ADVERTISEMENT

ನೈಸ್: ಇನ್ನು ಭೂಸ್ವಾಧೀನ ಸುಲಭ

​ಪ್ರಜಾವಾಣಿ ವಾರ್ತೆ
Published 15 ಜೂನ್ 2011, 19:30 IST
Last Updated 15 ಜೂನ್ 2011, 19:30 IST

ಬೆಂಗಳೂರು: ಬೆಂಗಳೂರು- ಮೈಸೂರು ಇನ್‌ಫ್ರಾಸ್ಟ್ರಕ್ಚರ್ ಕಾರಿಡಾರ್ ರಸ್ತೆ ವಿವಾದಕ್ಕೆ ಸಂಬಂಧಿಸಿದಂತೆ `ನೈಸ್~  ಕಂಪೆನಿ ವಿರುದ್ಧ ಭೂಮಾಲೀಕರು ಸಲ್ಲಿಸಿರುವ ಅರ್ಜಿಗಳ ಪೈಕಿ ಭೂಸ್ವಾಧೀನ ಪ್ರಕ್ರಿಯೆಯನ್ನು ಹೈಕೋರ್ಟ್ ಬುಧವಾರ ಎತ್ತಿಹಿಡಿದಿದೆ.

ಹೆಚ್ಚುವರಿ ಪರಿಹಾರಕ್ಕೆ ಕೋರಿದ್ದ ಹಾಗೂ ಪರ್ಯಾಯ ಜಮೀನು ನೀಡುವಂತೆ ಹಲವು ಭೂಮಾಲೀಕರು ಮಾಡಿಕೊಂಡಿರುವ ಅರ್ಜಿಗಳನ್ನು ಇತ್ಯರ್ಥಗೊಳಿಸಿರುವ ನ್ಯಾಯಮೂರ್ತಿಗಳಾದ ಮಂಜುಳಾ ಚೆಲ್ಲೂರು ಹಾಗೂ ಎಚ್. ಬಿಲ್ಲಪ್ಪ ಅವರನ್ನು ಒಳಗೊಂಡ ವಿಭಾಗೀಯ ಪೀಠ, ಈ ಸಂಬಂಧ ಸೂಕ್ತ ಅಧಿಕಾರಿಗಳ ಮುಂದೆ ಮನವಿ ಸಲ್ಲಿಸುವಂತೆ ಆದೇಶಿಸಿದೆ.

ನೈಸ್ ಯೋಜನೆಗೆ ಸುಪ್ರೀಂಕೋರ್ಟ್ ಈಗಾಗಲೇ ಹಸಿರು ನಿಶಾನೆ ತೋರಿರುವ ಹಿನ್ನೆಲೆಯಲ್ಲಿ ಭೂಸ್ವಾಧೀನವೂ ಇನ್ನು ಸುಗಮಗೊಳ್ಳಲಿದೆ. ಸುಪ್ರೀಂಕೋರ್ಟ್ ಭೂಸ್ವಾಧೀನವನ್ನು ಎತ್ತಿ ಹಿಡಿದಿದ್ದರೂ, ಇದೇ ಜಮೀನಿಗೆ ಸಂಬಂಧಿಸಿದಂತೆ ಈ ಎಲ್ಲ ಅರ್ಜಿದಾರರು 3-4 ಬಾರಿ ಸಲ್ಲಿಸಿರುವ ಅರ್ಜಿ ಇದಾಗಿತ್ತು. 

ಭೂಸ್ವಾಧೀನಕ್ಕೆ ಸಂಬಂಧಿಸಿದಂತೆ ಹೈಕೋರ್ಟ್‌ನಲ್ಲಿ ಹಲವು ಪ್ರಕರಣಗಳು ಇತ್ಯರ್ಥಕ್ಕೆ ಬಾಕಿ ಇದ್ದ ಹಿನ್ನೆಲೆಯಲ್ಲಿ ರಸ್ತೆ ನಿರ್ಮಾಣಕ್ಕೆ ತೊಂದರೆ ಉಂಟಾಗುತ್ತಿರುವುದಾಗಿ ಸರ್ಕಾರ ಸುಪ್ರೀಂಕೋರ್ಟ್‌ನಲ್ಲಿ ವಿಶೇಷ ಮೇಲ್ಮನವಿ ಸಲ್ಲಿಸಿತ್ತು.

ಈ ಕಾರಣ, ಎಲ್ಲ ಪ್ರಕರಣಗಳ ವಿಚಾರಣೆಯನ್ನು ನಾಲ್ಕು ತಿಂಗಳ ಒಳಗೆ ಇತ್ಯರ್ಥಗೊಳಿಸುವಂತೆ ಸುಪ್ರೀಂ ಕೋರ್ಟ್ ನೀಡಿದ್ದ ನಿರ್ದೇಶನದ ಮೇರೆಗೆ ಹೈಕೋರ್ಟ್ ವಿಶೇಷ ಪೀಠ ರಚಿಸಿತ್ತು.

ಸರ್ಕಾರಕ್ಕೆ ನೋಟಿಸ್
ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಬಸ್ಸುಗಳಿಗೆ ಹಾಗೂ ಆಟೊಗಳಿಗೆ ಪರವಾನಗಿ ಮತ್ತು `ಫಿಟ್‌ನೆಸ್ ಸರ್ಟಿಫಿಕೇಟ್~ ನೀಡುವ ಸಂಬಂಧ ಪ್ರಾದೇಶಿಕ ಸಾರಿಗೆ ಇಲಾಖೆಯ ವಿಶೇಷ ಘಟಕ ಸ್ಥಾಪನೆಗೆ ಸರ್ಕಾರ ಮುಂದಾಗಿರುವ ಕ್ರಮವನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಲಾಗಿದೆ.

ಒಂದೇ ಕಡೆ ಎಲ್ಲ ವಾಹನಗಳಿಗೆ ಪ್ರಮಾಣ ಪತ್ರ ನೀಡುವುದರಿಂದ ಗೊಂದಲ ಉಂಟಾಗುತ್ತದೆ ಎಂಬುದಾಗಿ ಅಖಿಲ ಕರ್ನಾಟಕ ಶ್ರಮ ಜೀವಿಗಳ ಕ್ಷೇಮಾಭಿವೃದ್ಧಿ ಸಂಘ ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ಸರ್ಕಾರ ಹಾಗೂ ಸಾರಿಗೆ ಇಲಾಖೆಗೆ ನ್ಯಾಯಮೂರ್ತಿ ಎಸ್.ಅಬ್ದುಲ್ ನಜೀರ್ ನೋಟಿಸ್ ಜಾರಿಗೆ ಆದೇಶಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.