ADVERTISEMENT

‘ನಗರದ ಬಡವರಿಗೆ ಲಕ್ಷ ಮನೆ’

ರಾಜೀವ್‌ಗಾಂಧಿ ವಸತಿನಿಗಮದಿಂದ ಮನೆ ನಿರ್ಮಾಣ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2017, 20:20 IST
Last Updated 26 ಅಕ್ಟೋಬರ್ 2017, 20:20 IST
‘ನಗರದ ಬಡವರಿಗೆ ಲಕ್ಷ ಮನೆ’
‘ನಗರದ ಬಡವರಿಗೆ ಲಕ್ಷ ಮನೆ’   

ಬೆಂಗಳೂರು: ನಗರದ ಬಡವರಿಗಾಗಿ ಒಂದು ಲಕ್ಷ ಮನೆಗಳನ್ನು ನಿರ್ಮಿಸಲಾಗುತ್ತಿದ್ದು, ನ.15ರಿಂದ ಆನ್‌ಲೈನ್ ಅರ್ಜಿ ಸಲ್ಲಿಕೆ ಪ್ರಾರಂಭವಾಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

‘ಮುಖ್ಯಮಂತ್ರಿಯವರ ಒಂದು ಲಕ್ಷ ವಸತಿ ಯೋಜನೆ’ ಅನುಷ್ಠಾನ ಕುರಿತು ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಸಿದ್ದರಾಮಯ್ಯ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು. 

ಸ್ವಂತ ಮನೆ ಇಲ್ಲದ ಬಡವರಿಗೆ ವಸತಿ ಭಾಗ್ಯ ಕಲ್ಪಿಸುವ ಉದ್ದೇಶದಿಂದ ಈ ಯೋಜನೆಯನ್ನು ಬಜೆಟ್‍ನಲ್ಲಿಯೇ ಘೋಷಣೆ ಮಾಡಲಾಗಿತ್ತು. ಇದಕ್ಕೆ ಸೆಪ್ಟೆಂಬರ್ 29ರಂದು ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ. ರಾಜೀವ್‌ಗಾಂಧಿ ವಸತಿ ನಿಗಮದಿಂದ ಮನೆಗಳನ್ನು ಕಟ್ಟಿಸಿಕೊಡಲಾಗುತ್ತಿದ್ದು, ಶೀಘ್ರದಲ್ಲಿಯೇ ಟೆಂಡರ್ ಕರೆಯಲಾಗುವುದು. 18ರಿಂದ 24 ತಿಂಗಳೊಳಗೆ ಮನೆಗಳ ನಿರ್ಮಾಣ ಗುರಿ ಹಾಕಿಕೊಳ್ಳಲಾಗಿದೆ ಎಂದು  ಅವರು ವಿವರಿಸಿದರು.

ADVERTISEMENT

ನೆಲಮಹಡಿ ಮತ್ತು ಮೂರು ಅಂತಸ್ತಿನ (ಜಿ+3) ಮನೆಗಳನ್ನು ನಿರ್ಮಾಣ ಮಾಡಿ ಫಲಾನುಭವಿಗಳಿಗೆ ಹಂಚಿಕೆ ಮಾಡಲಾಗುವುದು. ಅಗತ್ಯವಾದ ಭೂಮಿಯನ್ನು ರಾಜೀವ್‍ಗಾಂಧಿ ವಸತಿ ನಿಗಮಕ್ಕೆ ಹಸ್ತಾಂತರಿಸುವಂತೆ ಕಂದಾಯ ಇಲಾಖೆ ಅಧಿಕಾರಿಗಳಿಗೆ ಇಂದಿನ ಸಭೆಯಲ್ಲಿ ಸೂಚಿಸಲಾಗಿದೆ ಎಂದು ತಿಳಿಸಿದರು.

ಒಂದು ಲಕ್ಷ ಮನೆಗಳ ನಿರ್ಮಾಣಕ್ಕೆ 1,100 ಎಕರೆ ಜಮೀನಿನ ಅಗತ್ಯವಿದೆ. ಇದಕ್ಕಾಗಿ ವಿವಿಧೆಡೆಗಳಲ್ಲಿ ಜಾಗ ಗುರುತಿಸಲಾಗಿದೆ. ನಗರದಲ್ಲಿ ಈಗಾಗಲೇ ಒತ್ತುವರಿ ತೆರವು ಮಾಡಿ ಸಾವಿರಾರು ಎಕರೆ ಭೂಮಿಯನ್ನು ಸರ್ಕಾರ ತನ್ನ ವಶಕ್ಕೆ ಪಡೆದುಕೊಂಡಿದೆ. 430 ಎಕರೆ ಜಮೀನು ಈ ಉದ್ದೇಶಕ್ಕಾಗಿ ಗುರಿಸಲಾಗಿದೆ. ಉಳಿದ ಜಾಗವನ್ನು ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯಲ್ಲಿ ಪಡೆಯಲಾಗುವುದು ಎಂದು ಹೇಳಿದರು.

ಅರ್ಹತೆ

* ಐದು ವರ್ಷಗಳಿಂದ ಬೆಂಗಳೂರಿನಲ್ಲಿ ವಾಸವಾಗಿರಬೇಕು

* ಸ್ವಂತ ಮನೆ ಅಥವಾ ನಿವೇಶನ ಹೊಂದಿರಬಾರದು

* ಬಡತನ ರೇಖೆಗಿಂತ ಕೆಳಗಿನವರಾಗಿರಬೇಕು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.