ADVERTISEMENT

ನಾರಾಯಣಪುರ ಮೆಟ್ರೊ ನಿಲ್ದಾಣ ರದ್ದು

​ಪ್ರಜಾವಾಣಿ ವಾರ್ತೆ
Published 8 ಜೂನ್ 2013, 20:31 IST
Last Updated 8 ಜೂನ್ 2013, 20:31 IST
ಪ್ರ.ವಾ.ಗ್ರಾಫಿಕ್ಸ್- ಹಳೇಮನಿ
ಪ್ರ.ವಾ.ಗ್ರಾಫಿಕ್ಸ್- ಹಳೇಮನಿ   

ಬೆಂಗಳೂರು: `ನಮ್ಮ ಮೆಟ್ರೊ'ದ ಎರಡನೇ ಹಂತದಲ್ಲಿ ನಿರ್ಮಿಸಲು ಉದ್ದೇಶಿಸಿದ್ದ ನಾರಾಯಣಪುರ ನಿಲ್ದಾಣ ರದ್ದಾಗಿದೆ. ದೊಡ್ಡನೆಕ್ಕುಂದಿ ಕೈಗಾರಿಕಾ ಪ್ರದೇಶದ ನಿಲ್ದಾಣ ಹೊಸದಾಗಿ ಸೇರ್ಪಡೆಯಾಗಿದೆ. ಅದಕ್ಕಾಗಿ ಮೆಟ್ರೊ ಪಥ ಒಂದು ಕಿ.ಮೀ. ವಿಸ್ತರಣೆಯಾಗಿದೆ.

ಮಾಜಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಅರವಿಂದ ಲಿಂಬಾವಳಿ ಅವರ ಮನವಿಗೆ ಮನ್ನಣೆ ನೀಡಿದ `ಬೆಂಗಳೂರು ಮೆಟ್ರೊ ರೈಲು ನಿಗಮ'ವು ಪೂರ್ವ-ಪಶ್ಚಿಮ ಕಾರಿಡಾರ್‌ನಲ್ಲಿ ಮೇಲಿನ ಬದಲಾವಣೆಯನ್ನು ಮಾಡಿದೆ.

ಲಿಂಬಾವಳಿ ಅವರಿಗೂ ಮೊದಲೇ ಬೈಯಪ್ಪನಹಳ್ಳಿ- ವೈಟ್‌ಫೀಲ್ಡ್‌ವರೆಗಿನ ವಿಸ್ತರಣಾ ಮಾರ್ಗದ (15.5 ಕಿ.ಮೀ, 14 ನಿಲ್ದಾಣಗಳು) ಪಥ ಬದಲಾವಣೆ ಮಾಡುವಂತೆ ಸ್ಥಳೀಯ ನಿವಾಸಿಗಳು ಸಲ್ಲಿಸಿದ ಬೇಡಿಕೆಗೆ ನಿಗಮವು ಕಿವಿಗೊಟ್ಟಿಲ್ಲ ಎಂಬ ಆರೋಪ ಕೇಳಿಬಂದಿದೆ. ಈ ಬೇಡಿಕೆಗೆ ಸ್ಪಂದಿಸಿದ್ದರೆ ಅಂತರವೂ ಕಡಿಮೆಯಾಗುತ್ತಿತ್ತು ಎಂಬ ಅಭಿಪ್ರಾಯ ಕೇಳಿಬಂದಿದೆ.

ಕಳೆದ ಅಕ್ಟೋಬರ್ 4ರಂದು ಮಹದೇವಪುರ ಹಾಗೂ ಹೂಡಿ ಗ್ರಾಮದ ನಿವಾಸಿಗಳು ಮಹದೇವಪುರ ಮುಖ್ಯ ರಸ್ತೆಯ ಬಳಿ ನೇರ ಪಥ ನಿರ್ಮಾಣ ಮಾಡಿ ಗರುಡಾಚಾರ್‌ಪಾಳ್ಯ, ಹೂಡಿ ವೃತ್ತದ ಮೂಲಕ ವೈಟ್‌ಫೀಲ್ಡ್‌ಗೆ ಮೆಟ್ರೊ ತೆರಳಲು ಅನುವು ಮಾಡುವಂತೆ ಮನವಿ ಸಲ್ಲಿಸಿದ್ದರು.

