ಬೆಂಗಳೂರು: ಸಮಾಜ ಎದುರಿಸುತ್ತಿರುವ ತೀವ್ರತರ ಸಮಸ್ಯೆಗಳಿಗೆ ವೈಜ್ಞಾನಿಕ ಪರಿಹಾರಗಳನ್ನು ಕಂಡುಕೊಳ್ಳುವ ಯೋಜನೆಗಳತ್ತ ಗಮನಹರಿಸಬೇಕಾದ ಅನಿವಾರ್ಯತೆಯಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ.ಜಯಚಂದ್ರ ಹೇಳಿದರು.
ಯಲಹಂಕದ ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಗುರುವಾರ ಆಯೋಜಿಸಿದ್ದ ಆರನೇ ಘಟಿಕೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ಇಂದಿನ ಹವಾಮಾನ ವೈಪರೀತ್ಯದಂತಹ ಸಂಕಷ್ಟದ ಪರಿಸ್ಥಿತಿಯಲ್ಲಿ ಇಂಧನದ ಅತ್ಯಲ್ಪ ಬಳಕೆ ಹಾಗೂ ಇಂಗಾಲದ ಹೊರಹೊಮ್ಮುವಿಕೆಯ ಸಮರ್ಪಕ ನಿಯಂತ್ರಣ ಮಾಡಬೇಕಾದುದು ಅತ್ಯಗತ್ಯ ಎಂದರು.
ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ಪರಿಶೀಲನಾ ಆಯೋಗದ ಅಧ್ಯಕ್ಷ ಪ್ರೊ.ಎನ್.ಆರ್.ಶೆಟ್ಟಿ ಮಾತನಾಡಿ, ನೂತನವಾಗಿ ಪದವಿಗಳಿಸಿದ ವಿದ್ಯಾರ್ಥಿಗಳು, ಭಾರತೀಯ ಸಂಸ್ಕೃತಿಯ ಉನ್ನತ ಮೌಲ್ಯಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿಗಳಾದ ಸಜ್ಜನ್‌ರಾಜ್ ಕೇಸರಿ ಮತ್ತು ಎಸ್.ಅಭಿಷೇಕ್ ಅವರಿಗೆ ಕ್ರಮವಾಗಿ ನಿಟ್ಟೆ ಗುಲಾಬಿ ಸ್ಮಾರಕ ಚಿನ್ನದ ಪದಕ ಹಾಗೂ ನ್ಯಾಯಮೂರ್ತಿ ಕೆ.ಎಸ್.ಹೆಗ್ಡೆ ಸ್ಮಾರಕ ಚಿನ್ನದ ಪದಕ ಮತ್ತು ಕಂಪ್ಯೂಟರ್ ಸೈನ್ಸ್ ಎಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿನಿ ಸ್ನೇಹ ಚೌದರಿ ಅವರಿಗೆ ನಿಟ್ಟೆ ಮೀನಾಕ್ಷಿ ಸ್ಮಾರಕ ಚಿನ್ನದ ಪದಕ ವಿತರಿಸಲಾಯಿತು. ಅಲ್ಲದೆ ವಿವಿಧ ಎಂಜಿನಿಯರಿಂಗ್ ವಿಭಾಗಗಳಲ್ಲಿ ಪದವಿ ಪೂರ್ಣ ಗೊಳಿಸಿದ 900 ವಿದ್ಯಾರ್ಥಿಗಳಿಗೆ ಪದವಿಪ್ರದಾನ ಮಾಡಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.