ADVERTISEMENT

ಬಂದೂಕು ಹಿಡಿದಿಲ್ಲ, ಕಲೆ ಮೂಲಕ ಹೋರಾಟ

ಪ್ಯಾಲೆಸ್ಟೀನ್‌ ಫ್ರೀಡಂ ಥಿಯೇಟರ್‌ನ ಮುಖ್ಯಸ್ಥ ಫೈಸಲ್‌ ಅಬು ಅಲ್ಲಾಜ್‌ ನುಡಿ

​ಪ್ರಜಾವಾಣಿ ವಾರ್ತೆ
Published 13 ಜನವರಿ 2016, 19:30 IST
Last Updated 13 ಜನವರಿ 2016, 19:30 IST

ಬೆಂಗಳೂರು: ‘ನಾವು ಪ್ಯಾಲೆಸ್ಟೀನ್ ಸ್ವಾತಂತ್ರ್ಯ ಹೋರಾಟಗಾರರು. ಸ್ವಾತಂತ್ರ್ಯಕ್ಕಾಗಿ ಬಂದೂಕು ಹಿಡಿಯದೆ ನಾಟಕ, ಸಂಗೀತ, ಸಿನಿಮಾ ಮೂಲಕ ಹೋರಾಟ ನಡೆಸುತ್ತಿದ್ದೇವೆ...’

ಇದು ಪ್ಯಾಲೆಸ್ಟೀನ್‌ನ ಫ್ರೀಡಂ ಥಿಯೇಟರ್‌ ಸಂಸ್ಥೆ ಮುಖ್ಯಸ್ಥ ಫೈಸಲ್‌ ಅಬು ಅಲ್ಲಾಜ್‌ ಅವರ ನುಡಿ.ಪತ್ರಕರ್ತರ ಅಧ್ಯಯನ ಕೇಂದ್ರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಬುಧವಾರ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಅರಬ್ಬರು ಪ್ಯಾಲೆಸ್ಟೀನ್‌ನ ಮೂಲ ನಿವಾಸಿಗಳು. ಆದರೆ, ನಮ್ಮ ನೆಲದಲ್ಲೇ ನಾವು ಅನಾಥರಾಗಿ ಬಾಳುತ್ತಿದ್ದೇವೆ’ ಎಂದರು.
‘ಪ್ಯಾಲೆಸ್ಟೀನ್‌ ಪ್ರದೇಶಗಳನ್ನು ಇಸ್ರೇಲ್ ಆಕ್ರಮಿಸಿಕೊಂಡಿದೆ. ಇದನ್ನು ಬಿಟ್ಟುಕೊಡಲು ಇಸ್ರೇಲ್ ಹಿಂದೇಟು ಹಾಕುತ್ತಿದೆ. ಪೂರ್ವ ಜೆರುಸಲೇಂ ಪ್ರದೇಶದ ಮೇಲೂ ಇಸ್ರೇಲ್ ಹಿಡಿತ ಸಾಧಿಸಿದ್ದು, ಬೇರೆ ದೇಶಗಳ ಯಹೂದಿಗಳಿಗೆ ಅಲ್ಲಿ ಪುನರ್ವಸತಿ ಕಲ್ಪಿಸಲಾಗಿದೆ’ ಎಂದು ದೂರಿದರು.

‘ಪ್ಯಾಲೆಸ್ಟೀನರ ಸ್ವಾಭಿಮಾನದ ಹೋರಾಟಕ್ಕೆ ಭಾರತೀಯರ ಬೆಂಬಲ ಅಗತ್ಯವಿದೆ. ಭಾರತದಲ್ಲಿ ಕಲೆ ಸಾಹಿತ್ಯ, ಶಿಕ್ಷಣ ಶ್ರೀಮಂತವಾಗಿದೆ. ಹೀಗಾಗಿ ಇಲ್ಲಿಗೆ ಬಂದಿದ್ದೇವೆ’ ಎಂದರು.