ಹೂಡಿ ವರೆಗೆ ಮೆಟ್ರೊ ವಿಸ್ತರಿಸುವಂತೆ ಲಿಂಬಾವಳಿ ಒತ್ತಾಯ ಮಾಡಿದ್ದರು. ರಾಜ್ಯ ಸರ್ಕಾರದ ಉನ್ನತ ಅಧಿಕಾರ ಸಮಿತಿ ಜನವರಿ 9ರಂದು ಲಿಂಬಾವಳಿ ಮನವಿಗೆ ಸ್ಪಂದಿಸಿ ಪಥ ಬದಲಾವಣೆಗೆ ಒಪ್ಪಿಗೆ ಸೂಚಿಸಿತ್ತು. 

ಹೂಡಿ ವೃತ್ತದ ವರೆಗೆ ಪಥ ವಿಸ್ತಾರಗೊಂಡು ಬಳಿಕ ಯೂ ಟರ್ನ್ ಪಡೆದುಕೊಂಡು ಹೂಡಿ ಮುಖ್ಯ ರಸ್ತೆ ಮೂಲಕ ವಿಶ್ವೇಶ್ವರಯ್ಯ ಕೈಗಾರಿಕಾ ಪ್ರದೇಶಕ್ಕೂ ಮುನ್ನ ಮೂಲ ಪಥಕ್ಕೆ ಜೋಡಣೆಯಾಗುವಂತೆ ಬದಲಾವಣೆ ಮಾಡಲಾಗಿದೆ. ಇದರಿಂದಾಗಿ ಬೈಯಪ್ಪನಹಳ್ಳಿ- ವೈಟ್‌ಫೀಲ್ಡ್ ನಡುವಿನ ಪಥವು 1.039 ಕಿ.ಮೀ. ಹಿಗ್ಗಲಿದೆ. ಒಂದು ಕಿ.ಮೀ.ಗೆ ಆಗುವ ಸರಾಸರಿ ವೆಚ್ಚ 175 ಕೋಟಿ ರೂಪಾಯಿ.

ಕೆ.ಆರ್.ಪುರ ಹಾಗೂ ಮಹದೇವಪುರ ನಿಲ್ದಾಣದ ನಡುವೆ ನಾರಾಯಣಪುರ ನಿಲ್ದಾಣ ಸ್ಥಾಪನೆ ಮಾಡುವುದರಿಂದ ಹೆಚ್ಚು ಕಟ್ಟಡಗಳು ನೆಲಸಮ ಆಗಲಿವೆ ಹಾಗೂ ಅಧಿಕ ಪ್ರಮಾಣದ ಭೂ ಒತ್ತುವರಿ ಆಗಲಿದೆ ಎಂದು ಲಿಂಬಾವಳಿ ಪ್ರತಿಪಾದಿಸಿದ್ದರು.

`ನಾವು ಮೆಟ್ರೊ ಮಾರ್ಗವನ್ನು ಕಡಿಮೆ ಮಾಡಿ ಎಂದು ಮನವಿ ಸಲ್ಲಿಸಿದ್ದೆವು. ಆದರೆ, ಈಗ ಮಾರ್ಗ ವಿಸ್ತರಣೆಯಾಗಿದೆ. ಅದರಲ್ಲೂ ಮೆಟ್ರೊ ಜಾಗದಲ್ಲಿ ಯೂ ಶೇಪ್ ಪಥ ಹೊಸ ವಿಚಾರ' ಎಂದು ಸ್ಥಳೀಯ ನಿವಾಸಿಗಳು ಆಘಾತ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.