ADVERTISEMENT

ನರ ವಿಜ್ಞಾನ ಕೇಂದ್ರ ನಾಳೆ ಆರಂಭ

​ಪ್ರಜಾವಾಣಿ ವಾರ್ತೆ
Published 25 ಜೂನ್ 2012, 19:30 IST
Last Updated 25 ಜೂನ್ 2012, 19:30 IST

ಬೆಂಗಳೂರು: ವಿಶ್ವದಲ್ಲಿಯೇ ಎರಡನೇ ಅತಿ ದೊಡ್ಡದು ಎನ್ನಲಾದ ಎಂ.ಎಸ್. ರಾಮಯ್ಯ ನರ ವಿಜ್ಞಾನ ಮತ್ತು ಪುನರ್ವಸತಿ ಕೇಂದ್ರದ ಉದ್ಘಾಟನಾ ಸಮಾರಂಭ ಇದೇ 27ರಂದು ನಡೆಯಲಿದೆ.`ಸರ್ಕಾರಿ ಸ್ವಾಮ್ಯದ ನಿಮ್ಹಾನ್ಸ್ ಮಾದರಿಯಲ್ಲಿಯೇ ಖಾಸಗಿ ವಲಯದಲ್ಲಿ ಈ ಎಂ.ಎಸ್. ರಾಮಯ್ಯ ನರ ವಿಜ್ಞಾನ ಮತ್ತು ಪುನರ್ವಸತಿ ಕೇಂದ್ರವು ಕಾರ್ಯನಿರ್ವಹಿಸಲಿದೆ~ ಎಂದು ಸಂಸ್ಥೆಯ ಕಾರ್ಯನಿರ್ವಹಣಾಧಿಕಾರಿ ಡಿ.ವಿ. ಗುರುಪ್ರಸಾದ್ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

16 ಹಾಸಿಗೆ ಸಾಮರ್ಥ್ಯವುಳ್ಳ ಐಸಿಯು, 6 ಹಾಸಿಗೆ ಸಾಮರ್ಥ್ಯದ ಸ್ಟ್ರೋಕ್ ಘಟಕವನ್ನು ಆಸ್ಪತ್ರೆಯು ಹೊಂದಿದ್ದು, ನಾಲ್ಕು ಶಸ್ತ್ರ ಚಿಕಿತ್ಸಾ ಕೊಠಡಿಗಳು ಹಾಗೂ ಎಲೆಕ್ಟ್ರೋ ಫಿಜಿಯಾಲಜಿ ಪ್ರಯೋಗಾಲಯ ಕೂಡ ಇದೆ. ಹದಿನೈದು ಸಾವಿರ ಚದರ ಅಡಿ ವಿಸ್ತೀರ್ಣದಲ್ಲಿ ತಲೆಯೆತ್ತಿರುವ ನರ ವಿಜ್ಞಾನ ಆಸ್ಪತ್ರೆಯಲ್ಲಿ ಪುನವರ್ಸತಿ ಕೇಂದ್ರವನ್ನೂ ಆರಂಭಿಸಲಾಗಿದೆ. ನರ ರೋಗಕ್ಕೆ ಸಂಬಂಧಿಸಿದ ಎಲ್ಲ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲಾಗುವುದು ಎಂದರು.

ಎಂ.ಎಸ್. ರಾಮಯ್ಯ  ಆಸ್ಪತ್ರೆಯ ಸಭಾಂಗಣದಲ್ಲಿ 27ರಂದು ಬೆಳಿಗ್ಗೆ 10 ಗಂಟೆಗೆ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಕೇಂದ್ರವನ್ನು ಉದ್ಘಾಟಿಸಲಿದ್ದು, ನಿಮ್ಹಾನ್ಸ್‌ನ ಮಾಜಿ ನಿರ್ದೇಶಕ ಡಾ.ಆರ್. ಎಂ. ವರ್ಮಾ, ಗೋಕುಲ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಆರ್. ಜಯರಾಂ  ಭಾಗವಹಿಸಲಿದ್ದಾರೆ ಎಂದು ಅವರು ಮಾಹಿತಿ ನೀಡಿದರು.

ಎಂ.ಎಸ್. ರಾಮಯ್ಯ ನರ ವಿಜ್ಞಾನ ಸಂಸ್ಥೆಯ ನಿರ್ದೇಶಕ ಡಾ.ಎ.ಎಸ್. ಹೆಗಡೆ, ಪುನರ್ವಸತಿ ಕೇಂದ್ರದ ಮುಖ್ಯಸ್ಥೆ ಡಾ. ಸವಿತಾ ರವೀಂದ್ರ, ನರ ವಿಜ್ಞಾನ ವಿಭಾಗದ ಮುಖ್ಯಸ್ಥ ಡಾ.ಪಿ. ಟಿ. ಆಚಾರ್ಯ ಇದ್ದರು.
   ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.