ADVERTISEMENT

ಪೊಲೀಸರ ವಶದಲ್ಲಿದ್ದ ಆರೋಪಿ ಸಾವು

ಸಂಪಿಗೇಹಳ್ಳಿ ಠಾಣೆಯಲ್ಲಿ ಲಾಕಪ್‌ ಡೆತ್‌ ಆರೋಪ: ಸಿಐಡಿ ಅಧಿಕಾರಿಗಳಿಂದ ತನಿಖೆ ಆರಂಭ

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2017, 20:10 IST
Last Updated 9 ಏಪ್ರಿಲ್ 2017, 20:10 IST
ಬೆಂಗಳೂರು: ನಗರದ ಸಂಪಿಗೇಹಳ್ಳಿ ಠಾಣೆಯ ಪೊಲೀಸರ ವಶದಲ್ಲಿದ್ದ ಆರೋಪಿ ರಾಮಪ್ಪ ಅಲಿಯಾಸ್‌ ರಮೇಶ್‌ (24) ಎಂಬುವರು ಭಾನುವಾರ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದಾರೆ.
 
‘ಅವರ ಸಾವು ಲಾಕಪ್‌ ಡೆತ್‌’ ಎಂದು ಕುಟುಂಬದವರು ಆರೋಪಿಸಿದ್ದು, ಪ್ರಕರಣದ ತನಿಖೆಯನ್ನು ಸಿಐಡಿ ಅಧಿಕಾರಿಗಳು ಕೈಗೆತ್ತಿಕೊಂಡಿದ್ದಾರೆ. 
 
ಮೊಬೈಲ್‌ ಕಳವು ಆರೋಪದಡಿ ಚಿಕ್ಕಬಳ್ಳಾಪುರದ ರಾಮಪ್ಪ  ಅವರನ್ನು ಶನಿವಾರ ರಾತ್ರಿ 11.30ರ ಸುಮಾರಿಗೆ ಬಂಧಿಸಿದ್ದ ಸಂಪಿಗೇಹಳ್ಳಿ  ಪೊಲೀಸರು, ಠಾಣೆಗೆ ಕರೆದುಕೊಂಡು ಬಂದು  ವಿಚಾರಣೆ ನಡೆಸಿದ್ದರು. 
 
ಭಾನುವಾರ ನಸುಕಿನ ಜಾವ ಅಸ್ವಸ್ಥಗೊಂಡಿದ್ದ ರಾಮಪ್ಪ  ಅವರನ್ನು  ಠಾಣೆಯ ಸಮೀಪದ ಸಾಯಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅಲ್ಲಿ ಇಸಿಜಿ ಸೌಲಭ್ಯವಿಲ್ಲದಿದ್ದರಿಂದ ಪುನಃ ಹತ್ತಿರದ ರೇಗಲ್‌ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ತಪಾಸಣೆ ನಡೆಸಿದ ವೈದ್ಯರು,  ರಾಮಪ್ಪ ಅಸುನೀಗಿರುವುದನ್ನು ದೃಢಪಡಿಸಿದರು.
 
ನಡೆದಿದ್ದೇನು?: ಸಂಪಿಗೇಹಳ್ಳಿ ನಿವಾಸಿ ಪ್ರವೀಣ್‌ ಎಂಬುವರು ಶನಿವಾರ ರಾತ್ರಿ 9.30ರ ಸುಮಾರಿಗೆ ನಾಗವಾರ್‌ ಸಿಗ್ನಲ್‌  ಬಳಿ ನಡೆದುಕೊಂಡು ಹೋಗುತ್ತಿದ್ದರು.
 
ಈ ವೇಳೆ ಹಿಂದಿನಿಂದ ಬಂದಿದ್ದ ಅಪರಿಚಿತ ವ್ಯಕ್ತಿಯೊಬ್ಬ, ‘ಪರಿಚಯಸ್ಥರಿಗೆ ತುರ್ತು ಕರೆ ಮಾಡಬೇಕಿದೆ. ಸ್ವಲ್ಪ ಮೊಬೈಲ್‌ ಕೊಡಿ’ ಎಂದು ಕೇಳಿದ್ದ. ಆಗ ಪ್ರವೀಣ್‌, ಮೊಬೈಲ್‌ ಕೊಟ್ಟಿದ್ದರು. ಕರೆ ಮಾಡಿದಂತೆ ನಟಿಸಿದ ವ್ಯಕ್ತಿಯು ಮೊಬೈಲ್‌ ಸಮೇತ ಓಡಿಹೋಗಿದ್ದ.
 
