ADVERTISEMENT

ಪೊಲೀಸರಿಂದ ದೌರ್ಜನ್ಯ-ಎಸ್‌ಎಚ್‌ಆರ್‌ಸಿ ಪರಿಶೀಲನೆ.

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2011, 19:30 IST
Last Updated 11 ಫೆಬ್ರುವರಿ 2011, 19:30 IST

ಬೆಂಗಳೂರು: ಮೊಬೈಲ್ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಯುವಕನೊಬ್ಬನನ್ನು ವಿಚಾರಣೆಯ ನೆಪದಲ್ಲಿ ಕರೆದೊಯ್ದು ದೌರ್ಜನ್ಯ ನಡೆಸಿದ್ದಾರೆ ಎಂಬ ದೂರಿನ ಹಿನ್ನೆಲೆಯಲ್ಲಿ ರಾಜ್ಯ ಮಾನವ ಹಕ್ಕುಗಳ ಆಯೋಗದ (ಎಸ್‌ಎಚ್‌ಆರ್‌ಸಿ) ಅಧಿಕಾರಿಗಳು ಮೈಕೊಲೇಔಟ್ ಉಪ ಠಾಣೆಗೆ ಗುರುವಾರ ಭೇಟಿ ನೀಡಿ ಪರಿಶೀಲಿಸಿದರು.‘ಮೈಕೊಲೇಔಟ್ ಪೊಲೀಸರು ಮೊಬೈಲ್ ಕಳವು ಪ್ರಕರಣದ ಸಂಬಂಧ ಪರ್ವೇಜ್ (21) ಎಂಬ ಯುವಕನನ್ನು ವಿಚಾರಣೆಗಾಗಿ ಫೆ.1ರಂದು ಠಾಣೆಗೆ ಕರೆದೊಯ್ದಿದ್ದರು. ಠಾಣೆಯಲ್ಲಿ ಆತನಿಗೆ ಮನಬಂದಂತೆ ಹೊಡೆದ ಸಿಬ್ಬಂದಿ ವಿದ್ಯುತ್ ಶಾಕ್ ಕೊಟ್ಟು ದೌರ್ಜನ್ಯ ನಡೆಸಿದ್ದರು’ ಎಂದು ಆರೋಪಿಸಿ ಸಿಕ್ರೆಮ್ ಸಂಘಟನೆ ಕಾರ್ಯಕರ್ತರು ಎಸ್‌ಎಚ್‌ಆರ್‌ಸಿಗೆ ದೂರು ಕೊಟ್ಟಿದ್ದರು.‘ಪರ್ವೇಜ್‌ನ ಸಹೋದರಿ ಹರ್ಷಿಯಾ ಅವರು ಗರ್ಭಿಣಿಯಾಗಿದ್ದು, ಪೊಲೀಸರು ಅವರ ಮೇಲೂ ದೌರ್ಜನ್ಯ ನಡೆಸಿದ್ದಾರೆ’ ಎಂದು ಕಾರ್ಯಕರ್ತರು ದೂರಿನಲ್ಲಿ ತಿಳಿಸಿದ್ದರು.


‘ಈ ದೂರಿನ ಹಿನ್ನೆಲೆಯಲ್ಲಿ ಠಾಣೆಗೆ ತೆರಳಿ ಪರಿಶೀಲನೆ ನಡೆಸಲಾಯಿತು. ಕನಕಪುರ ರಸ್ತೆ ಅವಲಹಳ್ಳಿ ನಿವಾಸಿಯಾದ ಪರ್ವೇಜ್‌ನನ್ನು ಪೊಲೀಸರು ಫೆ.1ರಿಂದ ಏಳು ದಿನಗಳ ಕಾಲ ಅಕ್ರಮವಾಗಿ ಬಂಧನದಲ್ಲಿಟ್ಟುಕೊಂಡು ದೌರ್ಜನ್ಯ ನಡೆಸಿದ್ದಾರೆ. ಕಳವು ಪ್ರಕರಣದಲ್ಲಿ ಆತನ ಕೈವಾಡವಿಲ್ಲ ಎಂದು ತನಿಖೆಯಿಂದ ಗೊತ್ತಾದ ನಂತರ ಪೊಲೀಸರು ಆತನನ್ನು ಬಿಟ್ಟು ಕಳುಹಿಸಿದ್ದಾರೆ’ ಎಂದು ಆಯೋಗದ ಡಿವೈಎಸ್ಪಿ ಶಿವಮೂರ್ತಿ ಅವರು ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.