ADVERTISEMENT

ನಾಟಕ ಪ್ರೇಕ್ಷಕರ ಸಂಖ್ಯೆ ದೊಡ್ಡದು: ನಾಗತಿಹಳ್ಳಿ

​ಪ್ರಜಾವಾಣಿ ವಾರ್ತೆ
Published 12 ಜುಲೈ 2012, 19:00 IST
Last Updated 12 ಜುಲೈ 2012, 19:00 IST
ನಾಟಕ ಪ್ರೇಕ್ಷಕರ ಸಂಖ್ಯೆ ದೊಡ್ಡದು: ನಾಗತಿಹಳ್ಳಿ
ನಾಟಕ ಪ್ರೇಕ್ಷಕರ ಸಂಖ್ಯೆ ದೊಡ್ಡದು: ನಾಗತಿಹಳ್ಳಿ   

ಬೆಂಗಳೂರು: `ಸಮಾಜದಲ್ಲಿ ನಾನಾ ಕಾರಣಗಳಿಂದ ಬಿರುಕು ಸೃಷ್ಟಿಯಾಗುತ್ತಿದ್ದು, ಮನುಷ್ಯರು ದ್ವೀಪಗಳಾಗುತ್ತಿದ್ದಾರೆ. ಈ ನಿಟ್ಟಿನಲ್ಲಿ ಯುವಜನರು ಸಾಂಘಿಕ ಹಾಗೂ ಸಂಘಟಿತ ನೆಲೆಯಲ್ಲಿ ಸಾಗಬೇಕಾಗಿದೆ~ ಎಂದು ಚಲನಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅಭಿಪ್ರಾಯಪಟ್ಟರು.

ಪಂಚಮುಖಿ ನಟರ ಸಮೂಹದ ಆಶ್ರಯದಲ್ಲಿ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಗುರುವಾರ ನಡೆದ ಆಮೋದ ರಂಗೋತ್ಸವದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

`ರಂಗಭೂಮಿಯ ಕಾರ್ಯಕ್ರಮಗಳಿಗೆ ಪ್ರೇಕ್ಷಕರ ಸಂಖ್ಯೆ ಕಡಿಮೆ ಇದ್ದರೆ ನಿರಾಶರಾಗುವ ಅಗತ್ಯ ಇಲ್ಲ. ಟಿ.ವಿ ಮತ್ತಿತರ ಮಾಧ್ಯಮಗಳ ದಾಳಿಯ ನಡುವೆಯೂ ನಾಟಕಗಳನ್ನು ವೀಕ್ಷಿಸುವವರ ಸಂಖ್ಯೆ ದೊಡ್ಡದಿದೆ. ಹೊಸ ಕಾಲದಲ್ಲಿ ಜನಪ್ರಿಯತೆ ಹಾಗೂ ರಂಜನೆಯ ಕಡೆಗೆ ಪ್ರೇಕ್ಷಕರು ಅಧಿಕ ಪ್ರಮಾಣದಲ್ಲಿ ವಾಲುತ್ತಾರೆ. ಆದರೆ ಕಡಿಮೆ ಸಂಖ್ಯೆ ಜನರು ಇರುವಲ್ಲಿ ಸೂಕ್ಷ್ಮ ಗ್ರಹಿಕೆ, ಆಪ್ತತೆ ಇರುತ್ತದೆ~ ಎಂದರು. 

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿವೃತ್ತ ಜಂಟಿ ಆಯುಕ್ತ ಕಾ.ತ. ಚಿಕ್ಕಣ್ಣ, `ಸಾಂಸ್ಕೃತಿಕ ಮನಸ್ಸಿನಲ್ಲಿ ಲಜ್ಜೆ ಹಾಗೂ ಕುತೂಹಲ ಇರುತ್ತದೆ. ಇಂತಹ ಯುವ ಮನಸ್ಸುಗಳು ಸಮಾಜದ ಶಕ್ತಿ. ಆ ಮನಸ್ಸುಗಳನ್ನು ಉತ್ತೇಜಿಸಬೇಕಿದೆ. ಪಂಚಮುಖಿ ನಟರ ಸಮೂಹ ಸಾಂಸ್ಕೃತಿಕ ತುಡಿತ ಹೊಂದಿರುವವರ ತಂಡ~ ಎಂದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಯುಕ್ತ ಕೆ.ಆರ್. ರಾಮಕೃಷ್ಣ, ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಾದೇಶಿಕ ಕಾರ್ಯದರ್ಶಿ ಎನ್.ಸಿ.ಮಹೇಶ್ ಉಪಸ್ಥಿತರಿದ್ದರು. ಪ್ರಸಾಧನ ಕಲಾವಿದ ರಾಮಕೃಷ್ಣ ಕನ್ನರಪಾಡಿ, ಸಂಗೀತ ನಿರ್ದೇಶಕ ಇಸ್ಮಾಯಿಲ್ ಗೋನಾಳ್ ಅವರನ್ನು ಸನ್ಮಾನಿಸಲಾಯಿತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.