ADVERTISEMENT

‘ಪ್ರಾದೇಶಿಕ ಬೆಳೆಗಳಿಗೆ ಆದ್ಯತೆ ನೀಡಿ’

‘ಭಾರತೀಯ ಕೃಷಿ ಪದ್ಧತಿಯನ್ನು ಹವಾಮಾನ ಸ್ನೇಹಿಯನ್ನಾಗಿಸುವ ಕುರಿತ’ ಎರಡು ದಿನಗಳ ರಾಷ್ಟ್ರೀಯ ಕಾರ್ಯಾಗಾರ

​ಪ್ರಜಾವಾಣಿ ವಾರ್ತೆ
Published 18 ಜೂನ್ 2018, 14:10 IST
Last Updated 18 ಜೂನ್ 2018, 14:10 IST
ಪ್ರೊ.ಎಂ.ಜಿ.ಗಂಗಾಧರನಾಥ್ ಮಾತನಾಡಿದರು. ಪ್ರಮೋದ್‌ಕುಮಾರ್‌, ಡಾ.ಐ.ಮಾರುತಿ ಇದ್ದರು   –ಪ್ರಜಾವಾಣಿ ಚಿತ್ರ
ಪ್ರೊ.ಎಂ.ಜಿ.ಗಂಗಾಧರನಾಥ್ ಮಾತನಾಡಿದರು. ಪ್ರಮೋದ್‌ಕುಮಾರ್‌, ಡಾ.ಐ.ಮಾರುತಿ ಇದ್ದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ನೀರಿನ ಸದ್ಭಳಕೆ ಮಾಡಿಕೊಳ್ಳುವ ಮೂಲಕ ರೈತರು ಆಯಾ ಪ್ರದೇಶದ ಬೆಳೆಗಳಿಗೆ ಆದ್ಯತೆ ನೀಡಬೇಕು ಎಂದು ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆ ಸಂಸ್ಥೆಯ (ಐಸೆಕ್) ನಿರ್ದೇಶಕ ಪ್ರೊ.ಎಂ.ಜಿ.ಚಂದ್ರಕಾಂತ ಹೇಳಿದರು.

ಐಸೆಕ್‌ನಲ್ಲಿ ಕೃಷಿ ಅಭಿವೃದ್ಧಿ ಮತ್ತು ಗ್ರಾಮೀಣ ಸರಬರಾಜು ಕೇಂದ್ರದ (ಎಡಿಆರ್‌ಟಿಸಿ) ವತಿಯಿಂದ ‘ಭಾರತೀಯ ಕೃಷಿ ಪದ್ಧತಿಯನ್ನು ಹವಾಮಾನ ಸ್ನೇಹಿಯನ್ನಾಗಿಸುವ ಕುರಿತ’ ಎರಡು ದಿನಗಳ ರಾಷ್ಟ್ರೀಯ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.‌

ಭತ್ತ ಮತ್ತು ಗೋಧಿ ಬೆಳೆಗಳಿಗೆ ನೀರನ್ನು ಅಧಿಕವಾಗಿ ಬಳಸುತ್ತಿದ್ದು, ವಿವಿಧ ಬೆಳೆಗಳಿಗೆ ವ್ಯವಸ್ಥಿತವಾಗಿ ನೀರನ್ನು ಬಳಸುತ್ತಿಲ್ಲ. ಇದರಿಂದ ಪ್ರಾದೇಶಿಕ ಬೆಳೆಗಳ ಉತ್ಪಾದನೆ ಕುಂಠಿತವಾಗುತ್ತಿದೆ ಎಂದು ತಿಳಿಸಿದರು.

ADVERTISEMENT

ಅಂತರ್ಜಲದ ಶೇ 70 ರಷ್ಟು ನೀರು ನೀರಾವರಿಗಾಗಿ ಬಳಕೆಯಾಗುತ್ತಿದ್ದು, ಕೆಲವು ಕಡೆಗಳಲ್ಲಿ ಅಂತರ್ಜಲ 1,500 ಅಡಿಗಳಷ್ಟು ಕುಸಿತ ಕಂಡಿದೆ. ಕಲ್ಲು ಪ್ರದೇಶಗಳ‌ಲ್ಲಿ ಕೊಳವೆಬಾವಿ ಕೊರೆಸಿದಾಗ ಶೇ 0.5 ರಷ್ಟು ಯೊಜನೆಗಳು ವಿಫಲವಾಗುತ್ತಿರುವುದರಿಂದ ರೈತರು ಆರ್ಥಿಕ ಹಿನ್ನಡೆ ಅನುಭವಿಸುತ್ತಿದ್ದಾರೆ ಎಂದು ವಿವರಿಸಿದರು.

ಆಧುನಿಕ ಶೈಲಿಯ ಜೀವನ ವ್ಯವಸ್ಥೆಯಿಂದಾಗಿ ಶರೀರ ರೋಗರುಜಿನಗಳ ಆಗರವಾಗುತ್ತಿದೆ. ಪೌಷ್ಟಿಕಾಂಶಯುಕ್ತ ಆಹಾರದ ಕೊರತೆಯಿಂದಾಗಿ ಮಹಿಳೆಯರು ಹಾಗೂ ಮಕ್ಕಳಿಗೆ ವಿವಿಧ ರೀತಿಯ ಆರೋಗ್ಯ ಸಮಸ್ಯೆಗಳು ಉಂಟಾಗುತ್ತಿವೆ ಎಂದು ಹೇಳಿದರು.

ನೈಸರ್ಗಿಕ ಸಂಪನ್ಮೂಲಗಳನ್ನು ವ್ಯವಸ್ಥಿತವಾಗಿ ಬಳಸಿಕೊಳ್ಳುವ ಮೂಲಕ ಕೃಷಿ ಪದ್ಧತಿಯನ್ನು ಹವಾಮಾನ ಸ್ನೇಹಿಯನ್ನಾಗಿಸಬಹುದು ಎಂದು ತಿಳಿಸಿದರು.

ಐಸೆಕ್ ಸಂಸ್ಥೆಯ ಮಾಜಿ ನಿರ್ದೇಶಕ ಪ್ರೊ.ಆರ್.ಎಸ್.ದೇಶಪಾಂಡೆ, ‘ಸಕಾಲಕ್ಕೆ ತಕ್ಕಂತೆ ರೈತರಿಗೆ ಸರಿಯಾದ ಮಾಹಿತಿ ಮತ್ತು ಜ್ಞಾನ ಪ್ರಸರಣ ಕಾರ್ಯವನ್ನು ಸರ್ಕಾರಿ ಸಂಸ್ಥೆಗಳು ಮಾಡಬೇಕು’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.