ADVERTISEMENT

ಬಜೆಟ್ ಅನುದಾನ ಪೂರ್ಣ ವೆಚ್ಚ

​ಪ್ರಜಾವಾಣಿ ವಾರ್ತೆ
Published 15 ಜನವರಿ 2012, 19:45 IST
Last Updated 15 ಜನವರಿ 2012, 19:45 IST

ಬೆಂಗಳೂರು: ಅಲ್ಪಸಂಖ್ಯಾತರ ಕಲ್ಯಾಣ ಕಾರ್ಯಕ್ರಮಗಳಿಗಾಗಿ ಬಜೆಟ್‌ನಲ್ಲಿ ಮೀಸಲಿಟ್ಟ ಅನುದಾನದಲ್ಲಿ ಒಂದು ಪೈಸೆ ಕೂಡ ವ್ಯರ್ಥವಾಗಬಾರದು. ಈ ಅನುದಾನ ಸಮುದಾಯದ ಕಟ್ಟಕಡೆಯ ವ್ಯಕ್ತಿಯನ್ನೂ ತಲುಪಬೇಕು ಎಂದು ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಹೇಳಿದರು.

ಇಲ್ಲಿನ ತಿರುಮೇನಹಳ್ಳಿಯಲ್ಲಿ `ಹಜ್ ಘರ್~ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಅಲ್ಪಸಂಖ್ಯಾತರ ಕಲ್ಯಾಣ ಕಾರ್ಯಕ್ರಮಗಳಿಗಾಗಿ ರಾಜ್ಯ ಸರ್ಕಾರದ ಬಜೆಟ್‌ನಲ್ಲಿ ಮೀಸಲಿಡುತ್ತಿದ್ದ ಅನುದಾನದ ಮೊತ್ತವನ್ನು 50 ಕೋಟಿ ರೂಪಾಯಿಯಿಂದ ರೂ 362 ಕೋಟಿವರೆಗೆ ಬಿಜೆಪಿ ಸರ್ಕಾರ ಹೆಚ್ಚಿಸಿದೆ. ಈ ಅನುದಾನ ಸಂಪೂರ್ಣವಾಗಿ ಸದ್ಬಳಕೆಯಾಗಬೇಕು. ಅಧಿಕಾರಿಗಳು ಈ ವಿಷಯದಲ್ಲಿ ನಿರ್ಲಕ್ಷ್ಯ ವಹಿಸಬಾರದು ಎಂದರು.

ಹಜ್ ಯಾತ್ರಿಕರು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅವರಿಗೆ ಸಕಲ ಸೌಲಭ್ಯ ಕಲ್ಪಿಸುವುದು ಸರ್ಕಾರದ ಕರ್ತವ್ಯ. ಅದನ್ನು ನಿರ್ವಹಿಸುವ ಉದ್ದೇಶದಿಂದ ಈ ಕಟ್ಟಡ ನಿರ್ಮಾಣ ಯೋಜನೆ ಕೈಗೆತ್ತಿಕೊಂಡಿದ್ದು, ಕಾಲಮಿತಿಯೊಳಗೆ ಪೂರ್ಣಗೊಳಿಸಲಾಗುವುದು. ತಾವೇ ಹಣಕಾಸು ಸಚಿವರಾಗಿದ್ದು, ಸಕಾಲಕ್ಕೆ ಹಣ ಬಿಡುಗಡೆ ಮಾಡುವ ಮೂಲಕ ಪೂರ್ಣ ಸಹಕಾರ ನೀಡಲಾಗುವುದು. ಅಗತ್ಯವಿದ್ದರೆ ಇನ್ನೂ 10 ಕೋಟಿ ರೂಪಾಯಿ ಹೆಚ್ಚಿನ ಒದಗಿಸಲಾಗುವುದು ಎಂದು ಭರವಸೆ ನೀಡಿದರು.

`ನಿನ್ನ ಧರ್ಮವನ್ನು ಪ್ರೀತಿಸು ಹಾಗೂ ಇತರರ ಧರ್ಮವನ್ನು ಗೌರವಿಸು ಎಂಬ ತತ್ವದಲ್ಲಿ ನಂಬಿಕೆ ಇಟ್ಟವನು ನಾನು. ಈ ರಾಜ್ಯದ ಮುಖ್ಯಮಂತ್ರಿಯಾಗಿ ಆರೂವರೆ ಕೋಟಿ ಜನರೂ ಸುಖದಿಂದ ಇರಬೇಕು ಎಂದು ಬಯಸುತ್ತೇನೆ. ಅದೇ ರೀತಿ ಕೆಲಸ ಮಾಡುತ್ತೇನೆ. ಈಗ ನಾನು ಅಂತಹ ಸದುದ್ದೇಶದ ಕಾರ್ಯದ ಭಾಗವಾಗಿರುವುದು ಸಂತಸ ತಂದಿದೆ~ ಎಂದರು.

