ADVERTISEMENT

ನೃತ್ಯ, ನಾಟಕ, ಸಂಗೀತ ವಿಶೇಷ ಕಲೆಗಳು

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2012, 19:30 IST
Last Updated 20 ಫೆಬ್ರುವರಿ 2012, 19:30 IST

ಬೆಂಗಳೂರು: `ಮನುಷ್ಯನಿಗೆ ಆನಂದ ನೀಡುವಂತಹ ನೃತ್ಯ, ನಾಟಕ, ಸಂಗೀತ ಇವೆಲ್ಲ ವಿಶೇಷ ಕಲೆಗಳು~ ಎಂದು ಮಾಜಿ ಸಚಿವೆ ಲೀಲಾದೇವಿ ಆರ್.ಪ್ರಸಾದ್ ಹೇಳಿದರು.

ಕರ್ನಾಟಕ ಸಂಶೋಧಕರ ಒಕ್ಕೂಟ ಹಾಗೂ ನೂಪುರ ಭ್ರಮರಿ ಸಂಶೋಧನಾ ಪ್ರತಿಷ್ಠಾನ ಕನ್ನಡ ಭವನದ ನಯನ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಿದ್ದ `ನೃತ್ಯ ಸಂಶೋಧನೆಯ ಪ್ರಕ್ರಿಯೆ ಮತ್ತು ಸವಾಲುಗಳು~ ಕುರಿತು ಏರ್ಪಡಿಸಿದ್ದ ರಾಜ್ಯಮಟ್ಟದ ಕಮ್ಮಟವನ್ನು ಉದ್ಘಾಟಿಸಿ ಅವರು ಮಾತನಾಡಿದರು.

`ಉಗ್ರ ತಪಸ್ವಿ ವಿಶ್ವಾಮಿತ್ರನ ತಪಸ್ಸನ್ನೇ ಭಂಗಗೊಳಿಸಿದ ಮೇನಕೆಯ ನೃತ್ಯ ನಿಜಕ್ಕೂ ಅದ್ಭುತವಾಗಿದ್ದು. ನೃತ್ಯ ಅಂತಹ ಶಕ್ತಿಯನ್ನು ಹೊಂದಿದೆ. ಸಂಗೀತ ಮತ್ತು ನೃತ್ಯದ ತಾಳ, ಮೇಳಗಳಿಗೂ ಅನನ್ಯವಾದ ಸಂಬಂಧವಿದೆ. ನೃತ್ಯದಿಂದ ಆರೋಗ್ಯಕ್ಕೂ ಒಳ್ಳೆಯದು. ಇದು ವೈಜ್ಞಾನಿಕವಾಗಿ ಸಾಬೀತಾಗಿದೆ~ ಎಂದರು.

`ಸಂಶೋಧನೆ ಎನ್ನುವುದು ಒಂದು ಕಠಿಣವಾದ ಅಧ್ಯಯನವಾಗಿದೆ.  ಕಲೆಯನ್ನು ಅರ್ಥ ಮಾಡಿಕೊಂಡು ಅದಕ್ಕಾಗಿ ಬದುಕನ್ನೇ ಮುಡುಪಾಗಿಟ್ಟವರು ತುಂಬ ಕಡಿಮೆ. ನೃತ್ಯದಲ್ಲಿ ನೃತ್ಯವನ್ನು ಪ್ರದರ್ಶಿಸುವ ನರ್ತಕಿ ತನ್ನ ಭಾವಾಭಿನಯದಿಂದ ಸಹೃದಯರನ್ನು ಸೆಳೆಯಬೇಕು. ಅವರು ಆ ನೃತ್ಯವನ್ನು ಆಸ್ವಾದಿಸುವಂತೆ ಮಾಡಬೇಕು.

ಇಲ್ಲವಾದರೆ, ರಸಭಂಗವಾಗುತ್ತದೆ~ ಎಂದು ಸಾಂಸ್ಕೃತಿಕ ಇತಿಹಾಸ ತಜ್ಞ ಡಾ.ಆರ್.ಶೇಷಶಾಸ್ತ್ರಿ ಹೇಳಿದರು.
`ಸಂಶೋಧನೆಯನ್ನು ಹಲವಾರು ಶಿಸ್ತುಗಳಲ್ಲಿ ಮತ್ತು ಕ್ರಮಗಳಲ್ಲಿ ತೌಲನಿಕವಾಗಿ ಅಧ್ಯಯನ ನಡೆಸಬೇಕು.
 
ಯಾವುದೇ ಕಲೆಯನ್ನು ಹೃದಯಾಂತರಾಳದಿಂದ ಅನುಭವಿಸಿದಾಗಲೇ ಬದುಕು ಸಾರ್ಥಕವಾಗುತ್ತದೆ~ ಎಂದರು.
ನೃತ್ಯ ಇತಿಹಾಸ ಸಂಶೋಧಕಿ ಡಾ.ಕರುಣಾ ವಿಜಯೇಂದ್ರ ಅವರು `ಮಹಾನಟ-ವಿವೇಚನೆ~ ಕುರಿತು ತಮ್ಮ ಸಂಶೋಧನಾ ಕೃತಿಯನ್ನು ಮಂಡಿಸಿದರು.

`ವೇದಗಳ ಕಾಲದಲ್ಲಿ ಶಿವನನ್ನು  ರುದ್ರದೇವನನ್ನಾಗಿ ಅಗ್ನಿಯ ಪ್ರತೀಕವಾಗಿ ಬಿಂಬಿಸಲಾಗಿದೆ. ಆದರೆ, ಬಾದಾಮಿ ಚಾಲುಕ್ಯರ ಕಾಲಘಟ್ಟದಲ್ಲಿ ಶಿವನನ್ನು ಶಾಂತ ಸ್ವರೂಪಿಯನ್ನಾಗಿ ಚಿತ್ರಿಸಲಾಗಿದೆ.