ಆಗ ಪ್ರವೀಣ್‌, ಮೊಬೈಲ್‌ ಕಳ್ಳ ಎಂದು ಚೀರಿದ್ದರು. ಸ್ಥಳದಲ್ಲಿ  ಸೇರಿದ ಸಾರ್ವಜನಿಕರು, ರಮೇಶ್‌ನನ್ನು ಬೆನ್ನಟ್ಟಿ ಹಿಡಿದಿದ್ದರು. ಈ ಬಗ್ಗೆ ಮಾಹಿತಿ ಪಡೆದು ಹೊಯ್ಸಳ ವಾಹನದ ಸಿಬ್ಬಂದಿ ಸಮೇತ ಸ್ಥಳಕ್ಕೆ ಹೋದ ಸಂಪಿಗೇಹಳ್ಳಿ ಎಸ್‌ಐ ಶಿವಶಂಕರ, ರಮೇಶ್‌ನನ್ನು ಬಂಧಿಸಿ ಠಾಣೆಗೆ ಕರೆದುಕೊಂಡು ಬಂದಿದ್ದರು. ಪ್ರವೀಣ್‌ ಅವರಿಂದ ದೂರು ಪಡೆದು ಎಫ್‌ಐಆರ್‌ ಸಹ ದಾಖಲಿಸಿಕೊಂಡಿದ್ದರು.
 
ಠಾಣೆಗೆ ಸಿಐಡಿ ತಂಡ ಭೇಟಿ: ಘಟನೆ ಬಗ್ಗೆ ಮಾಹಿತಿ ಸಂಗ್ರಹಿಸಲು  ಸಿಐಡಿ ಅಧಿಕಾರಿಗಳ ತಂಡವು ಭಾನುವಾರ ಸಂಜೆ ಸಂಪಿಗೇಹಳ್ಳಿ ಠಾಣೆಗೆ ಭೇಟಿ ನೀಡಿತು.
 
‘ಮಾಹಿತಿ ನೀಡುವಂತೆ  ಪೊಲೀಸರಿಗೆ ನೋಟಿಸ್‌ ಕೊಟ್ಟಿದ್ದೇವೆ. ರಮೇಶ್‌ ಕುಟುಂಬದವರ ಹೇಳಿಕೆಯನ್ನೂ ಪಡೆಯುತ್ತೇವೆ. ಬಳಿಕವೇ ಸಾವಿಗೆ ನಿಖರ ಕಾರಣ ಗೊತ್ತಾಗಲಿದೆ’ ಎಂದು ಸಿಐಡಿ ಅಧಿಕಾರಿಯೊಬ್ಬರು ತಿಳಿಸಿದರು.
 
ಹಿಂದಿನ ಪ್ರಕರಣಗಳು
2016, ಫೆ.18: ಕಳ್ಳತನ ಪ್ರಕರಣದಲ್ಲಿ ಜೀವನಬಿಮಾನಗರ ಠಾಣೆಯ ಪೊಲೀಸರ ವಶದಲ್ಲಿದ್ದ ಒಡಿಶಾದ ಮಹೇಂದರ್‌ (42) ಎಂಬುವರು ಮೃತಪಟ್ಟಿದ್ದರು. ಈ ಪ್ರಕರಣದ ತನಿಖೆ ನಡೆಸಿದ್ದ ಸಿಐಡಿ,  ನಾಲ್ವರು ಪೊಲೀಸರ ವಿರುದ್ಧ ಎಫ್‌ಐಆರ್‌ ದಾಖಲಿಸಿದ್ದಾರೆ.
2014, ಸೆ.21: ಕೊಲೆ ಪ್ರಕರಣದಲ್ಲಿ ಸರ್ಜಾಪುರ ಠಾಣೆ ಪೊಲೀಸರ ವಶದಲ್ಲಿದ್ದ ಪಿಳ್ಳಪ್ಪ (55) ಎಂಬುವರು ಮೃತಪಟ್ಟಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.