ರಾಜ್ಯಸಭೆಯ ಉಪ ಸಭಾಪತಿ ಕೆ.ರೆಹಮಾನ್ ಖಾನ್ ಮಾತನಾಡಿ, ಇದು ಒಂದು ಪುಣ್ಯದ ಕೆಲಸ. ಮುಸ್ಲಿಂ ಸಮುದಾಯ ಹಲವು ವರ್ಷಗಳಿಂದ ಕಂಡಿದ್ದ ಕನಸು ಈಗ ಸಾಕಾರಗೊಂಡಿದೆ. ಇಂತಹ ಯೋಜನೆಯನ್ನು ಸಮುದಾಯದ ಎಲ್ಲರೂ ಬೆಂಬಲಿಸಬೇಕು ಎಂದರು.

ಕಾರ್ಯಕ್ರಮದ ಆರಂಭದಲ್ಲಿ ಮಾತನಾಡಿದ ಅಮೀರೆ ಷರಿಯತ್ ಕರ್ನಾಟಕ ಮೌಲಾನಾ ಮುಫ್ತಿ ಅಶ್ರಫ್ ಅಲಿ ಸಾಹೇಬ್, `ಮುಖ್ಯಮಂತ್ರಿಯಾಗಿ ಸದಾನಂದ ಗೌಡ ಅವರು ಜಾತ್ಯತೀತರಾಗಿ ನಡೆದುಕೊಳ್ಳುತಿದ್ದಾರೆ. ಅವರ ಪ್ರಯತ್ನವನ್ನು ಎಲ್ಲರೂ ಗೌರವಿಸಬೇಕು~ ಎಂದು ಕರೆ ನೀಡಿದರು.

ಶಾಸಕ ಕೃಷ್ಣ ಬೈರೇಗೌಡ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಗೃಹ ಸಚಿವ ಆರ್.ಅಶೋಕ, ಸಂಸದ ಡಿ.ಬಿ.ಚಂದ್ರೇಗೌಡ, ಕೇಂದ್ರದ ಮಾಜಿ ಸಚಿವ ಸಿ.ಕೆ.ಜಾಫರ್ ಷರೀಫ್, ಶಾಸಕರಾದ ಪ್ರೊ.ಮುಮ್ತಾಜ್ ಅಲಿ ಖಾನ್, ತನ್ವೀರ್ ಸೇಠ್, ಖಮರುಲ್ ಇಸ್ಲಾಂ, ನಸೀರ್ ಅಹಮ್ಮದ್, ಬಿ.ಜೆಡ್. ಜಮೀರ್ ಅಹಮ್ಮದ್ ಖಾನ್, ಎನ್. ಎ.ಹ್ಯಾರಿಸ್, ಯು.ಟಿ.ಖಾದರ್, ರಹೀಂ ಖಾನ್, ಫಿರೋಜ್ ನೂರುದ್ದೀನ್ ಸೇಠ್, ಅಬ್ದುಲ್ ಅಜೀಂ, ಡೆರಿಕ್ ಫುಲಿನ್ ಫಾ, ರಾಜ್ಯ ಹಜ್ ಸಮಿತಿ ಅಧ್ಯಕ್ಷ ಮೊಹಮ್ಮದ್ ಗೌಸ್ ಬಾಷ ಅಶ್ರಫಿ, ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಅನ್ವರ್ ಮಾಣಿಪ್ಪಾಡಿ ಮತ್ತಿತರರು ಉಪಸ್ಥಿತರಿದ್ದರು.

3.17 ಎಕರೆಯಲ್ಲಿ ಕಟ್ಟಡ: ಯಲಹಂಕ ಹೋಬಳಿಯ ಹೆಗಡೆ ನಗರದ ಸಮೀಪದ ತಿರುಮೇನಹಳ್ಳಿಯ ಕೋಗಿಲು ರಸ್ತೆಯಲ್ಲಿ 3.17 ಎಕರೆ ವಿಸ್ತೀರ್ಣದಲ್ಲಿ `ಹಜ್ ಘರ್~ ನಿರ್ಮಾಣವಾಗಲಿದೆ. ಆರು ಅಂತಸ್ತಿನ ಈ ಕಟ್ಟಡ ನಿರ್ಮಾಣಕ್ಕೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಮೂಲಕ 40 ಕೋಟಿ ರೂಪಾಯಿ ವೆಚ್ಚ ಮಾಡಲಾಗುತ್ತಿದೆ.

ಹಜ್ ಯಾತ್ರಾರ್ಥಿಗಳಿಗಾಗಿ 100 ಕೊಠಡಿಗಳು, ಏಕಕಾಲಕ್ಕೆ ಮೂರು ಸಾವಿರ ಜನ ಪ್ರಾರ್ಥನೆ ಸಲ್ಲಿಸಲು ಅವಕಾಶವಾಗುವ ಸಭಾಂಗಣ, ಅಡುಗೆ ಮನೆ, ಊಟದ ಮನೆ ಸೇರಿದಂತೆ ಸಕಲ ಸೌಲಭ್ಯಗಳನ್ನು ಒದಗಿಸುವ ಪ್ರಸ್ತಾವ ಯೋಜನೆಯಲ್ಲಿದೆ. ಈ ಕಟ್ಟಡ ನಿರ್ಮಾಣ ಪೂರ್ಣಗೊಂಡ ಬಳಿಕ ಹಜ್ ಯಾತ್ರೆಗೆ ಸಂಬಂಧಿಸಿದ ಎಲ್ಲ ಪ್ರಕ್ರಿಯೆಗಳು ಅಲ್ಲಿಯೇ ನಡೆಯಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.