಿಸಿವೆ.

ಅತ್ಯಾಧುನಿಕ ಉಪಕರಣಗಳು:

ಚಂದ್ರಯಾನ– 1 ಎರಡು ವರ್ಷಗಳ ಕಾರ್ಯ ನಿರ್ವಹಿಸಬೇಕಿತ್ತು. ಆದರೆ, 10 ತಿಂಗಳು ಮಾತ್ರ ಕಾರ್ಯ ನಿರ್ವಹಿಸಿದ್ದರೂ ಸಾಕಷ್ಟು ಮಾಹಿತಿಗಳನ್ನು ಕಲೆ ಹಾಕಿತ್ತು. ಚಂದ್ರನಲ್ಲಿ ನೀರು ಇದ್ದ ವಿಷಯವನ್ನೂ ಮೊದಲ ಬಾರಿಗೆ ಪತ್ತೆ ಮಾಡಿತ್ತು. ಅಲ್ಲದೆ, ರೇಡಿಯೋ ಅನಾಟಮಿ ಆಫ್‌ ಮೂನ್‌ ಬೌಂಡ್‌ ಹೈಪರ್‌ ಸೆನ್ಸಿಟಿವ್‌ ಐಯೊನೊಸ್ಪಿಯರ್‌ ಅಂಡ್‌ ಅಟ್ಮಾಸ್ಪಿಯರ್‌ ಎಂಬ ಉಪಕರಣದಿಂದ ಚಂದ್ರನ ಸುತ್ತ ಇರುವ ಪ್ಲಾಸ್ಮಾದ ಸಾಂದ್ರತೆ ಮತ್ತು ಕಾಲಕ್ರಮೇಣದಲ್ಲಿ ಆದ ಬದಲಾವಣೆಯನ್ನು ಮಾಪನ ಮಾಡಲಿದೆ. ಅಲ್ಲಿನ ಪರಿಸರ ಅದು ಹೇಗೆ ವಿಕಾಸ ಹೊಂದಿತು ಎಂಬುದರ ಅಧ್ಯಯನವೂ ನಡೆಯಲಿದೆ.

ಜೋಡಣೆ ಕಾರ್ಯ 3–4 ವಾರಗಳಲ್ಲಿ ಆರಂಭ:

ಮುಂದಿನ ಮೂರು– ನಾಲ್ಕು ವಾರಗಳಲ್ಲಿ ಚಂದ್ರಯಾನ–2 ನೌಕೆಯ ಪರಿಕರಗಳನ್ನು ಜೋಡಿಸುವ ಕಾರ್ಯ ಆರಂಭವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.