ADVERTISEMENT

ಪಾಲಿಕೆ ವಿರುದ್ಧ ಕೋರ್ಟ್ ಗರಂ

​ಪ್ರಜಾವಾಣಿ ವಾರ್ತೆ
Published 10 ಜುಲೈ 2012, 19:15 IST
Last Updated 10 ಜುಲೈ 2012, 19:15 IST

ಬೆಂಗಳೂರು: ನಗರದ ಈಜಿಪುರದಲ್ಲಿ ಆರ್ಥಿಕವಾಗಿ ಹಿಂದುಳಿದವರಿಗೆ ಮನೆ ಕಟ್ಟಿಸಿಕೊಡುವಂತೆ ಆದೇಶಿಸಿ ಮೂರು ವರ್ಷ ಕಳೆದರೂ, ಮನೆ ನಿರ್ಮಾಣ ಮಾಡದ ಬಿಬಿಎಂಪಿ ಹೈಕೋರ್ಟ್ ಕೆಂಗಣ್ಣಿಗೆ ಮಂಗಳವಾರ ಗುರಿಯಾಯಿತು.

`ಕೋರ್ಟ್ ಆದೇಶಕ್ಕೂ ಬೆಲೆ ಕೊಡಲು ನಿಮಗೆ ಆಗದಿದ್ದರೆ, ಇನ್ನೇನು ಕೆಲಸ ಆದೀತು. ನ್ಯಾಯಾಲಯದ ಆದೇಶ ಎಂದರೆ ಏನು ಮಾಡಿದರೂ ನಡೆದೀತು ಎಂಬ ಭಾವನೆ ನಿಮ್ಮಲ್ಲಿ ಇದ್ದಂತೆ ತೋರುತ್ತಿದೆ. ಇದೇ ರೀತಿ ಮುಂದುವರಿದರೆ ನಿಮ್ಮ ವಿರುದ್ಧ ನ್ಯಾಯಾಂಗ ನಿಂದನೆ ದಾಖಲು ಮಾಡದೇ ಅನ್ಯ ಮಾರ್ಗ ಇರುವುದಿಲ್ಲ~ ಎಂದು ಮುಖ್ಯ ನ್ಯಾಯಮೂರ್ತಿ ವಿಕ್ರಮಜಿತ್ ಸೇನ್ ಹಾಗೂ ನ್ಯಾಯಮೂರ್ತಿ ಬಿ.ವಿ.ನಾಗರತ್ನಾ ಅವರನ್ನು ಒಳಗೊಂಡ ವಿಭಾಗೀಯ ಪೀಠ ಪಾಲಿಕೆಯನ್ನು ತರಾಟೆಗೆ ತೆಗೆದುಕೊಂಡಿತು.

ಕೋರ್ಟ್ ಆದೇಶ ಪಾಲನೆ ಮಾಡದ ಕಾರಣ ತಿಳಿಸಲು ಇದೇ 17ರಂದು ಪಾಲಿಕೆ ಆಯುಕ್ತರು ಖುದ್ದು ಹಾಜರು ಇರಬೇಕು ಎಂದು ನ್ಯಾಯಮೂರ್ತಿಗಳು ನಿರ್ದೇಶಿಸಿದರು.

1993-94ರಲ್ಲಿ ಈ ಪ್ರದೇಶದಲ್ಲಿ ನಿರ್ಮಿಸಲಾಗಿದ್ದ 1512 ಮನೆಗಳ ಪೈಕಿ 13 ಮನೆಗಳು ಕುಸಿದು ಐವರು ಮರಣ ಹೊಂದಿದ್ದ ಹಿನ್ನೆಲೆಯಲ್ಲಿ 2004ರಲ್ಲಿ ಜನರನ್ನು ತೆರವು ಮಾಡಲಾಗಿತ್ತು. ಆದರೆ ಇದುವರೆಗೂ ಸರ್ಕಾರ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ದೂರಿ ಮನೆ ಮಾಲೀಕರು ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ಈ ಆದೇಶ ಹೊರಡಿಸಲಾಗಿದೆ. 2009ರ ಫೆಬ್ರುವರಿಯಲ್ಲಿ ಆದೇಶ ಹೊರಡಿಸಿದ್ದ ಕೋರ್ಟ್, ಹಣ ಮಂಜೂರು ಮಾಡುವಂತೆ ನಗರಾಭಿವೃದ್ಧಿ ಇಲಾಖೆಗೆ ಹಾಗೂ ಶೀಘ್ರ ಮನೆ ಕಟ್ಟಿ ಕೊಡುವಂತೆ ಪಾಲಿಕೆಗೆ ಆದೇಶಿಸಿತ್ತು. ಆದರೆ ಆದೇಶ ಪಾಲನೆ ಆಗದೇ ಇರುವುದು ನ್ಯಾಯಮೂರ್ತಿಗಳ ಕೋಪಕ್ಕೆ ಕಾರಣವಾಯಿತು.

ಮನೆ ಕುಸಿತ- ಅಚ್ಚರಿ: ಮನೆಗಳು ಕುಸಿದಿರುವ ಬಗ್ಗೆ ತೀವ್ರ ಅಚ್ಚರಿ ವ್ಯಕ್ತಪಡಿಸಿದ ನ್ಯಾ.ಸೇನ್, `ಅರೇ ಇದೇನಿದು, ಕಟ್ಟಡ ಕುಸಿಯುವುದು ಎಂದರೆ ಏನರ್ಥ? ಇಲ್ಲಿ ದೊಡ್ಡ ಪ್ರಮಾಣದ ಮೋಸ ನಡೆದಿದೆ. ಇದನ್ನು ಸಿಬಿಐ ತನಿಖೆಗೆ ಒಪ್ಪಿಸುವುದೊಂದೇ ನಮಗೆ ಇರುವ ದಾರಿ.

ಆಗ ಮಾತ್ರ ಇದರ ಹಿಂದಿನ ಎಲ್ಲ ಹುಳುಕುಗಳು ಹೊರ ಬರುತ್ತವೆ. ಕಳಪೆ ಗುಣಮಟ್ಟದ ಕಟ್ಟಡ ನಿರ್ಮಾಣಕ್ಕೆ ಕಾರಣರಾದವರು ಯಾರು ಎಂಬುದು ತಿಳಿಯುತ್ತದೆ. ಇಂಥವರನ್ನು ಸುಮ್ಮನೆ ಬಿಡುವುದರಲ್ಲಿ ಅರ್ಥವಿಲ್ಲ~ ಎಂದರು.

ಆರ್ಥಿಕವಾಗಿ ಹಿಂದುಳಿದ ವರ್ಗದ ಜನರನ್ನು ತೊಂದರೆಗೆ ಈಡು ಮಾಡಿದರೂ ನಡೆಯುತ್ತದೆ ಎಂಬ ಭಾವನೆ ಈ ಅಧಿಕಾರಿಗಳಲ್ಲಿ ಇದ್ದಂತಿದೆ. ಆದರೆ ನ್ಯಾಯಾಲಯಗಳು ಇರುವುದೇ ಬಡ ಜನರಿಗಾಗಿ ಎನ್ನುವುದನ್ನು ಯಾರೂ ಮರೆಯಬಾರದು ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.