ADVERTISEMENT

ಪ್ರಚಾರವನ್ನೇ ನಿಷೇಧಿಸಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2013, 20:06 IST
Last Updated 22 ಏಪ್ರಿಲ್ 2013, 20:06 IST

ಬೆಂಗಳೂರು: `ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳು ಹಾಗೂ ಪಕ್ಷಗಳಿಂದ ಚುನಾವಣಾ ಪ್ರಚಾರವನ್ನು ನಿಷೇಧಿಸುವ ಮೂಲಕ ಚುನಾವಣಾ ವ್ಯವಸ್ಥೆಯಲ್ಲಿ ಸುಧಾರಣೆ ತರಬೇಕು' ಎಂದು ಮಹಿಳಾ ಪ್ರಧಾನ ಪಕ್ಷ ಆಗ್ರಹಿಸಿದೆ.

ಸೋಮವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪಕ್ಷದ ಸಂಸ್ಥಾಪಕ ಅಧ್ಯಕ್ಷೆ ಶಾಂತಕುಮಾರಿ, `ಮತ ಚೀಟಿಯ ಜೊತೆಗೆ ಅಭ್ಯರ್ಥಿಯ ವಿದ್ಯಾರ್ಹತೆ, ಆಸ್ತಿ, ಸಚ್ಚಾರಿತ್ರ್ಯ ಮತ್ತಿತರ ವಿವರಗಳನ್ನು ಆಯೋಗ ಜನರಿಗೆ ಒದಗಿಸಬೇಕು. ಪಕ್ಷ ಅಥವಾ ಅಭ್ಯರ್ಥಿ ವೈಯಕ್ತಿಕವಾಗಿ ಮತದಾರರನ್ನು ಭೇಟಿ ಮಾಡಿ ಮತಯಾಚನೆ ಮಾಡದಂತೆ ಕ್ರಮ ಕೈಗೊಳ್ಳಬೇಕು' ಎಂದರು.

`ಆಯೋಗವು ಸ್ವೀಪ್ ಯೋಜನೆಯಡಿ ಅಧಿಕೃತ ಮತಚೀಟಿಯ ಜೊತೆಗೆ ಅಭ್ಯರ್ಥಿಯ ಸಾಧನೆ ಮತ್ತು ಪ್ರಣಾಳಿಕೆಯನ್ನು ಚುನಾವಣಾ ದಿನಾಂಕದೊಳಗೆ ಮತದಾರರಿಗೆ ತಲುಪಿಸಬೇಕು. ಇದರಿಂದ, ಚುನಾವಣಾ ಪ್ರಚಾರಕ್ಕೆ ಅಪಾರ ಹಣ ವ್ಯಯವಾಗುವುದು ತಪ್ಪುತ್ತದೆ. ಮತದಾರರಿಗೆ ಅಭ್ಯರ್ಥಿಗಳ ಸಾಧನೆಯ ವರದಿ ತಿಳಿಯುತ್ತದೆ. ಪ್ರಚಾರಕ್ಕೆ ತಡೆ ಇರುವುದರಿಂದ ಹಿಂಸೆ ಕಡಿಮೆಯಾಗುತ್ತದೆ. ಭದ್ರತೆಗಾಗಿ ಪೋಲಾಗುವ ಅಪಾರ ಹಣ ಉಳಿಯುತ್ತದೆ' ಎಂದು ವಿವರಿಸಿದರು.

