ADVERTISEMENT

ಪೆರೋಲ್‌ : ಪರಾರಿ ಕೈದಿಗಳ ಪತ್ತೆಗೆ ಕಾಲಾವಕಾಶ ಕೋರಿಕೆ

​ಪ್ರಜಾವಾಣಿ ವಾರ್ತೆ
Published 1 ಜೂನ್ 2017, 19:41 IST
Last Updated 1 ಜೂನ್ 2017, 19:41 IST
ಪೆರೋಲ್‌ : ಪರಾರಿ ಕೈದಿಗಳ ಪತ್ತೆಗೆ ಕಾಲಾವಕಾಶ ಕೋರಿಕೆ
ಪೆರೋಲ್‌ : ಪರಾರಿ ಕೈದಿಗಳ ಪತ್ತೆಗೆ ಕಾಲಾವಕಾಶ ಕೋರಿಕೆ   

ಬೆಂಗಳೂರು: ಪೆರೋಲ್ ಮೇಲೆ ತೆರಳಿ ಪುನಃ ಜೈಲಿಗೆ ಶರಣಾಗದೆ ನಾಪತ್ತೆಯಾಗಿರುವ ಕೈದಿಗಳ ಪತ್ತೆ ಕಾರ್ಯಕ್ಕೆ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಎಡಿಜಿಪಿ) ಅಥವಾ ಪೊಲೀಸ್ ಮಹಾ ನಿರೀಕ್ಷಕರ (ಐಜಿಪಿ) ಮೇಲುಸ್ತುವಾರಿಯಲ್ಲಿ ವಿಶೇಷ  ತಂಡ ರಚಿಸುವಂತೆ ರಾಜ್ಯ ಪೊಲೀಸ್ ಮಹಾ ನಿರ್ದೇಶಕರಿಗೆ (ಡಿಜಿಪಿ) ಹೈಕೋರ್ಟ್  ನಿರ್ದೇಶಿಸಿದೆ.

ಈ ಕುರಿತಂತೆ ಹೈಕೋರ್ಟ್‌ ದಾಖಲಿಸಿಕೊಂಡಿರುವ ಸ್ವಯಂ ಪ್ರೇರಿತ ಪ್ರಕರಣವನ್ನು ನ್ಯಾಯಮೂರ್ತಿ ಜಯಂತ್ ಪಟೇಲ್ ಹಾಗೂ ನ್ಯಾಯಮೂರ್ತಿ ಎನ್‌.ಕೆ.ಸುಧೀಂದ್ರ ರಾವ್‌ ಅವರಿದ್ದ ವಿಭಾಗೀಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.

‘ಪೆರೋಲ್ ಮೇಲೆ ತೆರಳಿ ಪರಾರಿಯಾಗಿರುವ ಕೈದಿಗಳ ಪತ್ತೆಗೆ ಏನೆಲ್ಲಾ ಕ್ರಮ ಕೈಗೊಳ್ಳಲಾಗಿದೆ ಎಂಬ ವಿವರಗಳನ್ನು ಆಗಸ್ಟ್‌ 22ಕ್ಕೆ  ಸಲ್ಲಿಸಿ’ ನ್ಯಾಯಪೀಠ ಸೂಚಿಸಿದೆ.

ADVERTISEMENT

ವಿಚಾರಣೆ ವೇಳೆ ರಾಜ್ಯ ಪಬ್ಲಿಕ್‌ ಪ್ರಾಸಿಕ್ಯೂಟರ್‌ ಪಿ.ಎಂ.ನವಾಜ್‌, ‘ರಾಜ್ಯದ ವಿವಿಧ ಜೈಲುಗಳಲ್ಲಿ ಪೆರೋಲ್‌ ಮೇಲೆ ತೆರಳಿ ಪರಾರಿಯಾಗಿರುವ ಕೈದಿಗಳ ಸಂಖ್ಯೆ 46ರಷ್ಟಿದೆ’ ಎಂದು ತಿಳಿಸಿದರು.

‘ಬೆಂಗಳೂರು ವ್ಯಾಪ್ತಿಯಲ್ಲಿ 14  ಕೈದಿಗಳನ್ನು ಸೆರೆ ಹಿಡಿಯಲಾಗಿದೆ. ಇಬ್ಬರು ಮೃತಪಟ್ಟಿದ್ದಾರೆ. ಉಳಿದ 26 ಕೈದಿಗಳನ್ನು ಪತ್ತೆ ಹಚ್ಚಬೇಕಿದೆ.  ಈ ದಿಸೆಯಲ್ಲಿ ಗೃಹ ಇಲಾಖೆ ಎಲ್ಲ ಕ್ರಮ ಕೈಗೊಂಡಿದೆ. ಆದಾಗ್ಯೂ ಎಲ್ಲರ ಪತ್ತೆ ಕಾರ್ಯಕ್ಕೆ 12 ವಾರಗಳ ಕಾಲಾವಕಾಶ ಬೇಕು’ ಎಂದು ಕೋರಿದರು.

**

ಷರತ್ತುಬದ್ಧ ಜಾಮೀನು

ಬೆಂಗಳೂರು: ಲಂಚಕ್ಕೆ ಬೇಡಿಕೆಯಿಟ್ಟ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಲೋಕಾಯುಕ್ತ ಕಚೇರಿಯ ಶೀಘ್ರ ಲಿಪಿಕಾರ ಸುಂಕಣ್ಣ ಅವರಿಗೆ ಹೈಕೋರ್ಟ್ ಷರತ್ತುಬದ್ಧ ಜಾಮೀನು ನೀಡಿದೆ.

ಈ ಸಂಬಂಧ ಸುಂಕಣ್ಣ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ರತ್ನಕಲಾ ಅವರಿದ್ದ ಏಕಸದಸ್ಯ ಪೀಠವು ಗುರುವಾರ ವಿಚಾರಣೆ ನಡೆಸಿತು.
‘ಈಗಾಗಲೇ ಪ್ರಕರಣದ ಸಹ ಆರೋಪಿಗೆ ಜಾಮೀನು ನೀಡಿರುವ ಕಾರಣ ಸುಂಕಣ್ಣ ಅವರಿಗೂ ಜಾಮೀನು ನೀಡಲಾಗುತ್ತಿದೆ’ ಎಂದು ನ್ಯಾಯಪೀಠ ತಿಳಿಸಿದೆ.

ಸುಂಕಣ್ಣ ವಿರುದ್ಧ ಭ್ರಷ್ಟಾಚಾರ ನಿಗ್ರಹ ದಳ ವಿರುದ್ಧ ದೂರು ದಾಖಲಿಸಿಕೊಂಡಿದ್ದು ಅವರು, 57 ದಿನಗಳಿಂದ  ಜೈಲಿನಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.