ಬೆಂಗಳೂರು: ನಗರದ ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ ಜೈವಿಕ ತಂತ್ರಜ್ಞಾನ ವಿಭಾಗದ ಮುಖ್ಯಸ್ಧರಾಗಿರುವ ಖ್ಯಾತ ವನ್ಯಜೀವಿ ಛಾಯಾಗ್ರಾಹಕ ಡಾ. ಎಚ್. ರಾಮಕೃಷ್ಣಯ್ಯ ಅವರಿಗೆ ಫ್ರಾನ್ಸ್‌ನ ಪ್ರತಿಷ್ಠಿತ ಫೆಡರೇಷನ್ ಇಂಟರ್‌ನ್ಯಾಷನಲ್ ಡಿ ಲಾ ಆರ್ಟ್ ಫೋಟೋಗ್ರಾಫಿಕ್ ಸಂಸ್ಥೆಯಿಂದ ಪ್ರಶಸ್ತಿ ಲಭಿಸಿದೆ.
ಚಿತ್ರಗಳ ಅನನ್ಯತೆ, ವಿಶಿಷ್ಟ ಶೈಲಿ ಮತ್ತು ಅತ್ಯುತ್ತಮ ತಂತ್ರಗಾರಿಕೆಯನ್ನು ಗುರುತಿಸಿ ನೀಡುವ ಪ್ರಶಸ್ತಿ ಇದಾಗಿದೆ.
ಕಳೆದ ಐದು ವರ್ಷಗಳಿಂದ ವನ್ಯಜೀವಿ ಛಾಯಗ್ರಹಣದ ಮೋಹದಲ್ಲಿ ಬಿದ್ದಿರುವ ಅವರು, ಮೊದಲ ಪ್ರೀತಿಯ ಸೆಳೆತದಂತೆ ವನ್ಯಜೀವಿಗಳನ್ನು ಬೆಂಬತ್ತಿದರು. ಇವರ ೩೦೦ಕ್ಕೂ ಹೆಚ್ಚು ಚಿತ್ರಗಳು ಸುಮಾರು ೨೫ ದೇಶಗಳಲ್ಲಿ ಪ್ರದರ್ಶನಗೊಂಡಿದ್ದು
ಇದುವರೆಗೆ ೧೫ ಚಿನ್ನ, ೨ ಬೆಳ್ಳಿ ಮತ್ತು ೧ ಕಂಚಿನ ಪದಕಗಳನ್ನು ಪಡೆದುಕೊಂಡಿದ್ದಾರೆ.
ನಿಸರ್ಗ ಹಾಗೂ ವನ್ಯಜೀವಿಗಳ ಅತೀ ವಿಶಿಷ್ಟ ವರ್ತನೆ ಮತ್ತು ರೋಮಾಂಚಕ ಕ್ಷಣಗಳನ್ನು ಬೆಳಕಿನ ಪರಿಣಾಮಕಾರಿ ಬಳಕೆ ಮತ್ತು ಸಂಯೋಜನೆಯೊಂದಿಗೆ ಸೆರೆಹಿಡಿದಿರುವುದು ಅವರ ಛಾಯಾಚಿತ್ರ ಕೌಶಲಕ್ಕೆ ಹಿಡಿದ ಕನ್ನಡಿಯಾಗಿದೆ. ಅಧ್ಯಯನ, ಬೋಧನೆ ಮತ್ತು ಸಂಶೋಧನೆ ಕಾರ್ಯಗಳಿಗೆ ವ್ಯತ್ಯಯ ಉಂಟಾಗದಂತೆ ತಮ್ಮ ಹವ್ಯಾಸವನ್ನು ಅವರು ರೂಢಿಸಿಕೊಂಡಿದ್ದಾರೆ.
ವನ್ಯಜೀವಿಗಳ ಛಾಯಾಗ್ರಹಣ ಅಸಾಧಾರಣ ತಾಳ್ಮೆ ಹಾಗೂ ತನ್ಮಯತೆಯಿಂದ ನಡೆಯುವ ಪ್ರಕ್ರಿಯೆಯಾಗಿದ್ದು, ಈ ಕಲೆಯು ಹಲವು ಸಾರಿ ಅಪಾಯಕಾರಿಯೂ ಹೌದು. ಈ ಎಲ್ಲಾ ಸವಾಲುಗಳನ್ನು ಸೃಜನಾತ್ಮಕವಾಗಿ ಸ್ವೀಕರಿಸಿರುವ ರಾಮಕೃಷ್ಣಯ್ಯ ಅದ್ಭುತ ಕಲಾಕೃತಿಗಳನ್ನು ಸೆರೆಹಿಡಿದಿದ್ದಾರೆ ಎಂದು ಒಕ್ಕೂಟವು ಮುಕ್ತಕಂಠದಿಂದ ಪ್ರಶಂಸಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.