‘ಸಾಂಸ್ಕೃತಿಕವಾಗಿ ಬಲಗೊಳ್ಳದಿದ್ದರೆ ನಮ್ಮ ಪ್ರತಿ ನಡೆಯಲ್ಲೂ ಸೋಲನ್ನು ಕಾಣಬೇಕಾಗುತ್ತದೆ. ಪ್ಯಾಲೆಸ್ಟೀನ್‌ನಲ್ಲಿ ಮಕ್ಕಳು ಕಲ್ಲುಗಳಲ್ಲಿ ಯುದ್ಧ ಮಾಡುತ್ತಾರೆ. ಅವರಿಗೆ ಉತ್ತಮ ಶಿಕ್ಷಣ, ಕಲೆಗಳನ್ನು ಹೇಳಿಕೊಟ್ಟಿದ್ದರೆ ಹೀಗೆ ಕಲ್ಲಿನಲ್ಲಿ ಯುದ್ಧ ಮಾಡುತ್ತಿರಲಿಲ್ಲ’ ಎಂದರು.

ನವದೆಹಲಿಯ ಜನ ನಾಟ್ಯ ಮಂಚ್‌ನ ಮುಖ್ಯಸ್ಥ ಸುಧನ್ವ ದೇಶಪಾಂಡೆ ಮಾತನಾಡಿ, ‘ಇಸ್ರೇಲ್‌ ಹಾಗೂ ಭಾರತದ ನಡುವಿನ ಸಾಂಸ್ಕೃತಿಕ ಕೊಡು ಕೊಳ್ಳುವಿಕೆಯನ್ನು ಬಹಿಷ್ಕರಿಸಬೇಕು. ಸಂಘ–ಸಂಸ್ಥೆಗಳು, ಕಲಾವಿದರು ಇಸ್ರೇಲ್‌ ದೇಶದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನೀಡದೆ ಪ್ರತಿಭಟನೆ ತೋರಬೇಕು’ ಎಂದು ಮನವಿ ಮಾಡಿದರು. ಜನ ನಾಟ್ಯ ಮಂಚ್‌ನ ಮಲಯಶ್ರೀ ಅಸ್ಮಿ, ಬೆಂಗಳೂರಿನ ಸಮುದಾಯ ತಂಡದ ಕಾರ್ಯದರ್ಶಿ ಟಿ.ಸುರೇಂದ್ರ ಇದ್ದರು.

ಬೀದಿ ನಾಟಕಗಳ ಪ್ರದರ್ಶನ: ನಗರದ ಚಿತ್ರಕಲಾ ಪರಿಷತ್ತಿನಲ್ಲಿ ಬುಧವಾರ ಸಂಜೆ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ‘ಹಮೇಶಾ ಸಾಮಿದ’ ಹಾಗೂ ‘ಗೋಡೆಗೆ ಹೇಳಿದ ಕಥೆ’ ಬೀದಿ ನಾಟಕಗಳು ಪ್ರದರ್ಶನಗೊಂಡವು.

ಇದಕ್ಕೂ ಮುನ್ನ ಚಲನಚಿತ್ರ ನಿರ್ದೇಶಕ ಎಂ.ಎಸ್‌.ಸತ್ಯು ಮಾತನಾಡಿ, ‘ಧಾರ್ಮಿಕ ಕಾರಣಗಳಿಂದ ಇಸ್ರೇಲ್‌– ಪ್ಯಾಲೆಸ್ಟೀನ್‌ ನಡುವೆ ಕದನ ಏರ್ಪಟ್ಟಿದೆ. ಭಾರತದಲ್ಲೂ ಜಮ್ಮು–ಕಾಶ್ಮೀರ ವಿವಾದವನ್ನು ಕಾಣಬಹುದು’ ಎಂದರು.

‘ಅಮೆರಿಕ ಎಲ್ಲ ದೇಶಗಳನ್ನು ನಿಯಂತ್ರಿಸಬೇಕು ಎಂಬ ಮನೋಭಾವದಿಂದ ಪಿತೂರಿ ನಡೆಸುತ್ತಿದೆ. ತನ್ನ ಅರ್ಥ ವ್ಯವಸ್ಥೆ ಚೆನ್ನಾಗಿರಬೇಕೆಂಬ ಉದ್ದೇಶದಿಂದ ದೇಶ–ದೇಶಗಳ ನಡುವೆ ಯುದ್ಧದ ವಾತಾವರಣ ಸೃಷ್ಟಿಸುತ್ತಿದೆ’ ಎಂದು ದೂರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.