ಶಿವನ ತಾಂಡವ ನೃತ್ಯ ಅಂದ ಕೂಡಲೇ ಈಗಿನ ಚಿತ್ರಣದಂತೆ ಡಂ,ಡಂ ಎಂದು ರುದ್ರಮೂರ್ತಿಯಾಗಿ ನೃತ್ಯ ಮಾಡುವನಲ್ಲ. ಶಿವನು ಶಾಂತ ಸ್ವರೂಪಿಯಾದ, ಶ್ವೇತ ವಸ್ತ್ರಧಾರಿಯಾದ ಸುಂದರ ವದನ ಹೊಂದಿರುವ ಸ್ಪುರದ್ರೂಪಿಯಾಗಿದ್ದಾನೆ~ ಎಂದು ವಿವರಣೆ ನೀಡಿದರು.

`ಬಾದಾಮಿ, ಐಹೊಳೆ, ಪಟ್ಟದಕಲ್ಲುಗಳಲ್ಲಿ ದೊರೆಯುವ ಶಿವನ ನಾಟ್ಯಮಯವಾದ ನೃತ್ಯದ ಭಂಗಿಗಳು ಶಿಲ್ಪಿಯ ಜಾಣ್ಮೆಯನ್ನು ಪ್ರದರ್ಶಿಸುತ್ತವೆ. ಇಲ್ಲಿ ಶಿಲ್ಪಿ ಶಿಲ್ಪ ಶಾಸ್ತ್ರ ಮತ್ತು ನಾಟ್ಯಶಾಸ್ತ್ರವನ್ನು ಮಿಳಿತಗೊಳಿಸಿ ಶಿಲ್ಪಗಳಿಗೆ ಹೊಸ ಜೀವ ತುಂಬುವ ಕಾರ್ಯವನ್ನು ಮಾಡಿದ್ದಾರೆ~ ಎಂದರು.

`ನಾವು ಈಗ ಕರೆಯುವ ಹಾಗೆ ನಟರಾಜ ಎಂಬ ಪದ ಆಗ ಎಲ್ಲೆಲ್ಲೂ ಬಳಕೆಯಲ್ಲಿರಲಿಲ್ಲ. ಆದ್ದರಿಂದ ಅಮರಕೋಶ ಕೃತಿಯಲ್ಲಿದ್ದ ಮಹಾನಟ ಎಂಬ ಪದವನ್ನೇ ನನ್ನ ಕೃತಿಯ ಹೆಸರನ್ನಾಗಿ ಆಯ್ಕೆ ಮಾಡಿಕೊಂಡೆ~ ಎಂದರು.

ನೃತ್ಯ ಸಂಶೋಧಕಿ ಡಾ.ಶೋಭಾ ಶಶಿಕುಮಾರ್ ಅವರ ಸಂಶೋಧನಾ ಕೃತಿಯಾದ `ಭರತನಾಟ್ಯ ಶಾಸ್ತ್ರ ಮತ್ತು ಪ್ರಯೋಗಗಳ ಸಂಗಮ~ ಕುರಿತು ಮಾತನಾಡಿದರು.


`ನೃತ್ಯ ಯಾವುದೇ ಒಂದು ಪದ್ಧತಿಗೆ ಸೀಮಿತವಾಗಿರಬಾರದು. ಅದು ಹರಿಯುವ ನದಿಯಂತೆ ಸಂಪೂರ್ಣತೆಯನ್ನು ಬೆಳಸಿಕೊಂಡು ಮುನ್ನಡೆಯಬೇಕು. ನೃತ್ಯ ಮತ್ತು ಅಭಿನಯವನ್ನು ಬೇರೆ ಬೇರೆ ಎಂದು ಪರಿಗಣಿಸಿ ಅವುಗಳನ್ನು  ನಿರ್ಬಂಧಗೊಳಿಸಲಾಗಿದೆ. ನೃತ್ಯವನ್ನು ಸ್ವತಂತ್ರವಾಗಿಸಬೇಕು.
 
ಆಗಲೇ ಅದು ಸಂಪೂರ್ಣವಾಗಿ ಬೆಳೆಯಲು ಸಾಧ್ಯ. ನೃತ್ಯದಲ್ಲಿ ಅಭಿನಯ ಮತ್ತು ಅಭಿನಯದಲ್ಲಿ ನೃತ್ಯವಿದ್ದರೆ ಸಹೃದಯರು ಆಸ್ವಾದಿಸಬಹುದು. ಭರತನಾಟ್ಯ ಶಾಸ್ತ್ರದಲ್ಲಿ ಹೊಸ ಪ್ರಯೋಗಗಳ ಸಂಗಮವನ್ನು ಕಾಣಬಹುದು~ ಎಂದರು.

ಸಂಶೋಧಕಿ ಬಿ.ಎನ್.ಮನೋರಮಾ ಅವರು, `ಕನ್ನಡ ಕಾದಂಬರಿ ಸಾಹಿತ್ಯದಲ್ಲಿ ನೃತ್ಯದ ಅಭಿವ್ಯಕ್ತಿ~ ಕುರಿತು ಸಂಶೋಧನ ಕೃತಿಯನ್ನು ಮಂಡಿಸಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ವಿದ್ವಾಂಸ ಡಾ.ಶತಾವಧಾನಿ ಆರ್.ಗಣೇಶ್, ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT