ADVERTISEMENT

`ನೀರು ಕೊಡಲಾಗದಿದ್ದರೆ ಅಭಿವೃದ್ಧಿಯೇಕೆ?'

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2013, 19:36 IST
Last Updated 3 ಸೆಪ್ಟೆಂಬರ್ 2013, 19:36 IST

ಬೆಂಗಳೂರು: `ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ವ್ಯಾಪ್ತಿಗೆ ಹೊಸದಾಗಿ ಸೇರ್ಪಡೆಯಾದ ಪ್ರದೇಶಗಳಿಗೆ ಶುದ್ಧ ಕುಡಿಯುವ ನೀರು ಪೂರೈಸಲು ಆಗುವುದಿಲ್ಲ ಎಂದಾದರೆ, ಆ ಪ್ರದೇಶಗಳಲ್ಲಿ ಅಭಿವೃದ್ಧಿ ಚಟುವಟಿಕೆಗಳಿಗೆ ಅವಕಾಶ ನೀಡಿದ್ದೇಕೆ' ಎಂದು ಪಾಲಿಕೆಯನ್ನು ಹೈಕೋರ್ಟ್ ಮೌಖಿಕವಾಗಿ ಪ್ರಶ್ನಿಸಿದೆ.

ನಗರದಲ್ಲಿ ಶುದ್ಧ ಕುಡಿಯುವ ನೀರು ಸಮರ್ಪಕವಾಗಿ ದೊರೆಯುತ್ತಿಲ್ಲ ಎಂಬ ವರದಿ ಕುರಿತು ಸ್ವಯಂಪ್ರೇರಿತವಾಗಿ ದಾಖಲು ಮಾಡಿಕೊಂಡಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಡಿ.ಎಚ್. ವಘೇಲಾ ಮತ್ತು ನ್ಯಾಯಮೂರ್ತಿ ಬಿ.ವಿ. ನಾಗರತ್ನ ಅವರನ್ನು ಒಳಗೊಂಡ ವಿಭಾಗೀಯ ಪೀಠ, `ಕುಡಿಯುವ ನೀರು ಪೂರೈಕೆಗೆ ಸಂಬಂಧಿಸಿದಂತೆ ನಗರಾಭಿವೃದ್ಧಿ ಇಲಾಖೆ, ಬಿಬಿಎಂಪಿ ಮತ್ತು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ (ಬಿಡಬ್ಲ್ಯೂಎಸ್‌ಎಸ್‌ಬಿ) ಪ್ರತಿನಿಧಿಗಳ ಸಭೆ ಕರೆದು ಶುದ್ಧ ಕುಡಿಯುವ ನೀರು ಪೂರೈಸುವ ಬಗ್ಗೆ ವರದಿ ಸಿದ್ಧಪಡಿಸಬೇಕು' ಎಂದು ಮಂಗಳವಾರ ನಿರ್ದೇಶನ ನೀಡಿದೆ.

ಈ ಪ್ರಕರಣದಲ್ಲಿ ಅಮೈಕಸ್ ಕ್ಯೂರಿ (ನ್ಯಾಯಾಲಯದ ಸಹಾಯಕ) ಆಗಿರುವ ವಕೀಲ ಸಿ.ಕೆ. ನಂದಕುಮಾರ್ ಅವರನ್ನೂ ಸಭೆಗೆ ಕರೆದು, ಅವರಿಂದ ಸಲಹೆ ಪಡೆದುಕೊಳ್ಳಿ ಎಂದು ಅಧಿಕಾರಿಗಳಿಗೆ ಪೀಠ ನಿರ್ದೇಶನ ನೀಡಿದೆ. `ಹೊಸ ಪ್ರದೇಶದಲ್ಲಿ ಬಡಾವಣೆ ನಿರ್ಮಾಣದಂಥ ಅಭಿವೃದ್ಧಿ ಕಾರ್ಯಗಳಿಗೆ ಅನುಮತಿ ನೀಡುವಾಗ, ಅಲ್ಲಿಗೆ ಮೂಲಸೌಕರ್ಯ ಒದಗಿಸುವುದನ್ನೂ ಅಧಿಕಾರಿಗಳು ಗಮನಿಸಬೇಕು' ಎಂದು ಪೀಠ ಮೌಖಿಕವಾಗಿ ಹೇಳಿತು.

ಪಾಲಿಕೆ ವ್ಯಾಪ್ತಿಗೆ ಹೊಸದಾಗಿ ಸೇರಿದ 110 ಹಳ್ಳಿಗಳ 169 ಕೊಳವೆ ಬಾವಿಗಳ ನೀರು ಕಲುಷಿತಗೊಂಡಿರುವುದು ಪರೀಕ್ಷೆಯಿಂದ ದೃಢಪಟ್ಟಿದೆ. ಇನ್ನೂ 538 ಕೊಳವೆ ಬಾವಿಗಳ ನೀರನ್ನು ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಪಾಲಿಕೆ ಪರ ವಕೀಲರು ಪೀಠಕ್ಕೆ ತಿಳಿಸಿದರು. ರಾಜಧಾನಿಯಲ್ಲೇ ಇಂಥ ಪರಿಸ್ಥಿತಿ ಇರುವುದಾದರೆ, ಹಳ್ಳಿಗಾಡಿನಲ್ಲಿ ಪರಿಸ್ಥಿತಿ ಹೇಗಿರಬಹುದು ಎಂದು ಅಚ್ಚರಿ ವ್ಯಕ್ತಪಡಿಸಿದ ಪೀಠ, ವಿಚಾರಣೆ ಮುಂದೂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.