ADVERTISEMENT

ಪ್ರತ್ಯೇಕ ಪ್ರಕರಣ -ಮಹಿಳೆಯರ ಚಿನ್ನ ದೋಚಿದ ದುಷ್ಕರ್ಮಿಗಳು

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2011, 19:30 IST
Last Updated 17 ಅಕ್ಟೋಬರ್ 2011, 19:30 IST

ಬೆಂಗಳೂರು: ನಗರದ ಸಿದ್ದಾಪುರ ಮತ್ತು ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಭಾನುವಾರ ರಾತ್ರಿ ನಡೆದ ಪ್ರತ್ಯೇಕ ಪ್ರಕರಣಗಳಲ್ಲಿ ದುಷ್ಕರ್ಮಿಗಳು ಇಬ್ಬರು ಮಹಿಳೆಯರ ಚಿನ್ನದ ಸರ ದೋಚಿದ್ದಾರೆ.
ವಿವಾಹ ಸಮಾರಂಭದಲ್ಲಿ ಪಾಲ್ಗೊಂಡು ಮನೆಗೆ ಹಿಂದಿರುಗುತ್ತಿದ್ದ ಮಹಿಳೆಯ ಸರವನ್ನು ದುಷ್ಕರ್ಮಿಗಳು ಕಿತ್ತುಕೊಂಡು ಪರಾರಿಯಾಗಿರುವ ಘಟನೆ ಪಶ್ಚಿಮ ಕಾರ್ಡ್ ರಸ್ತೆಯಲ್ಲಿ ನಡೆದಿದೆ.

ಬಸವೇಶ್ವರನಗರ ನಿವಾಸಿ ಸುಮಾ ಸರ ಕಳೆದುಕೊಂಡವರು. ಪಶ್ಚಿಮ ಕಾರ್ಡ್ ರಸ್ತೆಯಲ್ಲಿರುವ ಕಲ್ಯಾಣ ಮಂಟಪದಲ್ಲಿ ನಡೆದ ಸಂಬಂಧಿಕರ ವಿವಾಹ ಸಮಾರಂಭಕ್ಕೆ ಬಂದಿದ್ದ ಅವರು ರಾತ್ರಿ ಹನ್ನೊಂದು ಗಂಟೆ ಸುಮಾರಿಗೆ ಮನೆಗೆ ಹೋಗುವಾಗ ಬೈಕ್‌ನಲ್ಲಿ ಬಂದ ಇಬ್ಬರು ಕಿಡಿಗೇಡಿಗಳು ಸರ ದೋಚಿದ್ದಾರೆ. ಸರದ ಬೆಲೆ 1.50 ಲಕ್ಷ ರೂಪಾಯಿ ಎಂದು ಪೊಲೀಸರು ತಿಳಿಸಿದ್ದಾರೆ. ಕಾಮಾಕ್ಷಿಪಾಳ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಸಿದ್ದಾಪುರ: ಸಿದ್ದಾಪುರ ಸಂಚಾರ ಠಾಣೆ ವ್ಯಾಪ್ತಿಯ ಡೇರಿ ವೃತ್ತದ ಬಳಿ ದುಷ್ಕರ್ಮಿಯೊಬ್ಬ ವೆಂಕಟಮ್ಮ ಎಂಬುವರ ಸರವನ್ನು ದೋಚಿದ್ದಾನೆ.ದೊಡ್ಡ ಮಾವಳ್ಳಿ ನಿವಾಸಿಯಾದ ವೆಂಕಟಮ್ಮ ಅವರು ಕೆಲಸದ ನಿಮಿತ್ತ ಡೇರಿ ವೃತ್ತದ ಬಳಿ ಬಂದಿದ್ದರು.
 
ಅವರು 10.30ರ ಸುಮಾರಿಗೆ ಐಟಿಐ ಕಾಲೇಜು ಸಮೀಪ ನಡೆದು ಹೋಗುತ್ತಿದ್ದಾಗ ಹಿಂದಿನಿಂದ ಬಂದ ದುಷ್ಕರ್ಮಿ ಸರ ಕಿತ್ತುಕೊಂಡು ಪರಾರಿಯಾಗಿದ್ದಾನೆ. ಸರ ಇಪ್ಪತ್ತು ಗ್ರಾಂ ತೂಕದ್ದು ಎಂದು ಪೊಲೀಸರು ತಿಳಿಸಿದ್ದಾರೆ. ಸಿದ್ದಾಪುರ ಠಾಣೆಯಲ್ಲಿ ದೂರು ದಾಖಲಾಗಿದೆ.

ಗಾಂಜಾ ಮಾರಾಟ: ಬಂಧನ
ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಪಿಳ್ಳಣ್ಣ ಗಾರ್ಡನ್‌ನ ಸೈಯದ್ ಫಾಜಿಲ್ (29) ಎಂಬಾತನನ್ನು ಕಾಡುಗೊಂಡನಹಳ್ಳಿ ಪೊಲೀಸರು ಬಂಧಿಸಿದ್ದಾರೆ.ಕಾಡುಗೊಂಡನಹಳ್ಳಿಯ ಕರುಮಾರಿಯಮ್ಮ ದೇವಸ್ಥಾನದ ಸಮೀಪ ವ್ಯಕ್ತಿಯೊಬ್ಬ ಮಾದಕ ವಸ್ತು ಮಾರುತ್ತಿರುವ ಬಗ್ಗೆ ಮಾಹಿತಿ ಬಂದಿತ್ತು.

ಕಾರ್ಯಾಚರಣೆ ನಡೆಸಿ ಸೈಯದ್‌ನನ್ನು ಬಂಧಿಸಲಾಯಿತು. ಆರೋಪಿಯಿಂದ 20 ಸಾವಿರ ರೂಪಾಯಿ ಮೌಲ್ಯದ ಎರಡು ಕೆ.ಜಿ ಗಾಂಜಾ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಂಧಿತ ಆರೋಪಿ ವಿರುದ್ಧ ಹಲವು ಅಪರಾಧ ಪ್ರಕರಣಗಳಿವೆ. ಆಂಧ್ರಪ್ರದೇಶ ಮೂಲದ ವ್ಯಕ್ತಿಯಿಂದ ಗಾಂಜಾ ಖರೀದಿಸಿದ್ದಾಗಿ ಆತ ವಿಚಾರಣೆ ವೇಳೆ ತಿಳಿಸಿದ್ದಾನೆ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.