ADVERTISEMENT

ನಗರದ ವಿವಿಧೆಡೆ ಚಿನ್ನದ ಸರ ಅಪಹರಣ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2011, 19:35 IST
Last Updated 23 ಸೆಪ್ಟೆಂಬರ್ 2011, 19:35 IST

ಬೆಂಗಳೂರು: ನಗರದಲ್ಲಿ ನಡೆದ ಪ್ರತ್ಯೇಕ ಪ್ರಕರಣಗಳಲ್ಲಿ ದುಷ್ಕರ್ಮಿಗಳು ಮಹಿಳೆಯರು ಮತ್ತು ವೃದ್ಧರ ನಾಲ್ಕು ಚಿನ್ನದ ಸರ ಕಿತ್ತುಕೊಂಡು ಪರಾರಿಯಾಗಿದ್ದಾರೆ.

ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ಮಹಿಳೆಯ ಚಿನ್ನದ ಸರ ಕಿತ್ತುಕೊಂಡು ಪರಾರಿಯಾದ ಘಟನೆ ಪುಲಿಕೇಶಿನಗರದ ಅಚೆನ್ಸ್ ರಸ್ತೆಯಲ್ಲಿ ಗುರುವಾರ ರಾತ್ರಿ ನಡೆದಿದೆ.

ಮಲ್ಲೇಶ್ವರ ನಿವಾಸಿ ವಾಣಿ ಸರ ಕಳೆದುಕೊಂಡವರು. ಅವರು ಕೆಲಸದ ನಿಮಿತ್ತ ಕಮರ್ಷಿಯಲ್‌ಸ್ಟ್ರೀಟ್‌ಗೆ ಬಂದಿದ್ದರು. ಅವರು ಅಚೆನ್ಸ್ ರಸ್ತೆಯಲ್ಲಿ ರಾತ್ರಿ ನಡೆದು ಹೋಗುತ್ತಿದ್ದಾಗ ಹಿಂದಿನಿಂದ ಬಂದ ಇಬ್ಬರು ದುಷ್ಕರ್ಮಿಗಳು ಎರಡು ಸರಗಳನ್ನು ಕಿತ್ತುಕೊಂಡು ಪರಾರಿಯಾಗಿದ್ದಾರೆ. ಸರಗಳ ಒಟ್ಟು ತೂಕ 42 ಗ್ರಾಂ ಎಂದು ಪೊಲೀಸರು ತಿಳಿಸಿದ್ದಾರೆ. ಪುಲಿಕೇಶಿನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾಜರಾಜೇಶ್ವರಿನಗರ: ಶಾಲೆಯಿಂದ ಮಗನನ್ನು ಮನೆಗೆ ಕರೆದುಕೊಂಡು ಹೋಗುತ್ತಿದ್ದ ಮಹಿಳೆಯ ಚಿನ್ನದ ಸರವನ್ನು ದುಷ್ಕರ್ಮಿಗಳು ಕಿತ್ತುಕೊಂಡು ಪರಾರಿಯಾದ ಘಟನೆ ರಾಜರಾಜೇಶ್ವರಿನಗರದ ಬಿಇಎಂಎಲ್ ಲೇಔಟ್‌ನಲ್ಲಿ ಶುಕ್ರವಾರ ನಡೆದಿದೆ.

ಚಂದ್ರಾಲೇಔಟ್: ಮನೆ ಮುಂದಿನ ಗಿಡದಲ್ಲಿ ಹೂ ಕೀಳುತ್ತಿದ್ದ ವೃದ್ಧರೊಬ್ಬರ ಚಿನ್ನದ ಸರವನ್ನು ದುಷ್ಕರ್ಮಿ ಕಿತ್ತುಕೊಂಡು ಪರಾರಿಯಾದ ಘಟನೆ ಚಂದ್ರಾಲೇಔಟ್‌ನ ಅತ್ತಿಗುಪ್ಪೆಯಲ್ಲಿ ಶುಕ್ರವಾರ ಬೆಳಿಗ್ಗೆ ನಡೆದಿದೆ.

ಜ್ಞಾನಭಾರತಿ: ಪಾರಿವಾಳ ಹಿಡಿಯುವ ನೆಪದಲ್ಲಿ ಕಿಡಿಗೇಡಿಗಳು ವೃದ್ಧೆಯ ಚಿನ್ನದ ಸರ ದೋಚಿದ ಘಟನೆ ನಾಗರಬಾವಿ ಒಂಬತ್ತನೇ ಹಂತದಲ್ಲಿ ಗುರುವಾರ ಮಧ್ಯಾಹ್ನ ನಡೆದಿದೆ.

ಚಿನ್ನಾಭರಣ ಕಳವು: ಕಿಟಕಿ ಮೂಲಕ ಕೈ ಹಾಕಿದ ದುಷ್ಕರ್ಮಿಗಳು 1.50 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಕಳವು ಮಾಡಿರುವ ಘಟನೆ ಹುಳಿಮಾವು ಸಮೀಪದ ಗೊಟ್ಟಿಗೆರೆಯಲ್ಲಿ ಗುರುವಾರ ರಾತ್ರಿ ನಡೆದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.