`ಚುನಾವಣಾ ಆಯೋಗವು ಆಯಾ ಕ್ಷೇತ್ರಗಳ ಎಲ್ಲ ಅಭ್ಯರ್ಥಿಗಳನ್ನು ಒಳಗೊಂಡು ಕ್ಷೇತ್ರಗಳ ಹಲವೆಡೆ ನೇರ ಸಾರ್ವಜನಿಕ ಚರ್ಚೆಗಳನ್ನು ಏರ್ಪಡಿಸಬೇಕು. ಮಾಧ್ಯಮಗಳಲ್ಲಿ ಈ ಕುರಿತು ಚರ್ಚೆ ನಡೆಯಬೇಕು. ರಾಜಕೀಯ ಪಕ್ಷಗಳೂ ಅಭ್ಯರ್ಥಿಗಳು ಆ ಕ್ಷೇತ್ರಕ್ಕೆ ಮುಂದಿನ ಐದು ವರ್ಷಗಳಲ್ಲಿ ಏನು ಕೆಲಸ ಮಾಡಲಿದ್ದಾರೆ ಎಂಬುದನ್ನು ಮಾಹಿತಿ ಒದಗಿಸಬೇಕು' ಎಂದು ಒತ್ತಾಯಿಸಿದರು. 

`ಚುನಾವಣಾ ಆಯೋಗವು ಆರಂಭಿಸಿರುವ ಸ್ವೀಪ್ ಕಾರ್ಯಕ್ರಮವನ್ನು ಲಿಂಗ ಸಮಾನತೆಯ ದೃಷ್ಟಿಯಿಂದ ಮಹಿಳಾ ಕೇಂದ್ರಿತವಾಗಿ ಮಾಡಬೇಕು. ಲಿಂಗಾಧಾರಿತ ಮುಕ್ತ ಮತದಾನದ ಆಯ್ಕೆ ಸ್ವಾತಂತ್ರ್ಯದ ಸಂದೇಶವನ್ನು ಮುದ್ರಿಸಬೇಕು' ಎಂದು ಹೇಳಿದರು.

`ಮತಗಟ್ಟೆಗೆ ಹೋಗುವವರೆಗೆ ಮತದಾರರಿಗೆ ಎಲ್ಲ ಉಮೇದುವಾರರ ಮಾಹಿತಿ ಲಭ್ಯ ಇರುವುದಿಲ್ಲ. ಮತ ಚೀಟಿಯ ಜೊತೆಗೆ ಅಭ್ಯರ್ಥಿಗಳ ಭಾವಚಿತ್ರ, ಹೆಸರು, ಪಕ್ಷದ ಹೆಸರು, ಚಿಹ್ನೆ ಮತ್ತಿತರ ವಿವರಗಳನ್ನು ಕನ್ನಡದಲ್ಲಿ ನೀಡಬೇಕು' ಎಂದು ಅವರು ಆಗ್ರಹಿಸಿದರು.

`ಬ್ಯಾಟರಾಯನಪುರ ಹೆಬ್ಬಾಳದಲ್ಲಿ ಸ್ಪರ್ಧೆ'
`ಪಕ್ಷದಿಂದ ನಾನು ಬ್ಯಾಟರಾಯನಪುರ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದೇನೆ. ಹೆಬ್ಬಾಳ ಕ್ಷೇತ್ರದಿಂದ ಡಾ.ಪ್ರಭಾ ಶಂಕರ್ ಸ್ಪರ್ಧಿಸುತ್ತಿದ್ದಾರೆ' ಎಂದು ಶಾಂತಕುಮಾರಿ ತಿಳಿಸಿದರು.

  ಮೂರು ವರ್ಷಗಳ ಹೋರಾಟದ ನಂತರ ಪಕ್ಷ ನೋಂದಣಿಗೊಂಡು ಚಿಹ್ನೆ ದೊರೆತಿದೆ. ಆದರೆ, ನಾವು ಚುನಾವಣಾ ಪ್ರಚಾರ ಮಾಡುವುದಿಲ್ಲ. ಆಯೋಗಕ್ಕೆ ಪಕ್ಷದ ಸಲಹೆಗಳನ್ನು ಸಲ್ಲಿಸುತ್ತೇವೆ. ಈ ಕುರಿತು ಏ. 26ರೊಳಗೆ ಆಯೋಗದಿಂದ ಯಾವುದೇ ಪ್ರತಿಕ್ರಿಯೆ ಲಭ್ಯವಾಗದಿದ್ದಲ್ಲಿ 29ರಂದು ಧರಣಿ ನಡೆಸಲಿದ್ದೇವೆ' ಎಂದು ಹೇಳಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT